ಡಿಸಿ ಸಂಧಾನ: ಉಪವಾಸ ಸತ್ಯಾಗ್ರಹ ತಾತ್ಕಾಲಿಕ ಸ್ಥಗಿತ

| Published : Jul 27 2024, 12:47 AM IST

ಡಿಸಿ ಸಂಧಾನ: ಉಪವಾಸ ಸತ್ಯಾಗ್ರಹ ತಾತ್ಕಾಲಿಕ ಸ್ಥಗಿತ
Share this Article
  • FB
  • TW
  • Linkdin
  • Email

ಸಾರಾಂಶ

3ನೇ ಹಂತದ ಶುದ್ಧೀಕರಣ ಘಟಕಕ್ಕಾಗಿ ಒತ್ತಾಯಿಸಿ ಅರ್ಕಾವತಿ ನದಿ ಹೋರಾಟ ಸಮಿತಿ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ತಾಲೂಕು ಕಚೇರಿ ಮುಂಭಾಗ ಆರಂಭವಾಗಿದ್ದ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಹೋರಾಟಗಾರರು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.

-3ನೇ ಹಂತದ ಜಲ ಶುದ್ಧೀಕರಣ ಘಟಕ ಯೋಜನಾ ವರದಿ ಸರ್ಕಾರಕ್ಕೆ - 4 ತಿಂಗಳಲ್ಲಿ ಕಾಮಗಾರಿ ಭರವಸೆಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

3ನೇ ಹಂತದ ಶುದ್ಧೀಕರಣ ಘಟಕಕ್ಕಾಗಿ ಒತ್ತಾಯಿಸಿ ಅರ್ಕಾವತಿ ನದಿ ಹೋರಾಟ ಸಮಿತಿ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂಭಾಗ ಆರಂಭವಾಗಿದ್ದ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಹೋರಾಟಗಾರರು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.

ಚಳವಳಿಯ 2ನೇ ದಿನ ಸ್ಥಳಕ್ಕೆ ಭೇಟಿ ನೀಡಿದ ಬೆಂ.ಗ್ರಾ ಜಿಲ್ಲಾಧಿಕಾರಿ ಡಾ.ಶಿವಶಂಕರ್, ಉಪವಾಸ ಸತ್ಯಾಗ್ರಹವನ್ನ ಕೈಬಿಡುವಂತೆ ಹೋರಾಟಗಾರರನ್ನು ಮನವಿ ಮಾಡಿದರು, 135 ಕೋಟಿ ರುಪಾಯಿ ವೆಚ್ಚದ STP ಘಟಕದ ಡಿಪಿಆರ್ ಸಿದ್ಧ ಮಾಡಿರುವ ದಾಖಲೆಯನ್ನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಒದಗಿಸಿದ ನಂತರ ಹೋರಾಟಗಾರರು ಉಪವಾಸ ಸತ್ಯಾಗ್ರಹವನ್ನ ಸ್ಥಗಿತಗೊಳಿಸಿದರು.

ದೊಡ್ಡಬಳ್ಳಾಪುರ ಒಳಚರಂಡಿ ನೀರು ಮತ್ತು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಹಾಗೂ ಕೈಗಾರಿಕೆಗಳ ತ್ಯಾಜ್ಯ ನೀರಿನಿಂದ ಅರ್ಕಾವತಿ ನದಿಪಾತ್ರದಲ್ಲಿನ ಚಿಕ್ಕತುಮಕೂರು, ದೊಡ್ಡತುಮಕೂರು ಕೆರೆಗಳು ಕಲುಷಿತಗೊಂಡಿವೆ, ದೊಡ್ಡತುಮಕೂರು ಮತ್ತು ಮಜರಾ ಹೊಸಹಳ್ಳಿಯ 17 ಗ್ರಾಮಗಳ ಅಂತರ್ಜಲ ನೀರು ಕಲುಷಿತಗೊಂಡಿದ್ದು, ಕುಡಿಯಲು ನೀರು ಯೋಗ್ಯವಲ್ಲ ಎಂಬ ವರದಿ ಬಂದಿದೆ, ತ್ಯಾಜ್ಯ ನೀರನ್ನ ಶುದ್ಧೀಕರಣ ಮಾಡಿದ ನಂತರವೇ ಕೆರೆಗಳಿಗೆ ಬಿಡುವಂತೆ ರೈತರು ಹೋರಾಟ ಮಾಡುತ್ತಿದ್ದಾರೆ, 3ನೇ ಹಂತದ ಶುದ್ಧೀಕರಣ ಘಟಕಕ್ಕೆ ಆಗ್ರಹಿಸಿ ಎರಡನೇ ಬಾರಿಗೆ ಅರ್ಕಾವತಿ ನದಿ ಹೋರಾಟ ಸಮಿತಿ ತಹಶೀಲ್ದಾರ್ ಕಚೇರಿ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹವನ್ನ ಆರಂಭಿಸಿದ್ದರು.

