ಸರ್ಕಾರದ ಯಾವುದೇ ಬಂಡವಾಳ ಹೂಡಿಕೆ ಇಲ್ಲದೆ ಸಾವಿರಾರು ಜನರಿಗೆ ರೈತರು ಉದ್ಯೋಗ ನೀಡಿದ್ದು, ಇಲ್ಲಿನ ಕೃಷಿ ಚಟುವಟಿಕೆಗಳಿಂದ ಸರ್ಕಾರಕ್ಕೂ ಕೋಟ್ಯಂತರ ರುಪಾಯಿ ಆದಾಯ ಬರುತ್ತಿದೆ. ಇಷ್ಟೊಂದು ದೊಡ್ಡಮಟ್ಟದಲ್ಲಿ ಉದ್ಯೋಗ ನೀಡಿರುವ ಇಲ್ಲಿನ ಕೃಷಿ ವಲಯವನ್ನು ನಾಶ ಮಾಡುವ ಮೂಲಕ ಈ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗಲಿದೆ.
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಕೃಷಿ ಭೂಮಿಯನ್ನು ಕೈಗಾರಿಕೆಗೆ ಸ್ವಾಧೀನ ಮಾಡಿಕೊಳ್ಳುವುದರಿಂದ ಉದ್ಯೋಗ ಸೃಷ್ಟಿಗಿಂತಲೂ ಸಾವಿರಾರು ಜನ ಉದ್ಯೋಗ ವಂಚಿತರಾಗಲಿದ್ದಾರೆ ಎಂದು ಟಿಎಪಿಸಿಎಂಎಸ್ ನಿರ್ದೇಶಕ ಆರ್. ಗೋವಿಂದರಾಜ್ ಆರೋಪಿಸಿದರು.ಅವರು ತಾಲೂಕಿನ ದೊಡ್ಡಬೆಳವಂಗಲದಲ್ಲಿ ಧರಣಿ ಸತ್ಯಾಗ್ರಹ ಸ್ಥಳದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಭೂಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ಐದು ಗ್ರಾಮಗಳು ಸೇರಿದಂತೆ ಈ ಭಾಗದ ಬಹುತೇಕ ರೈತರು ಹೈನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಕೊಳವೆ ಬಾವಿ ಕೊರೆಸಿಕೊಂಡು ಹಣ್ಣು, ತರಕಾರಿ ಬೆಳೆ ಬೆಳೆಯುತ್ತಿದ್ದಾರೆ. ಇಂತಹ ಸಮೃದ್ಧ ಪ್ರದೇಶದಲ್ಲಿನ ಫಲವತ್ತಾದ ಭೂಮಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವುದರಿಂದ ಕೆಲವೇ ಜನ ವಿದ್ಯಾವಂತರಿಗಷ್ಟೇ ಉದ್ಯೋಗ ದೊರೆಯುತ್ತದೆ. ಆದರೆ, ಈಗ ಇಲ್ಲಿ ಸ್ವಾಧೀನಕ್ಕೆ ಒಳಪಡುತ್ತಿರುವ 2,100 ಎಕರೆ ಪ್ರದೇಶದಲ್ಲಿನ ಅಡಿಕೆ, ತೆಂಗು, ಬಾಳೆ, ವಿವಿಧ ರೀತಿಯ ಹೂವು ಬೆಳೆ, ರಾಸುಗಳಿಗೆ ಮೇವು ಬೆಳೆಯುತ್ತಿರುವ ಜಮೀನು, ಕುರಿ, ಕೋಳಿ, ಹಸು ಸಾಕಾಣಿಕೆಯಿಂದ ಸ್ಥಳೀಯರಷ್ಟೇ ಅಲ್ಲದೆ ಉತ್ತರ ಭಾರತದ ಸಾವಿರಾರು ಜನ ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡಿದ್ದಾರೆ ಎಂದರು.