ಚುನಾವಣಾ ಪ್ರಚಾರಕ್ಕೂ ತಟ್ಟಿದ ಬಿಸಿಲಿನ ತಾಪ

| Published : Apr 02 2024, 01:04 AM IST

ಸಾರಾಂಶ

ಲೋಕಸಭೆ ಚುನಾವಣೆ ರಂಗು ಏರುಗತಿಯಲ್ಲಿದೆ. ಅದೇ ರೀತಿ ಬಿಸಿಲಿನ ತಾಪ ಕೂಡ ದಿನದಿಂದ ದಿನಕ್ಕೆ ಏರುತ್ತಿದೆ. ಇದು ಚುನಾವಣೆ ಪ್ರಚಾರದ ಮೇಲೂ ಪರಿಣಾಮ ಬೀರುತ್ತಿದೆ.

ಹುಬ್ಬಳ್ಳಿ:

ಲೋಕಸಭೆ ಚುನಾವಣೆ ರಂಗು ಏರುಗತಿಯಲ್ಲಿದೆ. ಅದೇ ರೀತಿ ಬಿಸಿಲಿನ ತಾಪ ಕೂಡ ದಿನದಿಂದ ದಿನಕ್ಕೆ ಏರುತ್ತಿದೆ. ಇದು ಚುನಾವಣೆ ಪ್ರಚಾರದ ಮೇಲೂ ಪರಿಣಾಮ ಬೀರುತ್ತಿದೆ. ಹೀಗಾಗಿ ಸಂಜೆ ಮತ್ತು ರಾತ್ರಿಯೇ ಪ್ರಚಾರ ಸಭೆಗಳನ್ನು ಆಯೋಜಿಸುತ್ತಿದ್ದಾರೆ ಅಭ್ಯರ್ಥಿಗಳು.

ಈ ವರ್ಷ ಬಿಸಿಲಿನ ತಾಪ ಕೊಂಚ ಜಾಸ್ತಿಯೇ ಇದೆ. ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರಿನಲ್ಲಿ ವಾಡಿಕೆಯಷ್ಟು ಮಳೆ ಕೂಡ ಆಗಲಿಲ್ಲ. ಇದರಿಂದಾಗಿ ಸಹಜವಾಗಿ ಕೆರೆ-ಕಟ್ಟೆಗಳೆಲ್ಲ ಬರಿದಾಗಿವೆ. ಬಿಸಿಲು ಕೂಡ ದಿನದಿಂದ ದಿನಕ್ಕೆ ಏರುಗತಿಯಲ್ಲಿಯೇ ಸಾಗುತ್ತಿದೆ. ಬೆಳಗ್ಗೆ ಏಳೆಂಟು ಗಂಟೆ ಆದರೆ ಸಾಕು ಮೈ ಚುರುಗುಟ್ಟುವಂತಹ ಬಿಸಿಲು ಜನರ ಹೈರಾಣು ಮಾಡುತ್ತಿದೆ. ಹೀಗಾಗಿ ಪ್ರಚಾರಕ್ಕೂ ಬಿಸಿಲಿನ ದಗೆಯ ಬಿಸಿ ತಟ್ಟಿದಂತಾಗಿದೆ.

ಮತ್ತೇನು ಪ್ಲ್ಯಾನ್‌:

ಇನ್ನು ಬಿಸಿಲಿದ್ದರೇನು? ಚುನಾವಣೆ ಗೆಲ್ಲಬೇಕಲ್ಲ ಎಂದುಕೊಂಡು ಪ್ರಚಾರಕ್ಕೆ ಹೋದರೆ ಜನರು ಸಿಗುತ್ತಿಲ್ಲ. ಹೀಗಾಗಿ ಅಭ್ಯರ್ಥಿಗಳೆಲ್ಲ ಇದೀಗ ಬೆಳಗ್ಗೆ ಮತ್ತು ಮಧ್ಯಾಹ್ನವೆಲ್ಲ ಬರೀ ಯಾವುದಾದರೂ ಕಲ್ಯಾಣ ಮಂಟಪದಲ್ಲೋ, ರೇಸಾರ್ಟ್‌ನಲ್ಲೋ ತಮ್ಮ ತಮ್ಮ ಪಕ್ಷದ ಕಾರ್ಯಕರ್ತರ ಸಭೆ, ಸಮಾವೇಶ ನಡೆಸುತ್ತಿದ್ದಾರೆ.

