ಸಾರಾಂಶ
ಪಾಲಾಕ್ಷ ಬಿ.
ಯಲಬುರ್ಗಾ:ಮಕ್ಕಳ ಪರಿಣಾಮಕಾರಿ ಕಲಿಕೆಗೆ ಪ್ರೋತ್ಸಾಹ, ಕಲಿಕೆಯಲ್ಲಿ ಮುಂದಿರುವ ಮಗುವಿಗೆ ಬಹುಮಾನ, ಕಲಿಕೆಗೆ ಪ್ರೇರಣೆ, ಸ್ವಂತ ಖರ್ಚಿನಲ್ಲಿ ಕಾಂಪೌಂಡ್ ಗೋಡೆ ದುರಸ್ತಿ, ಸಸಿಗಳ ಪೋಷಣೆಗಾಗಿ ಗೇಟ್ ಅಳವಡಿಕೆ...
ಹೀಗೆ ನಾನಾ ಚಟುವಟಿಕೆಗಳ ಮೂಲಕ ತಾಲೂಕಿನ ಹೊಸಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಜಯಶ್ರೀ ಬೂದಿಹಾಳ ಸದ್ದಿಲ್ಲದೆ ಸೇವೆ ಮಾಡುತ್ತಿದ್ದಾರೆ.ಜಯಶ್ರೀ ಬೂದಿಹಾಳ ಮೂಲತಃ ಯಲಬುರ್ಗಾ ನಿವಾಸಿ. ಪಟ್ಟಣದ ಸರ್ಕಾರಿ ಶಾಲೆಯಲ್ಲಿ ೧೧ ವರ್ಷ ಸೇವೆ. ಈ ಮುಂಚೆ ಹಿರೇವಂಕಲಕುಂಟಾ ಸಿಆರ್‌ಪಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಹೊಸಳ್ಳಿ ಶಾಲೆಯಲ್ಲಿ ಕಳೆದ ೧೩ ವರ್ಷದಿಂದ ನಲಿಕಲಿ ಮಕ್ಕಳಿಗೆ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳು ಒಬ್ಬರಿಗಿಂತ ಒಬ್ಬರು ಕಲಿಕೆಯಲ್ಲಿ ಮುಂದೆ ಬರಲು ಮತ್ತು ಆಸಕ್ತಿ ಹೊಂದಲು ಮೂರು ಹಂತದ ನಲಿಕಲಿ ವಿಧಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುತ್ತಿದ್ದಾರೆ. ಪ್ರತಿ ಮಗುವಿನ ವೈಯಕ್ತಿಕ ಪ್ರೊಫೈಲ್ ತಯಾರಿಸಿ, ಕಲಿಕಾಂಶಗಳ ಕುರಿತು ಫೈಲ್‌ನಲ್ಲಿ ಕಲಿಕಾ ದೃಢೀಕರಣ ವಿಧಾನ ಮಾಡಿದ್ದಾರೆ. ಈ ರೀತಿಯಾಗಿ ಮಕ್ಕಳ ಕಲಿಕೆಗೆ ಹೆಚ್ಚಿನ ಮಾರ್ಗದರ್ಶನ ನೀಡುತ್ತಿದ್ದಾರೆ. ಕಲಿಕಾ ಚಪ್ಪರ ನಿರ್ವಹಣೆ ಮಾಡಿ, ಕಲಿತ ಮಕ್ಕಳಿಂದ ಕಲಿಯದ ಮಕ್ಕಳಿಗೆ ಕಲಿಕೆ ನಡೆಯುತ್ತಿದೆ. ಕಲಿಕೆಗೆ ಸ್ಪಂದಿಸುವ ಮಗುವಿಗೆ ಕಲಿಕೆಗೆ ಪೂರಕವಾದ ಕಲಿಕಾ ಸಾಮಗ್ರಿ ಬಹುಮಾನವಾಗಿ ನೀಡುತ್ತಾರೆ. ಅವುಗಳನ್ನು ಮುಂಚಿತವಾಗಿ ತಂದು ಇಟ್ಟಿರುತ್ತಾರೆ. ಮಕ್ಕಳು ಆಸಕ್ತಿಯಿಂದ ಕಲಿಕೆಯಲ್ಲಿ ಪರಿಣಾಮಕಾರಿಯಾದಂತಹ ಪ್ರಯತ್ನ ಮಾಡಿ, ಫಲಿತಾಂಶ ಕೊಡುತ್ತಾ ಬಂದಿದ್ದಾರೆ. ಎಲ್ಲ ಮಕ್ಕಳು ಕಲಿಕೆಯಲ್ಲಿ ಆಸಕ್ತಿಯಿಂದ ತೊಡಗುವ ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ.