ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಜಗತ್ತಿನ ಯಾವ ಧರ್ಮಕ್ಕೂ ಇರದಷ್ಟು ಇತಿಹಾಸ ರೈತ ಸಮುದಾಯಕ್ಕಿದೆ. ಪ್ರತಿಯೊಂದು ಸಂಸ್ಕೃತಿಯ ರಚನೆಗೂ ರೈತರ ಸಂಸ್ಕೃತಿಯೇ ಮೂಲವಾಗಿದೆ ಎಂದು ಕವಿ ರಂಜಾನ್ ದರ್ಗಾ ಹೇಳಿದರು.ನಗರದ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ‘ಕಲಾಸಂಸ್ಕೃತಿ '''''''' ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿರುವ ಶಿಕ್ಷಣ ಸಂಸ್ಥೆಗಳು ಮತ್ತು ಮಠಗಳು ರೈತರಿಲ್ಲದೆ ಎತ್ತರ ಬೆಳೆಯುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ರೈತ ಸಂಸ್ಕೃತಿಯಲ್ಲಿ ಯಾರನ್ನೂ ಬೇಡಿ ಅಭ್ಯಾಸವಿಲ್ಲ, ನೀಡಿಯೇ ಅಭ್ಯಾಸ. ಇದು ದುಡಿಯುವ ಜನರ ನಿಷ್ಠೆ ಎಂಬ ಸೂಕ್ಷ್ಮತೆಯನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ತಿಳಿಸಿದರು.ಶರಣ ಸಂಸ್ಕೃತಿಯ ಮೂಲವೂ ಕೂಡ ರೈತಾಪಿ ಸಂಸ್ಕೃತಿ ಆಗಿದೆ. ಇಂದು ನಮ್ಮ ನಡುವೆ ಜೀವರಾಶಿಯನ್ನು ಜಾಲಾಡುವ ಸಂಸ್ಕೃತಿ ಬೇರೂರಿದೆ. ಪಂಚ ಮಹಾಮೂಲಗಳನ್ನು ಮಲಿನಗೊಳಿಸಿದ್ದೇವೆ. ಬಸವಣ್ಣನವರು ಹೇಳಿರುವ ಮನುಷ್ಯ ಸಂಸ್ಕೃತಿಯ ವಿರುದ್ಧವಾಗಿ ಮಾನವ ಇಂದು ನಡೆದುಕೊಳ್ಳುತ್ತಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದರು.
ಶ್ರೀ ಕ್ಷೇತ್ರ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗುರುವೆಂದರೆ ಗುಲಾಮಗಿರಿಯ ವಿರುದ್ಧ ಆಂದೋಲನ ನಡೆಸುವವನು. ಗುಲಾಮಗಿರಿಯನ್ನು ವಿರೋಧಿಸಿ ಹೋರಾಡುವವನು. ಗುರುವಿನ ಗುಲಾಮನಾಗುವುದು ನಮ್ಮ ಶರಣ ಸಂಸ್ಕೃತಿಯಲ್ಲ. ನಿಜವಾದ ಗುಲಾಮಗಿರಿಯಿಂದ ಬೆಳಕಿನೆಡೆಗೆ ಬರಬೇಕಾದರೆ ಅಜ್ಞಾನವೆಂಬ ಕತ್ತಲೆಯಿಂದ ದೂರ ಸರಿಯಬೇಕು. ವಿದ್ಯೆ, ವಿನಯ, ಸಮಯ ಪ್ರಜ್ಞೆಯು ಜೀವನದ ಹಾದಿಯನ್ನು ಉನ್ನತ ಮಟ್ಟಕ್ಕೇರಿಸುತ್ತದೆ ಎಂದು ಹೇಳಿದರು.ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ ಮಾತನಾಡಿ, ವಿದ್ಯಾರ್ಥಿಗಳಿಗೆ ವಿದ್ವಾಂಸರನ್ನು ಪರಿಚಯಿಸುವ ದೃಷ್ಟಿಯಿಂದ ಉತ್ತಮ ವೇದಿಕೆಗಳನ್ನು ಸೃಷ್ಟಿಸುವ ಕಾರ್ಯ ಮಾಡುತ್ತಿದ್ದೇವೆ. ಬದುಕುವ ಕಲೆಯನ್ನು ಶಿಕ್ಷಣ ಜ್ಞಾನ ಮತ್ತು ಸಂಸ್ಕೃತಿಯ ಮೂಲಕ ಕಲಿಯಬೇಕಾಗಿದೆ ಎಂದು ಹೇಳಿದರು.
ಡಮರುಗ ರಂಗ ಸಂಪನ್ಮೂಲ ಕೇಂದ್ರದ ಮೆಳೇಹಳ್ಳಿ ದೇವರಾಜು ಮತ್ತು ಸಂಗಡಿಗರಿಂದ ಕುವೆಂಪು ವಿರಚಿತ ‘ಶೂದ್ರ ತಪಸ್ವಿ’ ನಾಟಕ ಪ್ರದರ್ಶಿಸಲಾಯಿತು.ತುಮಕೂರು ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ನರಸಿಂಹಮೂರ್ತಿ., ಕಾರ್ಯಪಾಲಕ ಅಭಿಯಂತರರಾದ ಸುರೇಶ್ ಜಿ. ಆರ್., ರಂಗಕರ್ಮಿ ದೇವರಾಜು ವಿವಿ ಕಲಾ ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಸಂಯೋಜಕ ಡಾ. ರವಿ ಸಿ. ಎಂ. ಉಪಸ್ಥಿತರಿದ್ದರು.