ಶುದ್ಧೀಕರಣ ಘಟಕ ಸ್ಫಾಪಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಮತ್ತು ಸರ್ಕಾರ ನಡುವಿನ ಪತ್ರ ವ್ಯವಹಾರ ಬಿಡುಗಡೆ ಮಾಡುವಂತೆ ಹೋರಾಟಗಾರರು ಮನವಿ ಮಾಡಿದರು, ಪತ್ರ ವ್ಯವಹಾರದಲ್ಲಿನ ಸತ್ಯಾಂಶವನ್ನ ತಿಳಿದ ನಂತರವಷ್ಟೇ ಉಪವಾಸ ಸತ್ಯಾಗ್ರಹದಿಂದ ಹಿಂದೆ ಸರಿಯುವುದಾಗಿ ತಿಳಿಸಿದರು.

ಬಳಿಕ, ಹೋರಾಟಗಾರರ ತಂಡ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದರು. ವಿಧಾನಸಭೆಯಲ್ಲಿ ಶಾಸಕ ಧೀರಜ್ ಮುನಿರಾಜು ಕೇಳಿದ ಪ್ರಶ್ನೆಗೂ ಮತ್ತು ಸಚಿವ ಬೈರತಿ ಸುರೇಶ್ ನೀಡಿದ ಉತ್ತರದಲ್ಲಿ ಸಂವಹನ ಕೊರತೆ ಕಾರಣ ಗೊಂದಲ ಸೃಷ್ಠಿಯಾಗಿದೆ. ದೊಡ್ಡಬಳ್ಳಾಪುರ ಒಳಚರಂಡಿ ಮತ್ತು ಚಿಕ್ಕತುಮಕೂರು ಕೆರೆಯಂಗಳದಲ್ಲಿ STP ಘಟಕ ನಿರ್ಮಿಸಲು ಕಾಮಗಾರಿಯ ಡಿಪಿಆರ್ ಸಿದ್ಧವಾಗಿದ್ದು ಸಂಬಂಧಪಟ್ಟ ದಾಖಲೆಗಳನ್ನು ಪ್ರದರ್ಶಿಸಿದರು.

ಜಿಲ್ಲಾಧಿಕಾರಿ, 4 ತಿಂಗಳಲ್ಲಿ STP ಘಟಕ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಲಿದೆ ಎಂದು ಭರವಸೆ ನೀಡಿದರು. ಬಳಿಕ, ರೈತರು ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ನಿಲ್ಲಿಸುವ ನಿರ್ಧಾರ ಕೈಗೊಂಡರು.

ಸಭೆಯಲ್ಲಿ ರೈತ ಮುಖಂಡರಾದ ಪ್ರಸನ್ನ, ಸತೀಶ್, ವಸಂತ್, ರಮೇಶ್ ಚಿಕ್ಕತುಮಕೂರು, ಸುರೇಶ್, ವಿಜಿಕುಮಾರ್, ಮಂಜುನಾಥ್ ಎಲ್ ಐಸಿ, ಲೋಕೇಶ್, ನರಸಿಂಹ ಸೇರಿದಂತೆ ಎರಡು ಗ್ರಾಮ ಪಂಚಾಯಿತಿಗಳ ಜನರು ಹಾಜರಿದ್ದರು.