ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಪುರ
ನಾಡಿನ ಚೇತನವಾಗಿದ್ದ ಎಸ್.ಎಂ.ಕೃಷ್ಣ ರವರ ಅಗಲಿಕೆಯಿಂದ ಕರ್ನಾಟಕ ಅಮೂಲ್ಯ ಸಂಪತ್ತನ್ನು ಕಳೆದುಕೊಂಡಂತಾಗಿದೆ ಎಂದು ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.ನಗರದ ಚನ್ನಬಸಪ್ಪ ವೃತ್ತದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನಾಯಕರ ಸಮಕ್ಷಮದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಎಸ್.ಎಂ. ಕೃಷ್ಣ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಕರ್ನಾಟಕದ ಉದ್ದಾತ್ತ ರಾಜಕಾರಣಿಗಳ ಸಾಲಿನಲ್ಲಿ ನಿಲ್ಲಬಲ್ಲ ಕೆಲವೇ ಕೆಲವು ರಾಜಕಾರಣಿಗಳ ಪೈಕಿ ಒಬ್ಬರಾಗಿದ್ದ ಎಸ್ ಎಂ.ಕೆ. ಸಂಸದರಾಗಿ, ವಿದೇಶಾಂಗ ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ, ರಾಜ್ಯಾಪಾಲರಾಗಿ ಎಲ್ಲಾ ಹುದ್ದೆಗಳಿಗೂ ಘನತೆ ತಂದ ಧೀಮಂತ ರಾಜಕಾರಣಿಯಾಗಿದ್ದರು. ಯಾವುದೇ ವಿವಾದಕ್ಕೆ ಸಿಲುಕದ ಪ್ರಶ್ನಾತೀತ , ಅಜಾತಶತ್ರು ರಾಜಕಾರಣಿಯಾಗಿ ಸೇವೆ ಸಲ್ಲಿಸಿದ್ದು ಕನ್ನಡ ನಾಡಿನ ಹೆಮ್ಮೆಯ ವಿಷಯ ಎಂದರು.
ಕನಕಪುರ ತಾಲೂಕು ಕಸಾಪ ಅಧ್ಯಕ್ಷರಾದ ಶಿವನಹಳ್ಳಿ ಶಿವಲಿಂಗಯ್ಯ ಮಾತನಾಡಿ, ಎಸ್.ಎಂ.ಕೃಷ್ಣ ರವರು ಎಲ್ಲಾ ಜಾತಿ ವರ್ಗಗಳ ಏಳಿಗೆಗಾಗಿ ಶ್ರಮಿಸಿದ್ದು, ಸಾಹಿತ್ಯ ಕ್ಷೇತ್ರವನ್ನು ಪೋಷಿಸಿದ ಮಹನೀಯರಾಗಿದ್ದಾರೆ. ಇಂತಹ ಮಹನೀಯರ ಬದುಕಿನಿಂದ ಕರುನಾಡು ಕೀರ್ತಿಶಾಲಿಯಾಗಿದೆ ಎಂದರು.ಬಹುಜನ ಜಾಗೃತಿ ಜಿಲ್ಲಾಧ್ಯಕ್ಷ ನೀಲಿ ರಮೇಶ್ ಮಾತನಾಡಿ, ಕರ್ನಾಟಕದ ಅಭಿವೃದ್ಧಿ ಹರಿಕಾರ ಎಸ್.ಎಂ ಕೃಷ್ಣ ರವರ ಅಕಾಲಿಕ ಸಾವು ನಿಜಕ್ಕೂ ವಿಷಾದನೀಯ. ಇಂದು ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮೆಟ್ರೋ ಬಹುಪಾಲು ಉಪಯುಕ್ತ ಯೋಜನೆಯಾಗಿದ್ದು, ಇದರ ಯಶಸ್ಸು ಎಸ್.ಎಂ.ಕೃಷ್ಣ ಅವರಿಗೆ ಸೇರಬೇಕಾಗಿದ್ದು, ಮುಂದಿನ ನೂರು ವರ್ಷಗಳ ಮೂಲಭೂತ ಸೌಕರ್ಯಗಳನ್ನು ಯೋಜನೆಯ ಮೂಲಕ ಕಲ್ಪಿಸುವಂತಹ ದೂರದೃಷ್ಟಿಯುಳ್ಳ ನಾಯಕರಾಗಿದ್ದಾರೆ ಎಂದರು.
ನಗರಸಭಾ ಸದಸ್ಯ ಸ್ಟುಡಿಯೋ ಚಂದ್ರು, ಜೀವನ ಟ್ರಸ್ಟ್‌ನ ಪ್ರಶಾಂತ್ ಹೊಸದುರ್ಗ, ಚೀರಣಕುಪ್ಪೆ ರಾಜೇಶ್, ಮಿಲ್ಟ್ರಿರಾಮಣ್ಣ, ಮಿಲ್ಟ್ರಿ ದೇವರಾಜು, ಕಿಶೋರ್ ಬನ್ನಿಕುಪ್ಪೆ ಪ್ರಕಾಶ್, ಸೋಮಣ್ಣ, ಶಿವಕುಮಾರ್, ಉಮಾಶಂಕರ್, ಆನಂದ್, ರಮೇಶ್, ಸಾಹಿತಿ ಕೂ.ಗಿ. ಗಿರಿಯಪ್ಪ ಹಾಜರಿದ್ದರು.ಕೆ ಕೆ ಪಿ ಸುದ್ದಿ 02 ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.