ಯುಗಾದಿ ಅಮವಾಸ್ಯೆ ದಿನವೇ ಗುಡುಗು, ಮಿಂಚಿನ ಮಳೆ । ಅಡಕೆ ನೆಟ್ಟ ರೈತರಿಗೆ ನೆಮ್ಮದಿಯ ನಿಟ್ಟುಸಿರು
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ತಾಲೂಕಿನಾದ್ಯಂತ ಬಿರುಬೇಸಿಗೆಯ ಉರಿಬಿಸಿಲಿನಿಂದಾಗಿ ತತ್ತರಿಸಿಹೋಗಿದ್ದ ಜನತೆಗೆ ಅಕಾಲಿಕವಾಗಿ ಬಿದ್ದ ಮಳೆ ಕೊಂಚ ತಂಪನೆಯ ವಾತಾವರಣಕ್ಕೆ ಕಾರಣವಾಗಿದೆ.ಹಗಲು ಹೊತ್ತಿನಲ್ಲಿ ಕನಿಷ್ಟ 30 ರಿಂದ ಗರಿಷ್ಟ 38 ಡಿಗ್ರಿ ವರೆಗೂ ಇದ್ದ ಉಷ್ಣಾಂಶದಿಂದಾಗ ಭೂಮಿಯೆಲ್ಲಾ ಕಾದು ನೆತ್ತಿ ಸುಡುತ್ತಿದ್ದ ಮಾರ್ಚ್ ನಲ್ಲೆ ಇಳೆ ತಂಪಾಗಿಸಲು ಅಕಾಲಿಕ ಬೇಸಿಗೆಯ ಮಳೆ ಬಿದ್ದಿರುವುದು ಬರಡು ನೆಲದಲ್ಲಿ ಸದ್ಯದ ಮಟ್ಟಿಗಾದರೂ ತಾಪಮಾನ ಕಡಿಮೆ ಆಗಿ ಭೂಮಿ ತಂಪಾಗುವಂತೆ ಮಾಡಿದೆ.
ಕಸಬಾ ಹೋಬಳಿ ಸೇರಿದಂತೆ ತಾಲೂಕಿನ ಹಲವೆಡೆ ಯುಗಾದಿಯ ಅಮವಾಸ್ಯೆಯ ದಿನವೇ ಗುಡುಗು, ಮಿಂಚಿನ ದರ್ಶನವಾಗಿ ಮಳೆಯೂ ಬಂದಿದೆ. ಮೊದಲ ಹಬ್ಬದ ದಿನದ ಸಂಜೆಯ ಹೊತ್ತಿಗೆ ಮಳೆ ಬಂದು ಮತ್ತಷ್ಟು ತಂಪಿಗೆ ತಂಪು ಸೇರಿತ್ತು.ಗ್ರಾಮೀಣರು ಯುಗಾದಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುವುದು ಪರಂಪರೆಯಿಂದಲೂ ನಡೆದುಕೊಂಡು ಬಂದಿದೆ. ಈ ಬಾರಿ ಯುಗಾದಿಯ ಮೊದಲ ಹಬ್ಬವನ್ನು ಒಂದು ರೀತಿ ಮಳೆಗಾಲದಲ್ಲಿ ಆಚರಿಸುವ ದಸರಾ ಆಚರಣೆಯಂತೆ ಕಂಡುಬಂದಿದೆ. ಇಡೀ ದಿನವೆಲ್ಲಾ ಬಿರುಬಿಸಿಲು. ಸಂಜೆ ಹೊತ್ತಿಗೆ ಮೋಡದಲ್ಲಿ ಕಪ್ಪಿಟ್ಟು ಮಿಂಚು, ಗುಡುಗು, ಗಾಳಿಯ ಅಬ್ಬರ.
ಕೆಲವು ಕಡೆಗಳಲ್ಲಿ ಬೇರು ಹಸಿ ಆಗುವಷ್ಟು ಹದಮಳೆ ಆಗಿರುವುದು ರೈತಾಪಿಗಳಲ್ಲಿ ಸಂತಸ ಮನೆಮಾಡುವಂತೆ ಮಾಡಿದೆ.ಬಯಲು ಸೀಮೆಯಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಅಡಕೆ ಕೃಷಿಗೆ ಹೆಚ್ಚು ಒತ್ತು ನೀಡಿರುವುದರಿಂದ ಸಹಜವಾಗಿಯೇ ಬೇಸಿಗೆಯ ಬಿಸಿಲಿಗೆ ಅಂತರ್ಜಲ ಕಡಿಮೆ ಆಗಿ ಬೋರ್ ವೆಲ್‌ಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗಿ ನೀರಿನ ಒರತೆ ಕಡಿಮೆ ಆಗಿರುವ ಆತಂಕ ಶುರುವಾಗಿತ್ತು. ಇನ್ನೆರೆಡು ತಿಂಗಳು ಹೇಗಪ್ಪಾ ಅಡಕೆ ಗಿಡಗಳ ಕಾಪಾಡುವುದು ಎಂಬ ಚಿಂತೆ ರೈತರನ್ನು ಕಾಡತೊಡಗಿತ್ತು. ಮಾರ್ಚ್‌ನ ಈ ಉರಿ ಬಿಸಿಲಲ್ಲೂ ಹವಾಮಾನ ವೈಪರೀತ್ಯದಿಂದ ವರುಣದೇವನ ಕೃಪೆಯಿಂದಾಗಿ ಕಾದ ನೆಲ ತಂಪಾಗಿ ಮಣ್ಣಿನ ಘಮ ಮೂಗಿಗಡರುವಂತೆ ಮಾಡಿದೆ.