ಸರ್ಕಾರದ ಯಾವುದೇ ಬಂಡವಾಳ ಹೂಡಿಕೆ ಇಲ್ಲದೆ ಸಾವಿರಾರು ಜನರಿಗೆ ರೈತರು ಉದ್ಯೋಗ ನೀಡಿದ್ದು, ಇಲ್ಲಿನ ಕೃಷಿ ಚಟುವಟಿಕೆಗಳಿಂದ ಸರ್ಕಾರಕ್ಕೂ ಕೋಟ್ಯಂತರ ರುಪಾಯಿ ಆದಾಯ ಬರುತ್ತಿದೆ. ಇಷ್ಟೊಂದು ದೊಡ್ಡಮಟ್ಟದಲ್ಲಿ ಉದ್ಯೋಗ ನೀಡಿರುವ ಇಲ್ಲಿನ ಕೃಷಿ ವಲಯವನ್ನು ನಾಶ ಮಾಡುವ ಮೂಲಕ ಈ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗಲಿದೆ. ಆದರೆ, ಅಭಿವೃದ್ಧಿಗೊಂಡಿರುವ ಫಲವತ್ತಾದ ಕೃಷಿ ಭೂಮಿಗಿಂತಲೂ ಪಾಳು ಬಿದ್ದಿರುವ ಭೂಮಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಬೇಕು ಎಂದರು.
ಹೋರಾಟ ಸಮಿತಿ ಮಾರ್ಗದರ್ಶಕರಾದ ಪ್ರಭಾ ಬೆಳವಂಗಲ ಮಾತನಾಡಿ, ನಮ್ಮ ಗ್ರಾಮಗಳು ಹೊರವರ್ತುಲ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಇರುವುದೇ ದೊಡ್ಡ ಶಾಪವಾಗಿ ಪರಿಣಮಿಸಿದೆ. ಹೆದ್ದಾರಿಗಳ ನಿರ್ಮಾಣದಿಂದ ಜನರ ಆರ್ಥಿಕ ಬದುಕು ಸುಧಾರಿಸಲಿದೆ ಎನ್ನುವ ಕನಸು ಕಮರಿ ಹೋಗಿದೆ. ದೊಡ್ಡ ಉದ್ಯಮಗಳು, ಬಂಡವಾಳಶಾಹಿಗಳು ಹೆದ್ದಾರಿ ಬದಿಯಲ್ಲಿ ಭೂಮಿ ಕಬಳಿಸುವ ಹುನ್ನಾರಕ್ಕೆ ಬೆಂಬಲವಾಗಿ ಸರ್ಕಾರ, ಕೈಗಾರಿಕೆ ನೆಪದಲ್ಲಿ ಸರ್ಕಾರ ಭೂಸ್ವಾಧೀನದ ನಾಟಕ ಮಾಡುತ್ತಿದೆ. ಈ ಕಳ್ಳಾಟ ಬದಿಗಿಟ್ಟು ರೈತರ ಹಿತಾಸಕ್ತಿಗೆ ಪ್ರಥಮ ಆದ್ಯತೆ ನೀಡಬೇಕು. ನಮ್ಮ ಪ್ರಾಣ ತೆತ್ತಾದರೂ ಸರಿ ನಮ್ಮ ಪೂರ್ವಜರು ಉಳಿಸಿಕೊಂಡು ಬದುಕು ಕಟ್ಟಿಕೊಂಡಿರುವ ಭೂಮಿ ಉಳಿಸಿಕೊಳ್ಳಲು ಶಕ್ತಿ ಮೀರಿ ಹೋರಾಟ ನಡೆಸಲಾಗುವುದು ಎಂದರು.ರಾತ್ರಿ ವೇಳೆ ಡ್ರೋಣ್ ಮೂಲಕ ಭೂಸ್ವಾಧೀನಕ್ಕೆ ಒಳಪಡುವ ಪ್ರದೇಶಗಳಲ್ಲಿ ಸರ್ವೇ ನಡೆಸಲಾಗುತ್ತಿದೆ. ನಮ್ಮದು ತೋರಿಕೆ ಹೋರಾಟವಲ್ಲ. ಸರ್ಕಾರ ಇದನ್ನು ಲಘುವಾಗಿ ಪರಿಗಣಿಸಬಾರದು. ಇದು ಗಂಭೀರವಾದ, ಜವಾಬ್ದಾರಿಯುತ ಹೋರಾಟವಾಗಿದೆ. ಈ ಭಾಗದ ಎಲ್ಲ ರೈತರು, ಸಂಘಟನೆಗಳು ಬೆಂಬಲ ನೀಡಿದ್ದು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಎಂದರು.
