ಇಲ್ಲಿನ ಹುಳಸೆಕೇರಿ ಹಾಲಕ್ಕಿ ಒಕ್ಕಲಿಗ ಸಮಾಜದವರ ಸುಗ್ಗಿ ಹಬ್ಬ ಸೋಮವಾರ ಪ್ರಾರಂಭವಾಯಿತು.
ಕನ್ನಡಪ್ರಭ ವಾರ್ತೆ ಗೋಕರ್ಣ
ಇಲ್ಲಿನ ಹುಳಸೆಕೇರಿ ಹಾಲಕ್ಕಿ ಒಕ್ಕಲಿಗ ಸಮಾಜದವರ ಸುಗ್ಗಿ ಹಬ್ಬ ಸೋಮವಾರ ಪ್ರಾರಂಭವಾಯಿತು. ಸಂಜೆ ಅಶೋಕೆಯ ಅರಸು ಗೌಡರ ಮನೆಯ ಆವಾರದಲ್ಲಿರುವ ಕರಿದೇವರಿಗೆ ಪೂಜೆ ಸಲ್ಲಿಸಿ ತುರಾಯಿ ಕಟ್ಟಿದ ಸುಗ್ಗಿ ತಂಡ ಹಾಗೂ ತಾರಮಕ್ಕಿ ಕೇತಕಿ ವಿನಾಯಕ ಮಂದಿರದ ಬಳಿ ಕರಿದೇವರಲ್ಲಿ ಪೂಜೆ ಸಲ್ಲಿಸಿದ ಮೊತ್ತೊಂದು ಸುಗ್ಗಿ ತಂಡ ಗಂಜೀಗದ್ದೆಯ ಜೀವೋತ್ತಮ ಮಠದ ಬಳಿ ಜೊತೆಯಾಗಿ ಮಹಾಬಲೇಶ್ವರ ಮಂದಿರಕ್ಕೆ ಅಗಮಿಸಿತು. ಬಳಿಕ ಸಾರ್ವಭೌಮ ಮಹಾಬಲೇಶ್ವರನಿಗೆ ಪ್ರಥಮ ಸುಗ್ಗಿ ಕುಣಿತ ಸೇವೆ ಸಮರ್ಪಿಸಿ, ಉತ್ಸವಕ್ಕೆ ಆಮಂತ್ರಣ ನೀಡಲಾಯಿತು.ಶ್ರೀದೇವರ ಉತ್ಸವದ ಜೊತೆ ಸುಗ್ಗಿ ತಂಡ ಕೋಟಿತೀರ್ಥ ಕಟ್ಟೆಯ ಪಟ್ಟೆ ವಿನಾಯಕ ಮಂದಿರಕ್ಕೆ ತೆರಳಿ ಅಲ್ಲಿ ಪೂಜೆ ಸ್ವೀಕರಿಸಿದ ಬಳಿಕ ಹಿಲಾಲು ದೀವಟಿಕೆಯೊಂದಿಗೆ ಸುಗ್ಗಿ ತಂಡ ತೋಟಗೇರಿಗೆ ತೆರಳಿ ಅಲ್ಲಿ ನಿಗದಿ ಪಡಿಸಿದ ಸ್ಥಳದಲ್ಲಿನ ಅಡಕೆ ಮರಕ್ಕೆ ಪೂಜೆ ಸಲ್ಲಿಸಿ ಆ ಮರವನ್ನ ಕಡಿದು ತಂದು, ದೇವರ ಉತ್ಸವದ ಜೊತೆ ಮಹಾಗಣಪತಿ ಮಂದಿರಕ್ಕೆ ಆಗಮಿಸಿತು. ಶ್ರೀದೇವರು ಮಹಾಗಣಪತಿ ಮಂದಿರದಲ್ಲಿ ಚಿತ್ತೈಸಿ ರಾಜೋಪಚಾರವ ಪೂಜೆ ಸ್ವೀಕರಿಸಿದ ಬಳಿಕ ಶ್ರೀದೇವರಿಗೆ ಬೆಳಗಿದ ಆರತಿಯಿಂದ ದೇವಾಲಯದ ಮುಂಭಾಗದಲ್ಲಿ ನಿಲ್ಲಿಸಿದ ಅಡಕೆ ಮರಕ್ಕೆ ಅಗ್ನಿ ಸ್ಪರ್ಶಿಸುವ ಮೂಲಕ ಕಾಮದನ ನೆರವೇರಿತು. ಅರಸು ಗೌಡರು ಶ್ರೀದೇವರ ಪ್ರಸಾದ ಸ್ವೀಕರಿಸಿದ ಬಳಿಕ ಸುಗ್ಗಿ ತಂಡ ತಾರಮಕ್ಕಿಗೆ ತೆರಳಿತು. ಇದರೊಂದಿಗೆ ಬಹು ವಿಶೇಷ ವಿಶಿಷ್ಟ ಸುಗ್ಗಿ ಹಬ್ಬಕ್ಕೆ ಚಾಲನೆ ದೊರೆಯಿತು. ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯರು, ವ್ಯವಸ್ಥಾಪಕರು, ಸಿಬ್ಬಂದಿ, ಹಾಲಕ್ಕಿ ಸಮಾಜ ಹಾಗೂ ಉಳಿದೆಲ್ಲ ಸಮಾಜದವರು ಪಾಲ್ಗೊಂಡಿದ್ದರು. ಆಕರ್ಷಿಸಲಿದೆ ಸುಗ್ಗಿ ಕುಣತ:
ಇನ್ನೂ ನಾಲ್ಕು ದಿನ ಇಲ್ಲಿನ ವಿವಿಧೆಡೆ ತೆರಳು ಆಕರ್ಷಕ ಸುಗ್ಗಿ ಕುಣಿತ ಪ್ರದರ್ಶನ ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ಮನರಂಜನೆಯ ರಸದೌತಣ ನೀಡಲಿದ್ದು, ಎಲ್ಲೆಡೆ ಹೋ ಚೋ, ಸದ್ದು ಮೊಳಗಲಿದೆ. ಮೂರನೆ ದಿನ ನಡೆಯುವ ಹಗಣ ಈ ವರ್ಷದ ಆಗು ಹೋಗುಗಳ ಬಿತ್ತರಿಸುವ ಅಣಕು ಪ್ರದರ್ಶನಕ್ಕೆ ಸ್ಥಳೀಯರು ಕಾತರರಾಗಿದ್ದಾರೆ.