ಬಾಣಾವರದ ಪ್ರಯಾಣಿಕರಿಗೆ ಹೈವೇ ತಂದ ಅವಾಂತರ

| Published : Nov 21 2024, 01:00 AM IST

ಸಾರಾಂಶ

ಬಾಣಾವರದಿಂದ ಕಡೂರು ಮಾರ್ಗವಾಗಿ ಬೆಂಗಳೂರು ಹಾಗೂ ಮೈಸೂರಿಗೆ ತಲುಪುವಂತಹ ಪ್ರಯಾಣಿಕರು ಬಾಣಾವರ ಮಾರ್ಗವಾಗಿ ಕಡೂರು ಮೂಲಕ ಬೇರೆ ನಗರಗಳಿಗೆ ಸ್ಥಳಗಳಿಗೆ ಬೇರೆ ಕಡೆಗೆ ತರಳಬೇಕಾದ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಬಸ್‌ಗಳಿಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಹಲವಾರು ಬಸ್ಸುಗಳು ಹೈವೇ ಮೂಲಕವೇ ಸಂಚರಿಸುತ್ತಿರುವುದರಿಂದ ನಗರದ ಒಳಭಾಗದಲ್ಲಿ ಬಸ್ಸುಗಳು ಬಾರದೆ ಹೈವೇಗಳ ಮೂಲಕವೇ ಹೋಗುತ್ತಿದ್ದು, ಬಸ್ ನಿಲ್ದಾಣದ ಸಮೀಪ ಬಸ್ಸಿಗಾಗಿ ಕಾಯುವ ಪ್ರಯಾಣಿಕರು ಬಸ್ಸಿಗಾಗಿ ಕಾದು ಕಾದು ಕಷ್ಟಪಡುವಂತಾಗಿದೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಬಾಣಾವರ ನಗರವು ತನ್ನ ನಗರ ವ್ಯಾಪ್ತಿಯ ಒಳಗೆ ಎರಡು ರಾಷ್ಟ್ರೀಯ ಹೆದ್ದಾರಿಗಳನ್ನು ಒಳಗೊಂಡಿದ್ದು, ಈ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸಲು ಊರ ಹೊರವಲಯದಲ್ಲಿ ಬೈಪಾಸ್‌ನಿಂದಾಗಿ ಬಾಣಾವರ ನಗರದ ಪ್ರಯಾಣಿಕರು ಬಸ್ಸಿಗಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾಗುತ್ತಿದೆ.

ಬಾಣಾವರದಿಂದ ಕಡೂರು ಮಾರ್ಗವಾಗಿ ಬೆಂಗಳೂರು ಹಾಗೂ ಮೈಸೂರಿಗೆ ತಲುಪುವಂತಹ ಪ್ರಯಾಣಿಕರು ಬಾಣಾವರ ಮಾರ್ಗವಾಗಿ ಕಡೂರು ಮೂಲಕ ಬೇರೆ ನಗರಗಳಿಗೆ ಸ್ಥಳಗಳಿಗೆ ಬೇರೆ ಕಡೆಗೆ ತರಳಬೇಕಾದ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಬಸ್‌ಗಳಿಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಹಲವಾರು ಬಸ್ಸುಗಳು ಹೈವೇ ಮೂಲಕವೇ ಸಂಚರಿಸುತ್ತಿರುವುದರಿಂದ ನಗರದ ಒಳಭಾಗದಲ್ಲಿ ಬಸ್ಸುಗಳು ಬಾರದೆ ಹೈವೇಗಳ ಮೂಲಕವೇ ಹೋಗುತ್ತಿದ್ದು, ಬಸ್ ನಿಲ್ದಾಣದ ಸಮೀಪ ಬಸ್ಸಿಗಾಗಿ ಕಾಯುವ ಪ್ರಯಾಣಿಕರು ಬಸ್ಸಿಗಾಗಿ ಕಾದು ಕಾದು ಕಷ್ಟಪಡುವಂತಾಗಿದೆ.

