ರಾಮಾಯಣ ವಿಚಾರ ಜೀವನದಲ್ಲಿ ಅಡಕ: ಕೆ.ಕೆ. ಧರ್ಮಪ್ಪ

| Published : Oct 11 2025, 12:03 AM IST

ಸಾರಾಂಶ

ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ನಡೆಯಿತು. ತಹಸೀಲ್ದಾರ್‌ ಕೃಷ್ಣ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ, ಕೊಡಗು ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ನಡೆಯಿತು.ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಚಿಕ್ಕ ಅಳುವಾರ ಜ್ಞಾನ ಕಾವೇರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಉಪನ್ಯಾಸಕ ಕೆ.ಕೆ. ಧರ್ಮಪ್ಪ ಮಾತನಾಡಿ, ಶ್ರೀ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಗ್ರಂಥ ಸುಮಾರು 2 ಸಾವಿರ ವರ್ಷಗಳ ಹಿಂದೆ ರಚಿತವಾಗಿದೆ ಎಂದು ನಂಬಲಾಗಿದ್ದ, ಅದರ ವಿಚಾರಗಳು ಇಂದಿನ ಜೀವನದಲ್ಲಿ ಅಡಕವಾಗಿದೆ. ಇದರಲ್ಲಿ 6 ಖಂಡಗಳಿವೆ. ಪ್ರಪಂಚದ ದಕ್ಷಿಣ ಪೂರ್ವ ರಾಷ್ಟ್ರಗಳಲ್ಲಿ ರಾಮಾಯಣದ ಕುರುಹು ಕಂಡು ಬಂದಿದ್ದು, ಎಲ್ಲೆಡೆ ಇಂದಿಗೂ ಸ್ಥಳೀಯರು ವಿಭಿನ್ನವಾಗಿ ಪೂಜಿಸುವುದನ್ನು ಕಾಣಬಹುದಾಗಿದೆ. ಸದುದ್ಧೇಶದಿಂದ ರಚಿಸಲಾದ ಮಹಾಗ್ರಂಥ ರಾಮಾಯಣ ಎಲ್ಲರಿಗೂ ಮಾದರಿಯಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಹಸೀಲ್ದಾರ್ ಕೃಷ್ಣಮೂರ್ತಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ತಮ್ಮ ರಾಮಾಯಣ ಗ್ರಂಥದ ಮೂಲಕ ಸಮಾಜಕ್ಕೆ ನೀಡಿರುವ ಸಂದೇಶ ಇಂದಿಗೂ ಕಾಣಬಹುದಾಗಿದೆ. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮುಂದಿನ ಸಾಲಿನಿಂದ ವಾಲ್ಮೀಕಿ ಜಯಂತಿಯನ್ನು ಸಮೀಪದ ಹಾಡಿಗಳಲ್ಲಿ ಆಚರಿಸುವ ಮೂಲಕ, ಸ್ಥಳೀಯ ಪ್ರತಿಭಾವಂತರನ್ನು ಗುರುತಿಸಿ ಸನ್ಮಾನಿಸುವ ಕೆಲಸದೊಂದಿಗೆ, ವಾಲ್ಮೀಕಿ ಅವರ ಆದರ್ಶಗಳನ್ನು ಎಲ್ಲರಿಗೂ ಪರಿಚಯಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಉಪಾಧ್ಯಕ್ಷೆ ಎಸ್.ಇ. ಮೋಹಿನಿ, ಸದಸ್ಯೆ ಶೀಲಾ ಡಿಸೋಜ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎ. ಆದಮ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ ಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಆರ್‌ಎಫ್‌ಒ ಶೈಲೇಂದ್ರಕುಮಾರ್, ಕೆ.ಡಿ.ಪಿ ಸದಸ್ಯರಾದ ವೇದಕುಮಾರ್, ಔರಂಗಜೇಬ್, ಪರಿಶಿಷ್ಟ ಮುಖಂಡ ಕುಮಾರಸ್ವಾಮಿ, ದಲಿತ ಮುಖಂಡರಾದ ಬಿ.ಈ. ಜಯೇಂದ್ರ, ನಿರ್ವಾಣಪ್ಪ, ಹೊನ್ನಪ್ಪ, ಈರಪ್ಪ ಸೇರಿದಂತೆ ಹಲವರು ಇದ್ದರು.ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಆಲೂರು ಸಿದ್ಧಾಪುರ ಶಾಲೆಯ ಸಮಾಜದ ವಿದ್ಯಾರ್ಥಿ ಕೃಷ್ಣಮೂರ್ತಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಕ್ಯಾತೆ ಗ್ರಾಮದ ಎಪಿಜೆ ಅಬ್ದುಲ್ ಕಲಾಂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ವಿನೋದ್ ಅವರನ್ನು ಸನ್ಮಾನಿಸಲಾಯಿತು.