ಶಿರಹಟ್ಟಿ: ವದಂತಿ, ಊಹಾಪೋಹ ಮತ್ತು ಪಕ್ಷಪಾತದ ಸುದ್ದಿಗಳಿಗಿಂತ ಜನರ ಬದುಕಿಗೆ ಸಂಬಂಧಿಸಿದ ನೈಜ ಸಮಸ್ಯೆಗಳು, ಸಾಧನೆಗಳು ಹಾಗೂ ಅಭಿವೃದ್ಧಿಯ ಸುದ್ದಿಗಳಿಗೆ ಓದುಗರು ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ ಎಂದು ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಹೇಳಿದರು.

ಶಿರಹಟ್ಟಿ ತಾಲೂಕು ಘಟಕದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ನಡೆಯುವ ವಾಸ್ತವ ಘಟನೆಗಳನ್ನು ನಿಖರವಾಗಿ, ನಿಷ್ಪಕ್ಷಪಾತವಾಗಿ ಮತ್ತು ಜವಾಬ್ದಾರಿಯುತವಾಗಿ ಜನರ ಮುಂದಿಡುವ ಪತ್ರಕರ್ತರ ಮೇಲಿನ ಗೌರವ ಹೆಚ್ಚುತ್ತಿದೆ ಎಂದು ಹೇಳಿದರು.ಪತ್ರಕರ್ತರು ವಾಸ್ತವಿಕವಾಗಿ ವರದಿ ಮಾಡಿದಾಗ ಆಡಳಿತ ವ್ಯವಸ್ಥೆಯ ಗಮನ ಸೆಳೆಯಲು ಸಾಧ್ಯವಾಗುತ್ತದೆ. ಇದರಿಂದ ಸಮಸ್ಯೆಗಳ ಪರಿಹಾರಕ್ಕೂ ದಾರಿ ತೆರೆದುಕೊಳ್ಳುತ್ತದೆ. ಪತ್ರಕರ್ತರು ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದೆ ಸತ್ಯಾಂಶಗಳನ್ನು ಪರಿಶೀಲಿಸಿ ಸುದ್ದಿಯನ್ನು ಪ್ರಕಟಿಸಿದಾಗ ಜನರಲ್ಲಿ ವಿಶ್ವಾಸ ಮೂಡುತ್ತದೆ. ಇದೇ ವಿಶ್ವಾಸ ಪತ್ರಕರ್ತರ ನೈತಿಕ ಮೌಲ್ಯ ಮತ್ತು ಗೌರವವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಉತ್ತರ ಕರ್ನಾಟಕ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಕರ್ತರು ಸಮಾಜದ ಕಣ್ಣು ಮತ್ತು ಕಿವಿಯಾಗಿ ಕಾರ್ಯನಿರ್ವಹಿಸುತ್ತಾರೆ ಎಂದರು.

ಶ್ರೀ. ಜ. ಫಕೀರ ಸಿದ್ದರಾಮ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಹೆಬ್ಬಳ್ಳಿ, ಶಿವಪ್ರಕಾಶ ಮಹಾಜನಶೆಟ್ಟರ, ಹುಮಾಯೂನ ಮಾಗಡಿ, ವೀರಯ್ಯ ಮಠಪತಿ, ಡಿ.ಕೆ. ಹೊನ್ನಪ್ಪನವರ, ಡಾ. ಪ್ರಕಾಶ ಹೊಸಮನಿ, ಡಾ. ವೆಂಕಟೇಶ ರಾಠೋಡ, ಶರಣಬಸವನಗೌಡ ಪಾಟೀಲ ಮಾತನಾಡಿದರು.

ಪತ್ರಕರ್ತ ಸಂಘದ ತಾಲೂಕು ಘಟಕದ ಅಧ್ಯಕ್ಷ ಮಹದೇವಪ್ಪ ಎಂ. ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ಬಿ.ವಿ. ನ್ಯಾಮಗೌಡ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ, ವಿಶ್ವನಾಥ ಕಪ್ಪತ್ತನವರ, ಎನ್.ಆರ್. ಕುಲಕರ್ಣಿ, ಡಾ. ಸುನೀಲ್‌ ಬುರಬುರೆ, ಚಂದ್ರಕಾಂತ ನೂರಶೆಟ್ಟರ, ಭೀಮಸಿಂಗ್ ರಾಠೋಡ, ತಿಮ್ಮರಡ್ಡಿ ಮರಡ್ಡಿ, ಶಿವನಗೌಡ ಪಾಟೀಲ, ಸೂರ್ಯಕಾಂತ ಕಪ್ಪತ್ತನವರ, ಎಂ.ಕೆ. ಲಮಾಣಿ. ಕೆ.ಎ. ಬಳಿಗೇರ ಇದ್ದರು.


ಜಿ.ಬಿ. ಹೆಸರೂರ ಕಾರ್ಯಕ್ರಮ ನಿರೂಪಿಸಿದರು. ಚಂದ್ರು ಕುಸ್ಲಾಪುರ ಸ್ವಾಗತಿಸಿದರು. ಮಂಜುನಾಥ ಅರಪಲ್ಲಿ ವಂದಿಸಿದರು.