ಬಾಣಾವರ ನಗರವು ಹಲವಾರು ಗ್ರಾಮಗಳಿಗೆ ಸಂಪರ್ಕವನ್ನು ಕಲ್ಪಿಸುವ ಮುಖ್ಯ ಕೇಂದ್ರವಾಗಿದ್ದು, ಬಾಣಾವರ ಸೇರಿದಂತೆ ಅಕ್ಕಪಕ್ಕದ ನೂರಾರು ಗ್ರಾಮದ ನಾಗರಿಕರು ಬೇರೆಡೆಗೆ ಪ್ರಯಾಣಿಸಲು ಬಾಣವರದಿಂದಲೇ ಬಸ್ಸುಗಳಿಗಾಗಿ ಅವಲಂಬಿತರಾಗಿದ್ದು, ಬಾಣಾವರದಿಂದಲೇ ಬಸ್ಸುಗಳನ್ನು ಹತ್ತಿ ಹೋಗುವ ಹಲವಾರು ಬಸ್ ಚಾಲಕರು ಮಾಡುತ್ತಿರುವ ಈ ಎಡವಟ್ಟಿನಿಂದ ಸಮಸ್ಯೆ ಎದುರಾಗುತ್ತಿದೆ. ಅದರಲ್ಲೂ ರಾತ್ರಿಯ ಸಂದರ್ಭದಲ್ಲಿ ಅರಸೀಕೆರೆಯಿಂದ ರೈಲು ಮಾರ್ಗವಾಗಿ ಬೇರೆ ಕಡೆ ಹೋಗುವಂತಹ ಪ್ರಯಾಣಿಕರಿಗೆ ತೀವ್ರ ಸ್ವರೂಪದ ತೊಂದರೆ ಎದುರಾಗುತ್ತಿದೆ. ಅಷ್ಟು ಮಾತ್ರವಲ್ಲದೆ ಕೆಲವೊಮ್ಮೆ ಒಂದೆರಡು ಪ್ರಯಾಣಿಕರು ಏನಾದರೂ ಈ ಬಸ್ಸುಗಳಲ್ಲಿ ಸಂಚರಿಸಿದರೇ ಅವರನ್ನು ಹೈವೇ ಸಮೀಪವೇ ಇಳಿಸಿ ಹೋದಂತಹ ಹಲವಾರು ಘಟನೆಗಳು ಸಹ ಹೀಗೆ ಕೆಲವು ದಿನಗಳಿಂದ ನಡೆಯುತ್ತಿವೆ.

ಹೈವೆಯಿಂದ ಬಸ್ ನಿಲ್ದಾಣ ದೂರವಿದ್ದು ಹಲವಾರು ಪ್ರಯಾಣಿಕರು ಅಲ್ಲಿಂದ ಇಲ್ಲಿಗೆ ಬರಲು ಯಾವುದೇ ವಾಹನದ ಸೌಲಭ್ಯವಿಲ್ಲದೆ ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ರಾತ್ರಿ ವೇಳೆಯಲ್ಲಿ ಬಂದು ಬಾಣಾವರವನ್ನು ತಲುಪುವಂತಹ ದುಸ್ಥಿತಿ ನಿರ್ಮಾಣವಾಗಿದ್ದು, ಪ್ರಯಾಣಿಕರು ರಾಜ್ಯ ಸಾರಿಗೆ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಇನ್ನಾದರೂ ಸಂಬಂಧಪಟ್ಟಂತಹ ಅಧಿಕಾರಿಗಳು ಹಾಗೂ ಜನನಾಯಕರುಗಳು ಈ ಭಾಗದ ಸಾರ್ವಜನಿಕರ ಸಮಸ್ಯೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಸಮಸ್ಯೆಗೆ ಪರಿಹಾರ ಕಲ್ಪಿಸುವುದರ ಜೊತೆ ಜೊತೆಗೆ ಗಬ್ಬೆದ್ದು ನಾರುತ್ತಿರುವ ಬಾಣಾವರದ ಬಸ್ ನಿಲ್ದಾಣದ ಒಳಾಂಗಣ ವ್ಯವಸ್ಥೆಯನ್ನು ಸರಿಪಡಿಸಬೇಕಾಗಿದೆ. ಅಲ್ಲದೆ ಬಸ್ ನಿಲ್ದಾಣದ ಒಳಭಾಗದಲ್ಲಿರುವಂತಹ ಶೌಚಾಲಯದ ನೀರು ಸಹ ಆಗಿಂದಾಗ್ಗೆ ಹೊರಬಂದು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಈ ವಿಚಾರವಾಗಿ ಹಲವಾರು ಬಾರಿ ಸಂಬಂಧಪಟ್ಟಂತಹ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹ ಯಾವುದೇ ರೀತಿಯ ಪ್ರಯೋಜನಗಳು ಆಗಿಲ್ಲ. ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಈ ಭಾಗದ ಸಾರ್ವಜನಿಕರ ಬಹುದೊಡ್ಡ ಸಮಸ್ಯೆ ಆದ ಸಾರಿಗೆ ವ್ಯವಸ್ಥೆ ಹಾಗೂ ಸಾರಿಗೆ ನಿಲ್ದಾಣದ ಸಮಸ್ಯೆಯನ್ನು ಪರಿಹರಿಸಬೇಕೆಂದು ಹಲವಾರು ಜನ ನಾಗರಿಕರು ಆಗ್ರಹಿಸಿದ್ದಾರೆ.