ತಿಂಗಳಿಂದ ಕೆಟ್ಟು ನಿಂತಿರುವ ಹೆದ್ದಾರಿ ‘ಎಐ ಕ್ಯಾಮೆರಾ’...!

| Published : Jan 17 2024, 01:45 AM IST

ಸಾರಾಂಶ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಕೆಟ್ಟು ನಿಂತ ಸ್ಪೀಡ್ ಡಿಟೆಕ್ಟರ್‌ಗಳು, ಚಾಲನೆಗೊಂಡ ಮೂರೇ ದಿನದಲ್ಲಿ ಕಾರ್ಯ ಸ್ಥಗೀತ, ಕ್ಯಾಮೆರಾ ಇರುವ ಭಯವೇ ಇಲ್ಲ, ದುರಸ್ತಿ ಮಾಡಲು ಅಧಿಕಾರಿಗಳು ಆಸಕ್ತಿ ತೋರಿಲ್ಲ, ಲಂಗ್ಗು- ಲಗಾಮಿಲ್ಲದೆ ಅತಿ ವೇಗವಾಗಿ ಸಾಗುತ್ತಿರುವ ವಾಹನಗಳು, ಅಪಘಾತಕ್ಕೆ ಆಹ್ವಾನ.

ಎಚ್.ಕೆ.ಅಶ್ವಥ್‌

ಕನ್ನಡಪ್ರಭ ವಾರ್ತೆ ಮಂಡ್ಯ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಸಾಗುವ ವಾಹನಗಳ ವೇಗಮಿತಿ ಮೇಲೆ ನಿಗಾ ವಹಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಅಳವಡಿಸಿದ್ದ ಎಐ ಕ್ಯಾಮೆರಾ (ಸ್ಪೀಡ್ ಡಿಟೆಕ್ಟರ್‌ಗಳು) ತಿಂಗಳಿಂದ ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿವೆ. ಕೆಟ್ಟುನಿಂತಿರುವ ಸ್ಪೀಡ್ ಡಿಟೆಕ್ಟರ್‌ಗಳನ್ನು ಸರಿಪಡಿಸುವುದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಆಸಕ್ತಿ ತೋರಿಲ್ಲ. ಇದರಿಂದ ವಾಹನ ಸವಾರರು ಲಗಾಮಿಲ್ಲದೆ ಅತಿ ವೇಗದಿಂದ ಹೆದ್ದಾರಿಯಲ್ಲಿ ಮುನ್ನುಗ್ಗಲಾರಂಭಿಸಿವೆ.

ಮಂಡ್ಯ ವ್ಯಾಪ್ತಿಯೊಳಗೆ ನಗರದ ಹೊರ ವಲಯದಲ್ಲಿರುವ ಶಶಿಕಿರಣ ಕನ್ವೆನ್ಷನ್ ಹಾಲ್ ಬಳಿ ಬೆಂಗಳೂರು ಕಡೆಯಿಂದ ಬರುವ ವಾಹನಗಳು ಹಾಗೂ ಯಲಿಯೂರು ಬಳಿ ಮೈಸೂರು ಕಡೆಯಿಂದ ಬರುವ ವಾಹನಗಳ ವೇಗಮಿತಿ ಮೇಲೆ ನಿಗಾ ವಹಿಸಲು ಸ್ಪೀಡ್ ಡಿಟೆಕ್ಟರ್‌ಗಳನ್ನು ಅಳವಡಿಸಿದ್ದು, ವಾಹನಗಳು ಹಾದುಹೋಗುವಾಗ ಅವುಗಳ ವೇಗ ಎಷ್ಟಿದೆ ಎಂಬುದು ಎಐ ಕ್ಯಾಮೆರಾದಲ್ಲಿ ದಾಖಲಾಗಿ ನಂತರ ಸಾರ್ವಜನಿಕವಾಗಿಯೂ ಪ್ರದರ್ಶನಗೊಳ್ಳುತ್ತಿತ್ತು. ವಾಹನದ ನಂಬರ್ ಪ್ಲೇಟ್ ಚಿತ್ರವೂ ಸೆರೆಯಾಗುತ್ತಿತ್ತು. ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ವಾಹನಗಳ ವೇಗಕ್ಕೆ ಬ್ರೇಕ್ ಹಾಕುವುದಕ್ಕೆ ಪ್ರಾಧಿಕಾರ ಎಐ ಕ್ಯಾಮೆರಾಗಳನ್ನು ಅಳವಡಿಸಿತ್ತು.

