ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪೌರಕಾರ್ಮಿಕರ ಶ್ರಮ ಸ್ಮರಣೀಯ

| Published : Jan 08 2025, 12:17 AM IST

ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪೌರಕಾರ್ಮಿಕರ ಶ್ರಮ ಸ್ಮರಣೀಯ
Share this Article
  • FB
  • TW
  • Linkdin
  • Email

ಸಾರಾಂಶ

ಬೀರೂರು, ಪಟ್ಟಣದ ನೈರ್ಮಲ್ಯ ಕಾಪಾಡಿ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಪೌರಕಾರ್ಮಿಕರ ಶ್ರಮ ಸ್ಮರಣೀಯ. ವೈಯುಕ್ತಿಕ ಆರೋಗ್ಯವನ್ನು ಗಮನಿಸದೆ ಕೆಲಸ ಮಾಡುವ ತ್ಯಾಗಜೀವಿಗಳು ಎಂದು ಪುರಸಭೆ ಅಧ್ಯಕ್ಷೆ ವನಿತಾಮಧು ಬಾವಿಮನೆ ಹೇಳಿದರು.

ಪೌರಕಾರ್ಮಿಕರ ದಿನಾಚರಣೆಯಲ್ಲಿ : ಪುರಸಭಾ ಅಧ್ಯಕ್ಷೆ ವನಿತಾ ಮಧುಬಾವಿಮನೆ । ಸುರಕ್ಷತಾಧಿರಿಸುಗಳ ವಿತರಣೆ

ಕನ್ನಡಪ್ರಭ ವಾರ್ತೆ, ಬೀರೂರು

ಪಟ್ಟಣದ ನೈರ್ಮಲ್ಯ ಕಾಪಾಡಿ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಪೌರಕಾರ್ಮಿಕರ ಶ್ರಮ ಸ್ಮರಣೀಯ. ವೈಯುಕ್ತಿಕ ಆರೋಗ್ಯವನ್ನು ಗಮನಿಸದೆ ಕೆಲಸ ಮಾಡುವ ತ್ಯಾಗಜೀವಿಗಳು ಎಂದು ಪುರಸಭೆ ಅಧ್ಯಕ್ಷೆ ವನಿತಾಮಧು ಬಾವಿಮನೆ ಹೇಳಿದರು.ಪುರಸಭಾ ಕಚೇರಿ ಹಿಂಭಾಗ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸಂಘ ಹಾಗೂ ಬೀರೂರು ಶಾಖಾ ಸಂಘದಿಂದ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ದೇಶದ ರಕ್ಷಣೆಗೆ ಸೈನಿಕರು ಎಷ್ಟು ಮುಖ್ಯವೋ, ನಮ್ಮ ಸುತ್ತಮುತ್ತಲಿನ ಪ್ರದೇಶದ ಸ್ವಚ್ಛತೆಗೆ ಪೌರಕಾರ್ಮಿಕರು ಅಷ್ಟೆ ಮುಖ್ಯ. ಅವರು ತಮ್ಮ ಹಕ್ಕು , ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ತಿಳಿದು ಕಾರ್ಯನಿರ್ವಹಿಸಬೇಕು. ವ್ಯಕ್ತಿ ಗೌರವಕ್ಕೆ ಚ್ಯುತಿ ಬಾರದಂತೆ ಕಾಳಜಿ ವಹಿಸ ಬೇಕೆಂದರು.

ರೋಗ ರುಜಿನಗಳಿಂದ ಸಾರ್ವಜನಿಕರನ್ನು ದೂರವಿಡುವ ಪೌರಕಾರ್ಮಿಕರಿಗೆ ಸಾರ್ವಜನಿಕರು ಗೌರವ ನೀಡಬೇಕು. ಅವರ ಸೇವೆ ಸಮಾಜಕ್ಕೆ ಅಗತ್ಯ. ಪೌರಕಾರ್ಮಿಕರ ಆರೋಗ್ಯ ಕಾಪಾಡಲು ಪುರಸಭೆ ಸದಾ ಸಿದ್ಧವಾಗಿದ್ದು ಈಗಾಗಲೇ ನೀಡಿರುವ ಸಲಕರಣೆಗಳನ್ನು ಕಡ್ಡಾಯವಾಗಿ ಬಳಸಿ ಕೆಲಸ ಮಾಡಬೇಕೆಂದರು.

