ಸಾರಾಂಶ
ಕನ್ನಡಪ್ರಭ ವಾರ್ತೆ ಭದ್ರಾವತಿ:
ಸಮಾಜದ ಸೇವೆಯನ್ನು ಭ್ರಷ್ಟಾಚಾರ ರಹಿತವಾಗಿ ಪ್ರಾಮಾಣಿಕತೆಯಿಂದ ಮಾಡುವವರೇ ದೊಡ್ಡವರೆಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಶ್ರೀಗಳು ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ `ಶಿವ ವಿವಿಧೋದ್ದೇಶ ಸಹಕಾರ ಸಂಘದ ರಜತ ಮಹೋತ್ಸವ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.
ಸಹಕಾರ ಸಂಘ ೨೫ ವರ್ಷ ಪೂರೈಸಿದೆ. ಇದರ ಹಿಂದೆ ಅಧ್ಯಕ್ಷರು ಹಾಗೂ ನಿರ್ದೇಶಕರು, ಸಿಬ್ಬಂದಿ ಪರಿಶ್ರಮವಿದ್ದು, ಅಲ್ಲದೆ ಷೇರುದಾರ ಸದಸ್ಯರ ಸಹಕಾರವಿದೆ. ಸಹಕಾರ ಸಂಘಗಳು ಕೇವಲ ಲಾಭ, ಆದಾಯ ಗಳಿಸುವುದು ಮಾತ್ರ ಸಾಧನೆಯಲ್ಲ. ಬದಲಾಗಿ ಆದಾಯಕ್ಕಿಂತ ಹೆಚ್ಚಾಗಿ ಷೇರುದಾರರಿಗೆ ತಾವು ನೀಡಿರುವ ಸಾಲದಿಂದ ಆರ್ಥಿಕ ಸ್ಥಿತಿ ಸುಧಾರಿಸಿಕೊಂಡರೆ ಅದೇ ದೊಡ್ಡ ಸಾಧನೆ ಎನಿಸಿಕೊಳ್ಳುತ್ತದೆ ಎಂದರು.ಅಡಕೆ ಬೆಳೆದರೆ ಆರ್ಥಿಕ ಸುಧಾರಣೆ ಎನ್ನುವ ಮಾತು ಇಂದು ಸುಳ್ಳಾಗುತ್ತಿದೆ. ಅಡಕೆ ಬೆಳೆಯುವ ಮೂಲಕ ಆರ್ಥಿಕತೆ ಹೆಚ್ಚಿದರೂ, ಅನಾರೋಗ್ಯ ಉಲ್ಬಣಿಸುತ್ತಿರುವುದು ಆತಂಕಕಾರಿ. ತರಕಾರಿ, ಹಣ್ಣು ಹಂಪಲುಗಳು ಔಷಧಿ ಸಿಂಪಡಣೆಗಳಿಂದ ವಿಷಕಾರಿಯಾಗಿವೆ ಎನ್ನುವ ಮಾಹಿತಿ ಇದೆ. ತಾಯಿ ಮಗುವಿಗೆ ಉಣಿಸುವ ಹಾಲು ಅಮೃತಕ್ಕೆ ಸಮಾನ ಎನ್ನುತ್ತೇವೆ. ಆದರೆ, ತಾಯಿಯ ಎದೆ ಹಾಲು ವಿಷಕಾರಿಯಾಗಿದೆ ಎನ್ನುವ ಪರಿಸ್ಥಿತಿ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಸಂಘ ಆರಂಭದಿಂದ ಹಂತ ಹಂತವಾಗಿ ಬೆಳೆದು ಬಂದ ದಾರಿ, ಪಟ್ಟ ಪರಿಶ್ರಮವನ್ನು ವಿವರಿಸಿದರು.ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿಬಂಧಕ ಟಿ.ವಿ ಶ್ರೀನಿವಾಸ್, ಷೇರುದಾರರ ಆರ್ಥಿಕ ಅಭಿವೃದ್ಧಿಯ ಜೊತೆಗೆ ಸಹಕಾರಿ ಸಂಘಗಳ ಲಾಭದಲ್ಲಿ ಶೇಕಡ ೩೦ರಷ್ಟು ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿರುವುದರಿಂದ ದೇಶದ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳು ಪ್ರಮುಖ ಪಾತ್ರ ವಹಿಸಿವೆ ಎಂದರು.
