ಸಾರಾಂಶ
ಸುರಪುರ ತಾಲೂಕಿನ ಹುಣಸಿಹೊಳೆಯ ಸರಕಾರಿ ಶಾಲೆ ನೂತನ ಕಟ್ಟಡದಲ್ಲಿ ಜೆ.ಜೆ.ಎಂ. ಕಾಮಗಾರಿ ಕೆಲಸಗಾರರು ತಂಗಿರುವುದು. ಕಟ್ಟಡದಲ್ಲಿ ಬೈಕ್‌ಗಳನ್ನು ನಿಲ್ಲಿಸಿರುವುದು.
ಕನ್ನಡಪ್ರಭ ವಾರ್ತೆ ಸುರಪುರ
ತಾಲೂಕಿನ ಹುಣಸಿಹೊಳೆಯ ಸರಕಾರಿ ಶಾಲೆ ನೂತನ ಕಟ್ಟಡವನ್ನು ಅನಧಿಕೃತವಾಗಿ ಜಲ ಜೀವನ್ ಮಿಷನ್ ಕಾಮಗಾರಿಯ (ಜೆಜೆಎಂ) ಗುತ್ತಿಗೆದಾರರಿಗೆ ಮುಖ್ಯ ಶಿಕ್ಷಕರು ಬಾಡಿಗೆ ನೀಡಿದ್ದಾರೆಂದು ಆರೋಪಿಸಿರುವ ತಾಲೂಕು ದಲಿತ ಸೇನೆ ಸದಸ್ಯರು, ಮುಖ್ಯ ಶಿಕ್ಷಕರನ್ನು ಅಮಾನತುಗೊಳಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಮರಲಿಂಗ ಗುಡಿಮನಿ, ಹುಣಸಿಹೊಳೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗಾಗಿ ವ್ಯಾಸಾಂಗ ಮಾಡಲು ನಲಿ-ಕಲಿ ಎಂಬ ನೂತನ ಕಟ್ಟಡ ನಿರ್ಮಿಸಲಾಗಿದೆ.
ಮಕ್ಕಳ ವ್ಯಾಸಾಂಗದ ಬದಲು ಶಾಲೆ ಮುಖ್ಯಶಿಕ್ಷಕ ನೂತನ ಕಟ್ಟಡವನ್ನು ಅನಧಿಕೃತವಾಗಿ ಜೆಜೆಎಂ ಕಾಮಗಾರಿ ಗುತ್ತಿಗೆದಾರರಿಗೆ ಬಾಡಿಗೆ ನೀಡಿದ್ದಾರೆ. ಆ ಕೊಠಡಿಯಲ್ಲೇ ಬೈಕ್ ನಿಲ್ಲಿಸುವುದು, ಆಹಾರ ಸೇವಿಸುವುದು, ಮಲಗುವುದನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಪ್ರಸ್ತುತ ವಿದ್ಯಾರ್ಥಿಗಳು ಪಕ್ಕದ ಅಪೂರ್ಣ ಕಾಮಗಾರಿ ಕಟ್ಟಡದ ನೆಲದಲ್ಲಿ ಕೂರಿಸಿ ಮಕ್ಕಳಿಗೆ ಬೋಧಿಸುತ್ತಿದ್ದಾರೆ. ಮಕ್ಕಳ ವ್ಯಾಸಾಂಗಕ್ಕೆ ತುಂಬಾ ಅನಾನುಕೂಲವಾಗುತ್ತಿದೆ. ಈ ಬಗ್ಗೆ ವಿಚಾರಿಸಿದರೆ ಮುಖ್ಯಶಿಕ್ಷಕ ದುರಹಂಕಾರದಿಂದ ವರ್ತಿಸುತ್ತಾರೆ. ಮುಖ್ಯಶಿಕ್ಷಕರು ಶಾಲೆಗೆ ಸರಿಯಾದ ಸಮಕ್ಕೆ ಬರುವುದಿಲ್ಲ ಎಂದು ದೂರಿದರು.
ಈ ಅವ್ಯವಹಾರದ ಕುರಿತು ಗ್ರಾಮಸ್ಥರು, ಸಂಘಟನೆಯವರು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಶಿಕ್ಷಕರ ಹಿಂದೆ ಪ್ರಭಾವಿಗಳ ಕೈವಾಡವಿದೆ. ಹೇಳೋರು-ಕೇಳೋರು ಇಲ್ಲದಂತಾಗಿ ಸರ್ವಾಧಿಕಾರಿಯಾಗಿ ಮೆರೆಯುತ್ತಿದ್ದಾರೆ. ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಪತ್ತಾರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ತಕ್ಷಣ ಸೇವೆಯಿಂದ ಅಮಾನತುಗೊಳಿಸಬೇಕು ಹಾಗೂ ಜೆಜೆಎಂ ಕಾಮಗಾರಿ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಲು ಆದೇಶಿಸಬೇಕೆಂದು ಒತ್ತಾಯಿಸಿದರು.ಸಂಘಟನೆಯ ಮಹಾದೇವಪ್ಪ ಚಲುವಾದಿ, ಲೋಕೇಶ ದೇವಾಪುರ, ಸಿದ್ರಾಮಯ್ಯ, ಬಸವರಾಜ ಮಂಗಳೂರು, ಭೀಮರಾಯ ಮುಷ್ಠಳ್ಳಿ, ಸಂತೋಷ ಜೈನಾಪುರ, ಮೌನೇಶ ದೇವಾಪುರ, ಭೀಮರಾಯ ದೇವಾಪುರ ಸೇರಿದಂತೆ ಇತರರಿದ್ದರು.