ವೇಗ ಗುರುತಿಸಲು ಉತ್ತಮ ವ್ಯವಸ್ಥೆ:

ಕ್ಯಾಮೆರಾದಲ್ಲಿ ದಾಖಲಾಗುವ ವಾಹನಗಳ ವೇಗ ಮಿತಿ ವಿವರವನ್ನು ಪೊಲೀಸರು ಸುಲಭವಾಗಿ ಕಲೆಹಾಕಿ. ನಿಯಮಮೀರಿ ವೇಗವಾಗಿ ಸಂಚರಿಸುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ ದಂಡ ಸಂಗ್ರಹಿಸುತ್ತಿದ್ದರು. ಇದು ಸಂಚಾರಿ ಪೊಲೀಸರನ್ನು ರಸ್ತೆಗಿಳಿಸದೆ ಎಐ ಕ್ಯಾಮೆರಾ ಮೂಲಕವೇ ನಿಯಮ ಉಲ್ಲಂಘಿಸುವವರ ಮೇಲೆ ನಿಗಾ ವಹಿಸಲಾಗುತ್ತಿತ್ತು. ವಾಹನ ಸವಾರರು ನಿಯಮ ಪಾಲಿಸುವಂತೆ ಮಾಡುವುದಕ್ಕೂ ಇದು ಸುಲಭ ಮಾರ್ಗವಾಗಿತ್ತು.

ಎಐ ಕ್ಯಾಮೆರಾಗಳ ಕಾರ್ಯನಿರ್ವಹಣೆ ಸ್ಥಗಿತಗೊಂಡಿರುವುದರಿಂದ ವಾಹನಸವಾರರು ಹೆದ್ದಾರಿಯಲ್ಲಿ ೧೦೦ ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಸಾಗುತ್ತಿದ್ದಾರೆ. ಈ ಮೊದಲು ಕ್ಯಾಮೆರಾ ಭಯದಿಂದ ನಿಗದಿಪಡಿಸಿದ ವೇಗಮಿತಿಯೊಳಗೆ ಸಂಚರಿಸುತ್ತಿದ್ದವರು ಈಗ ಲಂಗು-ಲಗಾಮು ಇಲ್ಲದೆ ಸಾಗುತ್ತಿದ್ದಾರೆ.

೫೦ ಕಿ.ಮೀ. ದೂರದಿಂದ ಸೆರೆ:

ಏಕಮುಖ ಸಂಚಾರಕ್ಕೆ ೩ ಪಥದ ರಸ್ತೆಯಲ್ಲಿ ಪ್ರತಿ ಪಥಕ್ಕೂ ಒಂದೊಂದು ವೇಗ ಮಿತಿ ಜಾರಿಗೊಳಿಸಲಾಗಿತ್ತು. ಎಡಭಾಗದ ರಸ್ತೆಗೆ ಪ್ರತಿ ಗಂಟೆಗೆ ೬೦ ಕಿ.ಮೀ., ಮಧ್ಯದ ಪಥಕ್ಕೆ ೮೦ ಕಿ.ಮೀ., ಬಲ ಪಥಕ್ಕೆ ೧೦೦ ಕಿ.ಮೀ.ರಂತೆ ಪ್ರತಿ ಪಥಕ್ಕೆ ೨೦ ಕಿ.ಮೀ. ಹೆಚ್ಚುವರಿಯಾಗಿ ವೇಗ ಮಿತಿ ಜಾರಿಗೊಳಿಸಿತ್ತು. ಎಐ ತಂತ್ರಜ್ಞಾನ ಬಳಸಿ ಸ್ಪೀಡ್ ಡಿಟೆಕ್ಟರ್ ಅಳವಡಿಸುವ ಮೂಲಕ ಹೆದ್ದಾರಿಯ ಮೂರು ಪಥದಲ್ಲಿ ಸಾಗುವ ವಾಹನಗಳ ವೇಗಮಿತಿಯನ್ನು ಸುಲಭವಾಗಿ ಗುರುತಿಸಬಹುದಾಗಿತ್ತು. ಈ ಸ್ಪೀಡ್ ಡಿಟೆಕ್ಟರ್ ೫೦ ಮೀಟರ್ ದೂರದಿಂದಲೇ ವಾಹನಗಳ ವೇಗವನ್ನು ಗಮನಿಸುವಷ್ಟು ಸಾಮರ್ಥ್ಯ ಹೊಂದಿದ್ದವು. ಪ್ರತಿಯೊಂದು ವಾಹನಗಳು ಎಷ್ಟು ವೇಗದಲ್ಲಿ ಚಲಿಸುತ್ತಿವೆ ಎಂಬುದು ಎಲೆಕ್ಟ್ರಿಕ್ ಬೋರ್ಡ್‌ನಲ್ಲಿ ಪ್ರದರ್ಶಿತಗೊಳ್ಳುತ್ತಿತ್ತು.