ಸಂಘದ ಅಧ್ಯಕ್ಷ ಜಿ.ಎಸ್ ಸತೀಶ್ ಮಾತನಾಡಿದರು.ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಅರಕೆರೆ ಹೆಚ್. ಎಲ್. ಷಡಾಕ್ಷರಿ, ಜಿಲ್ಲಾ ಪದವೀಧರರ ಸಹಕಾರ ಸಂಘದ ಅಧ್ಯಕ್ಷ ಎಸ್. ಪಿ. ದಿನೇಶ್, ಸಂಘದ ಸಂಸ್ಥಾಪಕ ಗೌರವಾಧ್ಯಕ್ಷ ನಾಗಪ್ಪ .ಸಿ ಅಗಸೇಬಾಗಿಲು, ಜಿಲ್ಲಾ ಸಹಕಾರ ಸಂಘಗಳ ಅಭಿವೃದ್ದಿ ಅಧಿಕಾರಿ ಕೆ.ಜಿ ಶಾಂತರಾಜ್, ಸಂಘದ ಉಪಾಧ್ಯಕ್ಷ ಎಸ್.ಎನ್ ಕುಮಾರ್, ನಿರ್ದೇಶಕರಾದ ಎನ್.ಎಸ್ ಮಲ್ಲಿಕಾರ್ಜುನಯ್ಯ, ಕೆ. ತಿಮ್ಮಪ್ಪ, ಎಚ್.ಕೆ ಮಂಜುನಾಥ್, ಟಿ.ಎಚ್ ಆನಂದ್, ಕೆ.ಎಸ್ ಓಂಪ್ರಕಾಶ್, ಎಚ್ .ನಾಗರತ್ನ ಮಲ್ಲಿಕಾರ್ಜುನಯ್ಯ, ಎಚ್.ಕೆ ಲತಾ ತೀರ್ಥಪ್ಪ ಉಪಸ್ಥಿತರಿದ್ದರು.
ಜಿ.ಎಸ್ ಸತೀಶ್ ಅಧ್ಯಕ್ಷರಾಗಿ ಹಾಗೂ ಎಸ್.ಎನ್ ಕುಮಾರ್ ಉಪಾಧ್ಯಕ್ಷರಾಗಿ ೨೫ ವರ್ಷ ಪೂರೈಸಿದ ಹಿನ್ನೆಲೆ ಅಭಿನಂದಿಸಲಾಯಿತು. ಸಂಘಕ್ಕೆ ಸೇವೆ ಸಲ್ಲಿಸಿದ ಹಾಲಿ ಮತ್ತು ನಿಕಟಪೂರ್ವ ನಿರ್ದೇಶಕರುಗಳಿಗೆ ಹಾಗೂ ಸಂಘದ ಸಿಬ್ಬಂದಿ ವರ್ಗದ ಡಾ. ಬಿ.ಜಿ ಏಕಾಕ್ಷರಪ್ಪ, ಲೆಕ್ಕಿಗ ಎ.ಎಂ ಕುಮಾರ್, ಡಿ ದರ್ಜೆ ನೌಕರ ಜಿ. ಕಿರಣ್, ಪಿಗ್ಮಿ ಠೇವಣಿಕಾರರು ಸಚ್ಚಿದಾನಂದಯ್ಯ ಮತ್ತು ಜಿ.ಎಸ್ ಹರೀಶ ಹಾಗೂ ಬಸವೇಶ್ವರ ಸಭಾ ಭವನದ ಮಾಲೀಕರಾದ ಶಿವಕುಮಾರ್ ರನ್ನು ಸನ್ಮಾನಿಸಿ ಗೌರವಿಸಲಾಯಿತು.ತರಳಬಾಳು ಶಾಖಾ ಮಠದ ನಾಗರಾಜ್ ನೇತೃತ್ವದ ಸಾಣೇಹಳ್ಳಿ ಕಲಾವೃಂದ ನಡೆಸಿಕೊಟ್ಟ ಸುಗಮ ಸಂಗೀತ ಕಾರ್ಯಕ್ರಮ ಮನಸೂರೆಗೊಂಡಿತು. ಅನುಪಮಾ ಚನ್ನೇಶ್ ಮತ್ತು ಮಮತಾ ಪ್ರತಾಪ್ ಪ್ರಾರ್ಥಿಸಿದರು. ಸಂಘದ ನಿರ್ದೇಶಕರಾದ ಯಶೋಧ ವೀರಭದ್ರಪ್ಪ ಸ್ವಾಗತಿಸಿ, ಎಚ್ ಬಿ ಸಿದ್ದೇಶ್ ಮಾತನಾಡಿದರು. ಶಾಂತಾ ಆನಂದ್ ಕಾರ್ಯಕ್ರಮ ನಿರೂಪಿಸಿದರು.
------ಫೋಟೊ: ಡಿ೧೧-ಬಿಡಿವಿಟಿ೧
ಭದ್ರಾವತಿ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ `ಶಿವ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ'''' ದ ರಜತ ಮಹೋತ್ಸವ ಸಂಭ್ರಮ ಸಾಣೇಹಳ್ಳಿ ಶ್ರೀ ತರಳಬಾಳು ಶಾಖಾ ಮಠದ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.