ಸಾರಾಂಶ
ಗ್ರಾಮೀಣ ಜನ ಸಾಕಷ್ಟು ದುಡಿಯುತ್ತಾರೆ. ಅವರಿಗೆ ಕೆಲಸ ಕೊಟ್ಟರೆ ಆರ್ಥಿಕ, ದೈಹಿಕವಾಗಿ ಸದೃಢವಾಗಲು ಮೇಟ್ ಗಳ ಪಾತ್ರ ಮುಖ್ಯವಾಗಿದೆ.
ಕನ್ನಡಪ್ರಭ ವಾರ್ತೆ ಕುಷ್ಟಗಿ
ಗ್ರಾಮೀಣ ಭಾಗದಲ್ಲಿರುವ ನೈಸರ್ಗಿಕ ಸಂಪನ್ಮೂಲ ಹಾಗೂ ಸರ್ಕಾರಿ ಆಸ್ತಿಗಳಾದ ಕೆರೆ, ನಾಲಾ, ಗೋಕಟ್ಟೆ, ಸರ್ಕಾರಿ ಸ್ವತ್ತುಗಳನ್ನು ನರೇಗಾ ಯೋಜನೆಯಡಿ ಸಂರಕ್ಷಣೆ ಹಾಗೂ ಅಭಿವೃದ್ಧಿಪಡಿಸುವ ಅವಕಾಶ ಕಾಯಕ ಬಂಧುಗಳಿಗೆ ಸಿಕ್ಕಿದೆ. ಅದನ್ನು ಸರಿಯಾಗಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಪಂ ಇಒ ಪಂಪಾಪತಿ ಹಿರೇಮಠ ಹೇಳಿದರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು, ಜಿಪಂ ಕೊಪ್ಪಳ, ತಾಲೂಕು ಪಂಚಾಯಿತಿ ಕುಷ್ಟಗಿ, ಗ್ರಾಮ ಸ್ವರಾಜ್ ಅಭಿಯಾನ ಕರ್ನಾಟಕ ಸಂಯುಕ್ತಾಶ್ರಯದಲ್ಲಿ ನಡೆದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ-2005, ನರೇಗಾ ಯೋಜನೆಯ ಕುರಿತು ಕಾಯಕ ಬಂಧುಗಳ (ಮೇಟ್ಸ್) ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಜನ ಸಾಕಷ್ಟು ದುಡಿಯುತ್ತಾರೆ. ಅವರಿಗೆ ಕೆಲಸ ಕೊಟ್ಟರೆ ಆರ್ಥಿಕ, ದೈಹಿಕವಾಗಿ ಸದೃಢವಾಗಲು ಮೇಟ್ ಗಳ ಪಾತ್ರ ಮುಖ್ಯವಾಗಿದೆ. ಗ್ರಾಮದ ಕಟ್ಟ ಕಡೆಯ ವ್ಯಕ್ತಿಗೆ ನರೇಗಾ ಯೋಜನೆ ತಲುಪಿಸುವಲ್ಲಿ ಕಾಯಕ ಬಂಧುಗಳ ಶ್ರಮ ಸಾಕಷ್ಟಿದೆ. ಅದಕ್ಕಾಗಿ ತಮಗೆ ತರಬೇತಿ ಹಮ್ಮಿಕೊಂಡಿದೆ ಎಂದು ತಿಳಿಸಿದರು.ತಾಪಂ ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ ಮಾತನಾಡಿ, ನರೇಗಾ ಯೋಜನೆಯಲ್ಲಿ ಪ್ರತಿವರ್ಷ ಬದಲಾಗುತ್ತಿದೆ. ಬದಲಾದ ವ್ಯವಸ್ಥೆಗೆ ಹೊಂದಿಕೊಂಡು ಯಾವುದೇ ಕೊರತೆ ಇರದಂತೆ ನೋಡಿಕೊಳ್ಳಲು ಕಾಯಕ ಬಂಧುಗಳಿಗೆ ತರಬೇತಿ ನೀಡಲು ಹಮ್ಮಿಕೊಂಡಿದೆ. ತರಬೇತಿಯ ಸದುಪಯೋಗ ಪಡೆಯಬೇಕು. ನರೇಗಾ ಯೋಜನೆ ಆರೋಗ್ಯಯುತವಾಗಿ ಸಾಗಲು ಕಾಯಕ ಬಂಧುಗಳ ಸಹಕಾರ ಅಗತ್ಯವಿದೆ ಎಂದರು.
ಈ ಸಂದರ್ಭ ವೇಡ್ಸ್ ಸಂಸ್ಥೆಯ ಸದಸ್ಯ ಶೇಖರ ಗಡಾದ, ಸಿಬ್ಬಂದಿ ವರ್ಗ, ತರಬೇತುದಾರರಾದ ಈರಣ್ಣ ತೋಟದ, ಸ್ವಾತಿ ಹಿರೇಮಠ, ವಿಷಯ ನಿರ್ವಾಹಕರಾದ ಶಶಿರೇಖಾ, ನರೇಗಾ ಸಿಬ್ಬಂದಿ ಮಂಜುನಾಥ, ಶಶಿಧರ ಹಾಗೂ ಗ್ರಾಮ ಕಾಯಕ ಮಿತ್ರರು, ಗ್ರಾಮ ಪಂಚಾಯಿತಿಯ ಕಾಯಕ ಬಂಧುಗಳು ಹಾಜರಿದ್ದರು.