ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳು ಮತ್ತು ಮೌಲ್ಯಗಳು ಶತಮಾನಗಳವರೆಗೆ ಜೀವಂತವಾಗಿ ಉಳಿಯುತ್ತವೆ ಎಂದು ಶಾಸಕ ಕೆ.ಎಂ.ಉದಯ್ ಮಂಗಳವಾರ ಹೇಳಿದರು.ಪಟ್ಟಣದ ಶಿವಪುರದ ಕೆ.ಎಂ.ಉದಯ್ ಚಾರಿಟಬಲ್ ಟ್ರಸ್ಟ್ ಕಚೇರಿಯಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಜಯಂತಿಯದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಜಾತಿ, ಧರ್ಮ, ಪಂಥಗಳ ಆಧಾರದ ಮೇಲೆ ಮನುಷ್ಯರನ್ನು ಮೇಲು-ಕೀಳು ಎಂದು ಭಾವಿಸಬಾರದು, ದೇಶಕ್ಕೆ ಎಲ್ಲರೂ ಸಮಾನತೆ, ಸ್ವಾಭಿಮಾನದಿಂದ ಬಾಳಲು ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದ್ದಾರೆ ಎಂದರು.ವಿದ್ಯಾವಂತರ ಕೊರತೆಯಿಂದ ವಿಶ್ವದಾದ್ಯಂತ ಅಸ್ಪೃಶ್ಯತೆ, ಅಸಮಾನತೆ ಇತ್ತು. ಈ ಅನಿಷ್ಟ ಪದ್ಧತಿ ಕೊನೆಗಾಣಿಸಲು ಅಂಬೇಡ್ಕರ್ ಸಂವಿಧಾನ ರಚನೆಯಲ್ಲಿ ಸರ್ವರಿಗೂ ಸಮಾನತೆ ಎಂಬ ಹಕ್ಕನ್ನು ನೀಡಿದ ಮಹಾನ್ ಚೇತನ ಎಂದು ಬಣ್ಣಿಸಿದರು.
ಶೋಷಿತ ಸಮುದಾಯಗಳ ವೇದಿಕೆ ರಾಜ್ಯಾಧ್ಯಕ್ಷ ಸುರೇಶ್ ಕಂಠಿ ಮಾತನಾಡಿ, ಡಾ.ಅಂಬೇಡ್ಕರ್ ಕೇವಲ ದಲಿತ ವರ್ಗವಲ್ಲದೆ ಎಲ್ಲಾ ವರ್ಗದ ಜನರನ್ನು ಗುರಿಯಾಗಿಟ್ಟುಕೊಂಡು ಸಂವಿಧಾನ ರಚನೆ ಮಾಡಿದ್ದಾರೆ ಎಂದರು.ಈ ವೇಳೆ ಟ್ರಸ್ಟ್ ನಿರ್ದೇಶಕ ಸಿಪಾಯಿ ಶ್ರೀನಿವಾಸ್, ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಚೆಲುವರಾಜು, ಯುವ ಘಟಕದ ಅಧ್ಯಕ್ಷ ಕೀರ್ತಿಗೌಡ, ಪುರಸಭಾ ಅಧ್ಯಕ್ಷೆ ಕೋಕಿಲ ಅರುಣ್, ಉಪಾಧ್ಯಕ್ಷ ಟಿ.ಆರ್.ಪ್ರಸನ್ನ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಸದಸ್ಯರಾದ ಸಚಿನ್,ಬಸವರಾಜು, ಸಿದ್ದರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಸಂದರ್ಶ , ಮನ್ಮುಲ್ ನಿರ್ದೇಶಕ ಹರೀಶ ಹಾಗೂ ದಲಿತ ಪರ ಸಂಘಟನೆಗಳ ಮುಖಂಡರುಗಳು ಭಾಗವಹಿಸಿದ್ದರು.
ಡಾ.ಬಿ.ಆರ್.ಅಂಬೇಡ್ಕರ್ ಮನುಕುಲದ ದೊಡ್ಡ ಆಸ್ತಿ: ಸುರೇಶ್ ಗೌಡನಾಗಮಂಗಲ:
ವಿಶ್ವವೇ ಗೌರವಿಸುವಂತಹ ಸಂವಿಧಾನ ರಚಿಸಿಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಒಂದು ಸಮುದಾಯಕ್ಕೆ ಸೀಮಿತವವಲ್ಲ. ಇಡೀ ಮನುಕುಲದ ಬಹುದೊಡ್ಡ ಆಸ್ತಿಯಾಗಿದ್ದಾರೆ ಎಂದು ಮಾಜಿ ಶಾಸಕ ಸುರೇಶ್‌ಗೌಡ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತ್ಯುತ್ಸವದ ಪ್ರಯುಕ್ತ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿ, ನಮ್ಮ ದೇಶದ ಸಂವಿಧಾನ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠತೆ ಹೊಂದಿದೆ ಎಂದರು.
ದೇಶದ ಪ್ರತಿಯೊಬ್ಬರೂ ಕೂಡ ಸಮಾನತೆಯಿಂದ ಸ್ವಾಭಿಮಾನದ ಬದುಕು ನಡೆಸಲು ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅವಕಾಶ ಕೊಟ್ಟಿದ್ದಾರೆ. ಬಾಲ್ಯದಿಂದಲೂ ಹಲವು ರೀತಿಯಲ್ಲಿ ಅಪಮಾನ ಸಹಿಸಿಕೊಂಡು ಬಂದ ಅವರು ಶೋಷಿತ ವರ್ಗದವರ ಪರ ಹೋರಾಟ ನಡೆಸಿ ಮಾನವತೆಯ ಮಹಾನ್ ವ್ಯಕ್ತಿಯಾಗಿದ್ದರು. ಅವರ ತತ್ವ ಸಂದೇಶ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.ಇದಕ್ಕೂ ಮುನ್ನ ಡಾ.ಅಂಬೇಡ್ಕರ್ ಅವರ ಭಾವಚಿತ್ರವನ್ನು ಅಲಂಕರಿಸಿದ್ದ ತೆರೆದ ವಾಹನದಲ್ಲಿರಿಸಿ ಪಟ್ಟಣದ ಟಿ.ಬಿ.ಬಡಾವಣೆಯಿಂದ ಮಂಡ್ಯ ಸರ್ಕಲ್‌ವರೆಗೆ ಪೂರ್ಣಕುಂಭ ಸ್ವಾಗತ ಮತ್ತು ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಮಂಡ್ಯ ವೃತ್ತದಲ್ಲಿ ಬೃಹತ್ ಕೇಕ್ ಕತ್ತರಿಸಿ ಸಾರ್ವಜನಿಕರಿಗೆ ಹಂಚಲಾಯಿತು. ತಾಲೂಕು ಜೆಡಿಎಸ್ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್, ದಲಿತ ಮುಖಂಡರಾದ ಮುಳಕಟ್ಟೆ ಶಿವರಾಮಯ್ಯ, ಕಂಚಿನಕೋಟೆ ಮೂರ್ತಿ, ಕೆಂಪೇಗೌಡ, ವಿನೋದ್ ಸೇರಿದಂತೆ ನೂರಾರು ಮಂದಿ ಇದ್ದರು.