ಈ ಸಭೆ, ಸಮಾವೇಶಗಳಲ್ಲೇ ಕಾರ್ಯಕರ್ತರು ಯಾವ ರೀತಿ ಕೆಲಸ ಮಾಡಬೇಕು ಎಂದೆಲ್ಲ ತಿಳಿಸಿ ಕಳುಹಿಸಲಾಗುತ್ತಿದೆ. ಹೀಗಾಗಿ ಸಂಜೆ ವರೆಗೂ ಹೊರಗೆ ಎಲ್ಲೋ ಹೋಗದೇ ಒಳಾಂಗಣದಲ್ಲೇ ಪ್ರಚಾರ ನಡೆಸಲಾಗುತ್ತಿದೆ.

ಇನ್ನು ಹಳ್ಳಿಗಳ ಪ್ರಚಾರಕ್ಕೆ ಸಂಜೆಯೇ ಮೀಸಲಿಟ್ಟಿದ್ದಾರೆ. ಸಾರ್ವಜನಿಕರ ಸಭೆ-ಸಮಾರಂಭಗಳನ್ನೆಲ್ಲ ಸಂಜೆ 6ರ ನಂತರವೇ ಆಯೋಜಿಸಲಾಗುತ್ತಿದೆ. ರಾತ್ರಿ 10ರ ವರೆಗೆ ಹಳ್ಳಿಗಳಲ್ಲೇ ಅಭ್ಯರ್ಥಿಗಳು, ರಾಜಕೀಯ ವ್ಯಕ್ತಿಗಳು ಪ್ರಚಾರದಲ್ಲಿ ತೊಡಗುತ್ತಿದ್ದಾರೆ. ಈ ಬಗ್ಗೆ ಕೇಳಿದರೆ ಏನ್‌ ಮಾಡೋದು. ಬಿಸಿಲು ಜಾಸ್ತಿ ಇರುವುದರಿಂದ ಮಧ್ಯಾಹ್ನ ಪ್ರಚಾರ ಮಾಡೋಕೆ ಆಗಲ್ಲ. ಮತದಾರರು ಸರಿಯಾಗಿ ಸಿಗಲ್ಲ. ಸಾರ್ವಜನಿಕ ಸಮಾರಂಭಗಳನ್ನು ಮಧ್ಯಾಹ್ನ ಆಯೋಜಿಸಿದರೆ ಜನರು ಬರಲಲ್ಲ. ಅದಕ್ಕಾಗಿ ಸಂಜೆ ಬಿಸಿಲು ಅಷ್ಟೊಂದು ಇರಲ್ಲ. ಆಗ ಸಾರ್ವಜನಿಕರು ಬರಲು ಹಿಂಜರಿಯಲ್ಲ. ಹೀಗಾಗಿ ಸಂಜೆ ಅಥವಾ ರಾತ್ರಿ ವೇಳೆಗೆ ಸಾರ್ವಜನಿಕ ಸಮಾರಂಭ ಆಯೋಜಿಸುತ್ತಿದ್ದೇವೆ ಎಂದು ರಾಜಕೀಯ ಪಕ್ಷದ ಮುಖಂಡರೊಬ್ಬರು ಹೇಳುತ್ತಾರೆ.

ಒಟ್ಟಿನಲ್ಲಿ ಬಿಸಿಲಿನ ತಾಪ ರಾಜಕೀಯ ವ್ಯಕ್ತಿಗಳನ್ನು ಹೈರಾಣು ಮಾಡಿರುವುದಂತೂ ಸತ್ಯ.

ಬಿಸಿಲಿನ ದಗೆ ಈ ವರ್ಷ ಜಾಸ್ತಿಯಿದೆ. ಇದರಿಂದಾಗಿ ಬೆಳಗ್ಗೆ ಸಾರ್ವಜನಿಕ ಸಮಾರಂಭ ಆಯೋಜಿಸುವುದು ಕಷ್ಟಕರ. ಜನರು ಸರಿಯಾಗಿ ಬರಲ್ಲ. ನಾವು ಕೂಡ ಬಿಸಿಲಿನಿಂದ ಹೈರಾಣು ಆಗುತ್ತೇವೆ. ಹೀಗಾಗಿ ನಾವು ಸಂಜೆ 6ರ ನಂತರವೇ ಆಯೋಜಿಸುತ್ತಿದ್ದೇವೆ. ರಾತ್ರಿ 10ರ ವರೆಗೆ ಸಮಾರಂಭ ನಡೆಸುತ್ತೇವೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ ಹೇಳಿದ್ದಾರೆ.