ಕನ್ನಡಪ್ರಭ ವಾರ್ತೆ ಬೀಳಗಿನೀಟ್ ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ವಿಫಲವಾದ ಕೇಂದ್ರ ಸರ್ಕಾರ, ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸುವ ಮೂಲಕ ತನ್ನ ಸರ್ವಾಧಿಕಾರಿ ಮತ್ತು ದಮನಕಾರಿ ಮುಖವನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ.

ಕನ್ನಡಪ್ರಭ ವಾರ್ತೆ ಬೀಳಗಿ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ವಿಫಲವಾದ ಕೇಂದ್ರ ಸರ್ಕಾರ, ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸುವ ಮೂಲಕ ತನ್ನ ಸರ್ವಾಧಿಕಾರಿ ಮತ್ತು ದಮನಕಾರಿ ಮುಖವನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ. ಪ್ರತಿಭಟನೆ ನಡೆಸುವುದು ಸಂವಿಧಾನಬದ್ಧ ಹಕ್ಕಾಗಿದ್ದು, ತಮ್ಮ ಭವಿಷ್ಯ ಮತ್ತು ಶಿಕ್ಷಣ ವ್ಯವಸ್ಥೆಯ ಕುರಿತು ಪ್ರಶ್ನಿಸುವ ವಿದ್ಯಾರ್ಥಿಗಳನ್ನು ಅಪರಾಧಿಗಳಂತೆ ನಡೆಸಿಕೊಳ್ಳುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವಾಗಿದೆ ಎಂದು ಸಾಮಾಜಿಕ ಹೋರಾಟಗಾರ, ಮುಖಂಡ ಪ್ರವೀಣ ಪಾಟೀಲ ದೂರಿದರು.

ಬೀಳಗಿ ವ್ಯಾಪಾರಸ್ಥರ ಸಂಘ, ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಟಿಪ್ಪು ಸುಲ್ತಾನ್ ಯಂಗ್ ಕಮಿಟಿ, ರಾಯಣ್ಣ ಸೇನೆ, ಭೀಮ ಆರ್ಮಿ ಕರ್ನಾಟಕ ಏಕತಾ ಮಷಿನ್ ಸಂಘಟನೆಗಳು ಜಂಟಿಯಾಗಿ ಶನಿವಾರ ಸ್ಥಳೀಯ ಅಂಬೇಡ್ಕರ್ ವೃತ್ತದಿಂದ ಗಾಂಧಿ ವೃತ್ತದ ಮಾರ್ಗವಾಗಿ ಮಿನಿವಿಧಾನಸೌಧದವರೆಗೆ ವಿದ್ಯಾರ್ಥಿಗಳ ಮೇಲೆ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ನಡೆದಿರುವ ಅಮಾನವೀಯ ಪೊಲೀಸ್ ದಾಳಿಯನ್ನು ಖಂಡಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ವಿದ್ಯಾರ್ಥಿಗಳ ಕೈಯಲ್ಲಿ ಪುಸ್ತಕಗಳು, ಫಲಕಗಳು ಹಾಗೂ ನ್ಯಾಯದ ಬೇಡಿಕೆಗಳಿದ್ದರೆ, ಸರ್ಕಾರದ ಕೈಯಲ್ಲಿ ಲಾಠಿ, ಬ್ಯಾರಿಕೆಡ್‌ ಮತ್ತು ಅಶ್ರುವಾಯುಗಳಿದ್ದವು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗದ ಸರ್ಕಾರ, ಪೊಲೀಸ್ ಬಲದ ಮೂಲಕ ಅವರ ಧ್ವನಿಯನ್ನು ಹತ್ತಿಕ್ಕಲು ಮುಂದಾಗಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅಸಮಾಧಾನ ಹೊರ ಹಾಕಿದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ಮಾತನಾಡಿ, ಉದ್ಯೋಗ ಕೇಳಿದರೆ ಬಂಧನ, ಪರೀಕ್ಷೆಯಲ್ಲಿ ನ್ಯಾಯ ಕೇಳಿದರೆ ಲಾಠಿ, ಪ್ರಶ್ನೆಪತ್ರಿಕೆ ಸೋರಿಕೆಗಳ ವಿರುದ್ಧ ಧ್ವನಿ ಎತ್ತಿದರೆ ಪೊಲೀಸ್ ದೌರ್ಜನ್ಯ-ಇದೇನಾ ಕೇಂದ್ರ ಸರ್ಕಾರದ ಯುವಜನರ ಮೇಲಿನ ಬದ್ಧತೆ? ವಿದ್ಯಾರ್ಥಿಗಳ ಮೇಲೆ ಬೀಸಿದ ಪ್ರತಿಯೊಂದು ಲಾಠಿಯೂ ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ಬಿದ್ದ ಏಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ತಾಲೂಕಾ ಅಧ್ಯಕ್ಷ ಶಿವನಗೌಡ ಪಾಟೀಲ ಮಾತನಾಡಿ, ಲಾಠಿಯಿಂದ ದೇಹವನ್ನು ಗಾಯಗೊಳಿಸಬಹುದು. ಆದರೆ, ವಿದ್ಯಾರ್ಥಿಗಳ ಪ್ರಶ್ನೆಗಳನ್ನು, ಯುವಜನರ ಆಕ್ರೋಶವನ್ನು ಮತ್ತು ಪ್ರಜಾಪ್ರಭುತ್ವದ ಧ್ವನಿಯನ್ನು ಎಂದಿಗೂ ಹತ್ತಿಕ್ಕಲು ಸಾಧ್ಯವಿಲ್ಲ. ದೇಶದ ವಿದ್ಯಾರ್ಥಿ-ಯುವಜನರ ನ್ಯಾಯಸಮ್ಮತ ಹೋರಾಟದೊಂದಿಗೆ ನಾವು ಸದಾ ನಿಲ್ಲುತ್ತವೆ ಎಂದರು.

ಶ್ರೀಕಾಂತ ಗೊಡೆಪ್ಪನವರ, ಹುಸೇನ್ ಚಲವಾದಿ, ಮಂಜುಳಾ ಮೇರಾಕಾರ, ಜೈ ಭೀಮ ರಾಜವರ್ಧನೆ, ಬಿ.ಎಸ್.ಗೊನಾಳ, ಭೀಮಶಿ ಚೌದರಿ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು, ಕಾಲೇಜು ವಿದ್ಯಾರ್ಥಿಗಳು ಇದ್ದರು.