ದಾನಿಗಳಿಂದ ಪ್ಲೆಕ್ಸ್ ಅಳವಡಿಕೆ:
ಮಕ್ಕಳ ಕಲಿಕೆಗೆ ಪೂರಕವಾಗುವ ಕಲಿಕಾಂಶಗಳ ಕುರಿತು ಪ್ಲೆಕ್ಸ್‌ಗಳನ್ನು ದಾನಿಗಳ ಸಹಾಯದಿಂದ ಶಾಲಾ ಕೊಠಡಿಯಲ್ಲಿ ಅಳವಡಿಸಲಾಗಿದೆ. ಶಿಕ್ಷಕಿ ಜಯಶ್ರೀ ಬೂದಿಹಾಳ ಅವರು ಸ್ವಂತ ಖರ್ಚಿನಲ್ಲಿ ರಜೆ ಅವಧಿಯಲ್ಲಿ ಕೂಲಿ ಕಾರ್ಮಿಕರನ್ನು ಕರೆತಂದು ಅವರಿಗೆ ಉಪಾಹಾರ ವ್ಯವಸ್ಥೆ ಮಾಡಿ, ಶಾಲಾ ಕಾಂಪೌಂಡ್ ಗೋಡೆ ದುರಸ್ತಿಗೊಳಿಸಿ, ಗೇಟ್ ಅಳವಡಿಸಿದ್ದಾರೆ. ಶಾಲಾ ಪರಿಸರ ಸ್ನೇಹಿಯಾಗಿ ನಿರ್ಮಿಸಿದ್ದಾರೆ. ಕಾಂಪೌಂಡ್ ಮತ್ತು ಶಾಲಾ ಗೋಡೆಗೆ ವಿಶ್ವಬಂಧು ಸೇವಾ ಗುರು ಬಳಗದಿಂದ ಗೋಡೆ ಬರಹ ಬರೆಯಿಸಲಾಗಿದೆ.ಪ್ರಶಸ್ತಿಗಾಗಿ ಅಲ್ಲ ಪ್ರೇರಣೆಗಾಗಿ:ನಾನು ಮಕ್ಕಳ ಕಲಿಕೆಗೆ ಸಹಕಾರ ನೀಡುತ್ತಿದ್ದೇನೆ. ಕನ್ನಡ, ಗಣಿತ, ಇಂಗ್ಲಿಷ್ ಭಾಷಾ ವಿಷಯದ ಕುರಿತು ಮನೆ ಕೆಲಸ ಕೊಡಲಾಗುತ್ತಿದೆ. ಇದಕ್ಕೆ ಎಲ್ಲ ಶಿಕ್ಷಕರ ಸಹಕಾರ ಇದೆ. ಕಳೆದ ೩೫ ವರ್ಷದಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನಲಿಕಲಿ ಮಕ್ಕಳಿಗೆ ರಾಜ್ಯ, ಜಿಲ್ಲೆ ಮತ್ತು ಬಿಇಒ ಕಚೇರಿಯಿಂದ ಪ್ರಶಸ್ತಿ ಬಂದಿದೆ. ನನಗೆ ಪ್ರಶಸ್ತಿ ಪಡೆಯುವ ಹುಚ್ಚು ಇಲ್ಲ. ಕೊಪ್ಪಳ ಜಿಲ್ಲಾ ಶಿಕ್ಷಕರ ಸಂಘದಿಂದ ನನಗೆ ಕಳೆದ ಬಾರಿ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ ನೀಡಿದ್ದಾರೆ. ಪ್ರಶಸ್ತಿಗಾಗಿ ನಾನು ಸೇವೆ ಮಾಡುವುದಿಲ್ಲ. ಮಕ್ಕಳು ಕಲಿತು ಖುಷಿ ಪಡುವುದೇ ನನಗೆ ಅದೆ ದೊಡ್ಡ ಪ್ರಶಸ್ತಿ ಎನ್ನುತ್ತಾರೆ ಜಯಶ್ರೀ ಬೂದಿಹಾಳ.