ಪುರಸಭೆ ಸದಸ್ಯ ಬಿ.ಕೆ.ಶಶಿಧರ್ ಮಾತನಾಡಿ, ಸೆ.23ರಂದು ನಡೆಯಬೇಕಿದ್ದ ದಿನಾಚರಣೆ ಹಲವು ಅಡೆತಡೆಗಳ ನಡುವೆ ಇಂದು ನೇರವೇರುತ್ತಿರುವುದು ಸಂತಸ ತಂದಿದೆ. ಭಿನ್ನಭಿಪ್ರಾಯ ಬದಿಗಿಟ್ಟು ನಾವೆಲ್ಲ ಒಂದೆ ಎನ್ನುವ ಮನೋಭಾವ ಬರ ಬೇಕು. ಸರ್ಕಾರ ಪೌರ ಕಾರ್ಮಿಕರ ದಿನಾಚರಣೆಗೆ ಅವಕಾಶ ಕಲ್ಪಿಸಿ ಶ್ರಮಿಕ ವರ್ಗದ ಮನಸ್ಸುಗಳಿಗೆ ಚೈತನ್ಯ ತುಂಬುವಲ್ಲಿ ನೆರವಾಗಿದೆ ಎಂದರು. ಪುರಸಭೆ ಸದಸ್ಯ ಬಿ.ಆರ್.ಮೋಹನ್ ಕುಮಾರ್ ಮಾತನಾಡಿ, ಯಾರು ಮಾಡದ ಕಾಯಕವನ್ನು ಶ್ರದ್ಧೆಯಿಂದ ಮಾಡುವ ಮೂಲಕ ನಗರದ ಸ್ವಚ್ಛತೆ ಮತ್ತು ಜನರ ಆರೋಗ್ಯ ಕಾಪಾಡಲು ಪೌರಕಾರ್ಮಿಕರು ಕಾರಣ. ವರ್ಷದಲ್ಲಿ ಒಂದು ದಿನವೂ ವಿಶ್ರಮಿಸದೆ ಪಟ್ಟಣದ ಸ್ವಚ್ಛತೆಯೊಂದಿಗೆ ಸದಾ ಜನರ ಆರೋಗ್ಯಕ್ಕೆ ಶ್ರಮಿಸುವ ಪೌರಕಾರ್ಮಿಕರು ವೃತ್ತಿ ಜೀವನದಲ್ಲಿ ಎಲ್ಲಾ ಕನಸುಗಳನ್ನು ಬದಿಗೊತ್ತಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಾರೆ. ಪೌರಕಾರ್ಮಿಕರು ಊರಿನ ಸ್ವಚ್ಛತೆ ಕಾಪಾಡುವ ಜೊತೆ ತಮ್ಮ ಕುಟುಂಬದ ಆರೋಗ್ಯ ಕಾಪಾಡುವುದರಲ್ಲೂ ಎಚ್ಚರ ವಹಿಸಬೇಕು ಎಂದರು. ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಮಾತನಾಡಿ, ಕೋವಿಡ್ 19 ಸಂದರ್ಭದಲ್ಲಿ ಪೌರ ಕಾರ್ಮಿಕರು ತಮ್ಮ ಆರೋಗ್ಯ ಲೆಕ್ಕಿಸದೆ ನಿರಂತರ ಶ್ರಮಿಸಿದ್ದಾರೆ. ಅವರ ಸೇವೆ ಸಮಾಜಕ್ಕೆ ಅಗತ್ಯ. ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಅಗತ್ಯ ಎಂದರು. ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್ ಮಾತನಾಡಿ, ಪಟ್ಟಣದ ಪೌರಕಾರ್ಮಿಕರಿಗೆ ಎಲ್ಲಾ ಸೌಲಭ್ಯವನ್ನು ಇಲಾಖೆಯಿಂದ ನಿಗದಿತ ಸಮಯಕ್ಕೆ ನೀಡಲಾಗುತ್ತಿದೆ. ಆರೋಗ್ಯ ತಪಾಸಣಿ, ರಕ್ಷಣಾ ಪರಿಕರ ವಿತರಣೆ ಹಾಗೂ ಇನ್ನಿತರ ಸೌಲಭ್ಯ ಒದಗಿಸಲಾಗಿದೆ. ಪೌರಕಾರ್ಮಿಕರಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವ ಮೂಲಕ ಮಾನಸಿಕವಾಗಿ ಸಹ ಕ್ರಿಯಾಶೀಲರಾಗಲು ಪ್ರೇರೇಪಿಸಲಾಗಿದೆ ಎಂದರು.ಸಂಘದ ಅಧ್ಯಕ್ಷ ವೈ.ಎಂ ಲಕ್ಷ್ಮಣ್ ಪೌರಕಾರ್ಮಿಕರಿಗೆ ಬೇಡಿಕೆಗಳ ಬಗ್ಗೆ ಭಿನ್ನವತ್ತಳೆಯನ್ನು ಅಧ್ಯಕ್ಷರಿಗೆ ಸಲ್ಲಿಸಿದರು. ಉಪಾಧ್ಯಕ್ಷ ಎನ್.ಎಂ.ನಾಗರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಲಕ್ಷ್ಮಣ್, ಪುರಸಭೆ ಸದಸ್ಯ ಎಂ.ಪಿ.ಸುದರ್ಶನ್, ಜಿಮ್ ರಾಜು, ಸಂಘದ ಉಪಾಧ್ಯಕ್ಷ ಮಲ್ಲೇಶ್, ಪೌರಕಾರ್ಮಿರ ಜಯಂತಿ ಅಂಗವಾಗಿ ನಡೆಸಲಾಗಿದ್ದ ವಿವಿಧ ಆಟೋಟ ಸ್ಪರ್ಧೆಯಲ್ಲಿ ಜಯಶೀಲರಾದವರಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಮಾಣಿಕ್ ಭಾಷ, ಮಾಜಿ ಉಪಾಧ್ಯಕ್ಷೆ ಮೀನಾಕ್ಷಮ್ಮ, ಗಂಗಾಧರ್, ಸಹನಾ ವೆಂಕಟೇಶ್, ಜ್ಯೋತಿ ಕುಮಾರ್, ಸುಮಿತ್ರಾ ಕೃಷ್ಣಮೂರ್ತಿ, ಶಾರದ ರುದ್ರಪ್ಪ, ಭಾಗ್ಯ ಮೋಹನ್, ಸಂಘದ ಖಜಾಂಚಿ ಗಿರಿರಾಜ್, ದೀಪಕ್, ಜಯಮ್ಮ, ಸೇರಿದಂತೆ ಪುರಸಭೆ ಸಿಬ್ಬಂದಿ ಮತ್ತು ಪೌರಕಾರ್ಮಿಕರು ಇದ್ದರು7 ಬೀರೂರು 1ಬೀರೂರಿನ ಪುರಸಭಾ ಕಚೇರಿ ಹಿಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರನ್ನು ಪುರಸಭೆಯಿಂದ ಗೌರವಿಸಲಾಯಿತು. ಪುರಸಭೆ ಅಧ್ಯಕ್ಷೆ ವನಿತಾಮಧು ಬಾವಿಮನೆ, ಮುಖ್ಯಾಧಿಕಾರಿ ಪ್ರಕಾಶ್, ವೈ.ಎಂ.ಲಕ್ಷ್ಮಣ್, ಬಿ.ಆರ್. ಮೋಹನ್ ಕುಮಾರ್ ಇದ್ದರು.