ಕೆಂಪು-ಹಸಿರು ಬಣ್ಣದಲ್ಲಿ ಡಿಸ್‌ ಪ್ಲೇ:

ನಿರ್ದಿಷ್ಟ ಪಥದಲ್ಲಿ ನಿಗದಿಪಡಿಸಿರುವ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಬಂದರೆ ಕೆಂಪು ಬಣ್ಣದಲ್ಲಿ ಪ್ರದರ್ಶನಗೊಂಡರೆ, ನಿಗದಿತ ವೇಗಮಿತಿಯಲ್ಲಿ ಬಂದರೆ ಹಸಿರು ಬಣ್ಣದಲ್ಲಿ ಕಿ.ಮೀ. ಪ್ರದರ್ಶನಗೊಳ್ಳುತ್ತಿತ್ತು. ಈ ಸ್ಪೀಡ್ ಡಿಟೆಕ್ಟರ್ ನಿಗದಿತ ವೇಗ ಮೀರಿದ ವಾಹನಗಳನ್ನು ನಂಬರ್‌ ಪ್ಲೇಟ್ ಸಹಿತ ಸೆರೆಹಿಡಿದು ಟೋಲ್ ಪ್ಲಾಜಾಗೆ ಕಳುಹಿಸುತ್ತಿತ್ತು. ಅಲ್ಲಿಂದ ವಾಹನ ಮಾಲೀಕರಿಗೆ ದಂಡದ ಸಂದೇಶ ರವಾನೆಯಾಗುತ್ತಿತ್ತು. ಆರಂಭದಲ್ಲಿ ಎರಡು ಕಡೆ ಕ್ಯಾಮೆರಾಗಳನ್ನು ಅಳವಡಿಸಿದ್ದು, ನಂತರದ ದಿನಗಳಲ್ಲಿ ೧೦ ಕಿ.ಮೀಗೆ ಒಂದರಂತೆ ಸ್ಪೀಡ್ ಡಿಟೆಕ್ಟರ್ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ಅಪಘಾತಗಳನ್ನು ತಪ್ಪಿಸುವುದಕ್ಕೆ ಚಿಂತನೆ ನಡೆದಿತ್ತು.

ಕಳೆದ ವರ್ಷ ಜು.೨೯ರಂದು ಸ್ಪೀಡ್ ಡಿಟೆಕ್ಟರ್‌ಗಳಿಗೆ ಚಾಲನೆ ನೀಡಲಾಗಿತ್ತು. ಆದರೆ, ದುರದೃಷ್ಟವಶಾತ್ ಚಾಲನೆಗೊಂಡ ಮೂರೇ ದಿನದಲ್ಲಿ ಕೆಟ್ಟು ನಿಂತಿದ್ದವು. ಆ ನಂತರದಲ್ಲಿ ಎಚ್ಚೆತ್ತ ರಾಷ್ಟ್ರೀಯ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಅದನ್ನು ಸರಿಪಡಿಸಿದ್ದರು. ಇದೀಗ ಅವುಗಳು ತಿಂಗಳಿಂದ ಕೆಟ್ಟು ನಿಂತಿದ್ದರೂ ಯಾರೊಬ್ಬರೂ ಅತ್ತ ತಿರುಗಿನೋಡದಿರುವುದು ವಿಪರ್ಯಾಸ.