ಬಲು ಅಪರೂಪ ಎಂಬಂತೆ ಯುಗಾದಿಯ ಬೇಸಿಗೆಯಲ್ಲೂ ಮಳೆರಾಯ ಇಳೆಗೆ ಅವತರಿಸಿರುವುದು ಸೋಜಿಗ ಎನಿಸಿದೆ. ಭದ್ರಾ ನೀರು ಕೆರೆಗಳಿಗೆ ಬರಲಿದೆ ಎಂಬ ಭರವಸೆಯಿಂದ ಬಯಲು ಸೀಮೆಯಲ್ಲೂ ಅಡಕೆ ಹಾಕಿ ಬೆಳೆ ತೆಗೆಯಲು ಮನಸ್ಸು ಮಾಡಿದ ಇಲ್ಲಿನ ರೈತನಿಗೆ ಬೇಸಿಗೆಯಲ್ಲಿ ಅಡಕೆ ಸಲುಹುವುದೇ ದೊಡ್ಡ ಸವಾಲಾಗಿತ್ತು.ಆದರೆ ಈ ವರ್ಷದ ಯುಗಾದಿಯ ಹೊತ್ತಿಗೆ ಬೇಸಿಗೆ ಮಳೆ ಅಲ್ಲಲ್ಲಿ ಬೀಳುವ ಮುನ್ಸೂಚನೆ ನೀಡಿತ್ತು. ಮಲೆನಾಡು ಭಾಗದಲ್ಲಿ ಜೋರು ಮಳೆಯೇ ಬಿದ್ದ ಸುದ್ದಿ ಬಂದಿತ್ತು. ಇದೀಗ ಜಿಲ್ಲೆಯ ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಚಳ್ಳಕೆರೆ, ಮೊಳಕಾಲ್ಮೂರು ಭಾಗದ ಕೆಲವೆಡೆಗಳಲ್ಲಿ ಮಳೆರಾಯ ಕೃಪೆ ತೋರಿದ್ದಾನೆ. ಅಕಾಲಿಕ ಮಳೆಯಿಂದ ಕೆಲವೆಡೆ ಬೆಳೆಗಳಿಗೆ ಹಾನಿಯಾಗಿದ್ದರೆ, ಬಹುತೇಕ ಅಡಕೆ ನೆಟ್ಟ ರೈತರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಮುಂಗಾರಿಗೆ ಇನ್ನೂ ಏಪ್ರಿಲ್ ಕಳೆದು ಮೇ ತಿಂಗಳವರೆಗೂ ಕಾಯಬೇಕಿದ್ದ ರೈತನಿಗೆ ಬೇಸಿಗೆಯಲ್ಲಿ ಭೂಮಿ ತಂಪಾಗಿದ್ದು ಅನ್ನದಾತನ ಮೊಗದಲ್ಲಿ ನಗು ಅರಳುವಂತೆ ಮಾಡಿದೆ.
ಈ ಭಾಗದ ಜನರ ತಲತಲಾಂತರದ ನಂಬಿಕೆಯಂತೆ ನಾಯಕನಹಟ್ಟಿ ತಿಪ್ಪೇಶನ ತೇರು ಹರಿಯುವ ಮುನ್ನ ಒಂದೆರೆಡು ಮಳೆ ಹನಿಯಾದರೂ ಭೂಮಿಗೆ ಬೀಳುತ್ತದೆ ಎಂಬ ಜನಪದರ ನಂಬಿಕೆಯಂತೆ ದೊಡ್ಡ ತೇರು ಹರಿಯುವ ಮುನ್ನ ಅಲ್ಲಲ್ಲಿ ಮಳೆ ಹನಿಗಳು ಬಿದ್ದ ನಿದರ್ಶನಗಳು ಇವೆ.ಇದಾದ ನಂತರ ಜೋರು ಮಳೆಯೇ ಆಗಿರುವುದು ಜನರಲ್ಲಿ ಸಂತಸ ಇಮ್ಮಡಿಯಾಗಿದೆ. ಈ ಹದಮಳೆ ಮುಂಗಾರಿಗೆ ಭೂಮಿ ಹದಗೊಳಿಸಲು ರೈತರಿಗೆ ಅನುಕೂಲವಾಗಲಿದೆ. ಯುಗಾದಿ ಸಂಭ್ರಮದ ನಡುವೆಯೂ ಅಕಾಲಿಕ ಬೇಸಿಗೆ ಮಳೆಯಿಂದಾಗಿ ಮತ್ತಷ್ಟು ಸಂಭ್ರಮ ಜನರಲ್ಲಿ ಮನೆಮಾಡಿದೆ. ಹಬ್ಬದ ಶುರುವಿನಲ್ಲೇ ಹೊಸ ಮಳೆಯ ಆಗಮನದಿಂದಾಗಿ ಉಳುವ ಯೋಗಿಯಲ್ಲಿ ಉತ್ಸಾಹ ಇಮ್ಮಡಿಗೊಳಿಸಿದಂತಾಗಿದೆ.