ಸಾರಾಂಶ
ಶಿರಹಟ್ಟಿ: ಬಡವರ, ದೀನ ದಲಿತರ ಶೋಷಿತರ ಮಹಿಳೆಯರ ಏಳಿಗೆಗೆ ಪಂಚ ಗ್ಯಾರಂಟಿ ಯೋಜನೆ ಸಹಕಾರಿಯಾಗಿದೆ. ಸರ್ಕಾರ ಪಂಚ ಗ್ಯಾರಂಟಿ ಮೂಲಕ ಬಡವರ ಬದುಕು ಹಸನು ಮಾಡಿದೆ ಎಂದು ಕಾನೂನು ಹಾಗೂ ಸಂಸದೀಯ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಪಪಂ ವ್ಯಾಪ್ತಿಯ ೧೬ನೇ ವಾರ್ಡ್‌ನಲ್ಲಿ ೨೦೨೩-೨೪ನೇ ಸಾಲಿನ ಅಲ್ಪಸಂಖ್ಯಾತರ ಕಾಲನಿ ಅಭಿವೃದ್ಧಿ ಯೋಜನೆಯಡಿ ₹೩ ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶನಿವಾರ ಸಂಜೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ದೇಶದಲ್ಲಿಯೇ ಪಂಚ ಗ್ಯಾರಂಟಿ ಯೋಜನೆ ಮಾದರಿಯಾಗಿವೆ ಎಂದರು.ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಿಂದ ಅಸಹಾಯಕ ದುರ್ಬಲ ವರ್ಗದವರಿಂದ ಹಿಡಿದು ಎಲ್ಲ ವರ್ಗದವರಿಗೂ ಅನುಕೂಲವಾಗಿದೆ. ಪಡಿತರ ವಿತರಣಾ ವ್ಯವಸ್ಥೆ ಸಂಪೂರ್ಣವಾಗಿ ಗಣಕೀಕರಣದಡಿ ಪಡಿತರ ಚೀಟಿದಾರರ ಜತೆಗೆ ಪ್ರತಿ ಫಲಾನುಭವಿಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿ ಬ್ಯಾಂಕ್ ಖಾತೆಯ ಮುಖಾಂತರ ಹಣ ನೀಡಲಾಗುತ್ತಿದೆ. ಮಹಿಳಾ ಸಬಲೀಕರಣಕ್ಕೆ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಎಲ್ಲ ವರ್ಗದ ಕುಟುಂಬಗಳಿಗೆ ಗೃಹ ಜ್ಯೋತಿ ಯೋಜನೆಯಡಿ ವಿದ್ಯುತ್ ಸೌಲಭ್ಯ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪಂಚ ಗ್ಯಾರಂಟಿ ಯೋಜನೆ ಮೂಲಕ ₹೧ ಕೋಟಿ ಕುಟುಂಬ ಬಡತನದಿಂದ ಮೇಲೆತ್ತುವ ಕೆಲಸ ಸಿದ್ದರಾಮ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡಿದೆ. ಕಳೆದ ೨೦೧೩ರಲ್ಲಿಯೇ ಹಸಿವು ಮುಕ್ತ ರಾಜ್ಯ ಮಾಡುವ ಸಂಕಲ್ಪ ಕೈಗೊಂಡಂತೆ ಇದೀಗ ಪಂಚ ಗ್ಯಾರಂಟಿಗಳ ಮೂಲಕ ನೆಮ್ಮದಿ ರಾಜ್ಯ ಮಾಡಿದ್ದೇವೆ. ಬಡವರ ಬದುಕಿನ ಗುಣಮಟ್ಟ ಎತ್ತರಕ್ಕೇರಬೇಕು. ಎಲ್ಲ ವರ್ಗದ ಜನರ ಅಭಿವೃದ್ಧಿಯಾಬೇಕು. ಅಂದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ರಾಜ್ಯದಲ್ಲಿ ನಮ್ಮ ಸರ್ಕಾರ ಆಡಳಿತಕ್ಕೆ ಬಂದ ನಂತರ ಭ್ರಷ್ಟಾಚಾರ ಕಡಿಮೆಯಾಗಿದೆ. ಮಧ್ಯವರ್ತಿಗಳ, ದಲ್ಲಾಳಿಗಳ ಹಾವಳಿ ಇಲ್ಲದೇ ನೇರವಾಗಿ ಜನರ ಖಾತೆಗೆ ಹಣ ಹಾಕಲಾಗುತ್ತಿದೆ ಎಂದರು.ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ: ಶಿರಹಟ್ಟಿ ಪಟ್ಟಣಕ್ಕೆ ಇದೇ ಮೊದಲ ಬಾರಿ ಅಲ್ಪಸಂಖ್ಯಾರ ಕಾಲನಿ ಯೋಜನೆಯಡಿ ರಸ್ತೆ ಅಭಿವೃದ್ಧಿಗಾಗಿ ₹೩ ಕೋಟಿ ಅನುದಾನ ಬಿಡುಗಡೆಯಾಗಿದೆ. ಗುತ್ತಿಗೆದಾರರು ದೀರ್ಘ ಬಾಳಿಕೆ ಬರುವಂತೆ ಗುಣಮಟ್ಟದ ಕೆಲಸ ಮಾಡಬೇಕು. ಅವಧಿಯೊಳಗೆ ಕಾಮಗಾರಿ ಮುಗಿಸಿ ಜನರ ಬಳಕೆಗೆ ನೀಡಬೇಕು. ಕಳಪೆ ಕಾಮಗಾರಿ ಮಾಡಿದ್ದು ಕಂಡುಬಂದರೆ ಗುತ್ತಿಗೆದಾರರನ್ನೇ ಹೊಣೆಗಾರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಶಿರಹಟ್ಟಿಯ ಫಕೀರೇಶ್ವರ ಮಠ ದೇಶಕ್ಕೆ ಮಾದರಿಯಾಗಿದೆ. ಹಿಂದು ಮುಸ್ಲಿಂ ಭಾವೈಕ್ಯತೆಗೆ ಹೆಸರಾದ ಫಕೀರೇಶ್ವರ ಮಠವು ನಾಡಿನುದ್ದಕ್ಕೂ ಬ್ರಾತೃತ್ವ ಸಂದೇಶ ಬೀರುತ್ತಿದೆ. ಮಠದ ಸಂದೇಶದಂತೆ ಎಲ್ಲರೂ ಭಾವೈಕ್ಯತೆಯಿಂದ ಬಾಳಬೇಕು. ಅಂದಾಗ ಮಾತ್ರ ಶಾಂತಿ, ನೆಮ್ಮದಿ ಸಿಗಲು ಸಾಧ್ಯ ಎಂದು ಹೇಳಿದರು.ಶಾಸಕ ಚಂದ್ರು ಲಮಾಣಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ್ ಮಾಗಡಿ, ಮಂಜುನಾಥ ಘಂಟಿ ಮಾತನಾಡಿದರು.
ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ಉಪಾಧ್ಯಕ್ಷೆ ನೀಲವ್ವ ಹುಬ್ಬಳ್ಳಿ, ಸಿದ್ದರಾಯ ಕಟ್ಟಿಮನಿ, ಗುರುನಾಥ ದಾನಪ್ಪನವರ, ಮಹೇಂದ್ರ ಮುಂಡವಾಡ, ಮೈಲಾರೆಪ್ಪ ಹಾದಿಮನಿ, ಚಾಂದಸಾಬ್ ಮುಳಗುಂದ, ಡಿ.ಕೆ. ಹೊನ್ನಪ್ಪನವರ, ಶಿವನಗೌಡ ಪಾಟೀಲ, ದೇವಪ್ಪ ಲಮಾಣಿ, ಪರಮೇಶ ಪರಬ, ಅಜ್ಜು ಪಾಟೀಲ, ತಿಪ್ಪಣ್ಣ ಸಂಶಿ, ಲಕ್ಷ್ಮಣಗೌಡ ಪಾಟೀಲ, ಇಸಾಕ ಆದ್ರಳ್ಳಿ, ಹಸರತ ಢಾಲಾಯತ, ಎಸ್.ಡಿ. ಮಕಾನದಾರ, ಬಿ.ಡಿ. ಪಲ್ಲೇದ, ಸೋಮನಗೌಡ ಮರಿಗೌಡ್ರ, ಮಾಬೂಸಾಬ್ ಲಕ್ಷ್ಮೇಶ್ವರ ಇದ್ದರು.