ಜಿಲ್ಲಾಧಿಕಾರಿ ಕಚೇರಿಗೆ ಟ್ರ್ಯಾಕ್ಟರ್ ರ್‍ಯಾಲಿ:ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಸಿ.ಶಶಿಧರ್ ಮಾತನಾಡಿ, ಹೋರಾಟವನ್ನು ಜಿಲ್ಲಾಮಟ್ಟಕ್ಕೆ ಕೊಂಡೊಯ್ಯುವ ಸಲುವಾಗಿ ಮೇ 21ರಂದು ಬೆಳಗ್ಗೆ 9ಕ್ಕೆ ದೊಡ್ಡಬೆಳವಂಗಲದ ಧರಣಿ ಸತ್ಯಾಗ್ರಹ ಸ್ಥಳದಿಂದ ಭೂಸ್ವಾಧೀನಕ್ಕೆ ಒಳಪಡುವ ಗ್ರಾಮಗಳ ನೂರಾರು ರೈತರು ಟ್ರ್ಯಾಕ್ಟರ್‌ಗಳ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ರ್‍ಯಾಲಿ ನಡೆಸಲಾಗುವುದು ಎಂದರು.
ಒಂದೂವರೆ ತಿಂಗಳಿಂದಲೂ ರೈತರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವುದರ ಜತೆಗೆ ಭೂಸ್ವಾಧೀನದಿಂದ ಆಗಲಿರುವ ತೊಂದರೆ ಬಗ್ಗೆಯೂ ಈ ಭಾಗದ ಗ್ರಾಮಗಳಲ್ಲಿ ಸಭೆ ನಡೆಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಟ್ರ್ಯಾಕ್ಟರ್ ರ್‍ಯಾಲಿ ಬೆಂಬಲಿಸುವ ಹಾಗೂ ಸಕ್ರಿಯವಾಗಿ ಭಾಗವಹಿಸುವಂತೆ ತಾಲೂಕಿನ ರೈತಪರ, ಕನ್ನಡಪರ, ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು, ಜಿಲ್ಲೆಯ ಮಠಾಧೀಶರು, ಹಿರಿಯ ಮುಖಂಡರು ಹಾಗೂ ಸಾರ್ವಜನಿಕರನ್ನು ಭೂಸ್ವಾಧೀನ ಹೋರಾಟ ಸಮಿತಿ ವತಿಯಿಂದ ಭೇಟಿ ಮಾಡಿ ಆಹ್ವಾನಿಸಲಾಗಿದೆ ಎಂದರು.ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಎಸ್. ಸುನಿಲ್‌ಕುಮಾರ್, ಉಪಾಧ್ಯಕ್ಷ ಸಿ.ಆರ್. ತಿಮ್ಮೇಗೌಡ, ಪ್ರಧಾನ ಕಾರ್ಯದರ್ಶಿ ಸಿ.ಎಚ್.ರಾಮಕೃಷ್ಣಯ್ಯ, ಖಜಾಂಜಿ ಸಿ.ಎಸ್.ಧರ್ಮೇಂದ್ರ, ಕಾನೂನು ಸಲಹೆಗಾರ ಕೇಶವ ಕುಮಾರ್, ರಮೇಶ್, ಸಿ.ಡಿ.ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.