ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ದೈನಂದಿನ ಒತ್ತಡದ ಬದುಕಿನ ಮಧ್ಯೆಯೇ ಸದೃಢ ಆರೋಗ್ಯ ಕಾಪಾಡಿಕೊಳ್ಳಲು, ಯೋಗ, ಆಟೋಟಗಳು, ಓಟ, ನಡಿಗೆ, ನೃತ್ಯ ಸೇರಿದಂತೆ ವಿವಿಧ ಸೃಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಕ್ರೀಯಾಶೀಲತೆ ಮೈಗೂಢಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಸಹಯೋಗದಲ್ಲಿ ಯೋಗೋತ್ಸವ-೨೦೨೫ರ ಅಂಗವಾಗಿ ರಾಜ್ಯಮಟ್ಟದ ಚಿಂತನಾಗೋಷ್ಠಿ ಹಾಗೂ ಯೋಗ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಭಾರತದ ಸಂಸ್ಕೃತಿ ಹಾಗೂ ಪರಂಪರೆಯಲ್ಲಿ ಯೋಗಕ್ಕೆ ಮಹತ್ವವಿದೆ. ವಿಶ್ವವೇ ಇಂದು ಯೋಗ ದಿನವನ್ನು ಆಚರಿಸುತ್ತದೆ. ಅಬಾಲವೃದ್ಧರಾದಿಯಾಗಿ ಯೋಗ ಪ್ರತಿನಿತ್ಯ ಜೀವನದ ಭಾಗವಾಗಿಸಿಕೊಂಡು ಸದೃಢ ಆರೋಗ್ಯ ಹೊಂದಬೇಕು ಎಂದರು.
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಎರಡು ದಿನಗಳ ಕಾಲ ರಾಜ್ಯ ಮಟ್ಟದ ಯೋಗೋತ್ಸವ ಆಚರಿಸಲಾಗುತ್ತಿದೆ. ಅಕಾಡೆಮಿಯು ಮಕ್ಕಳ ವ್ಯಕ್ತಿತ್ವ ವಿಕಸನ ಹಾಗೂ ಅವರ ಸವಾಂಗೀಣ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತದೆ ಎಂದರು.ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಮಾತನಾಡಿ, ಋಣಾತ್ಮಕ ವಿಚಾರಗಳನ್ನು ತೊಲಗಿಸಿ ಧನಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಯೋಗ ಅತ್ಯಂತ ಸಹಕಾರಿಯಾಗಿದೆ. ಚಂಚಲ ಮನಸ್ಸನ್ನು ನಿಯಂತ್ರಿಸಲು ಯೋಗ ಸಹಕಾರಿಯಾಗಿದ್ದು, ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಂಡು ಪರಿಪೂರ್ಣ ವ್ಯಕ್ತಿತ್ವ ಹೊಂದಬಹುದಾಗಿದೆ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಎಕ್ಸೆಲೆಂಟ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಮಾತನಾಡಿ, ಯೋಗದಿಂದ ಏಕಾಗ್ರತೆ, ನೆನಪಿನ ಶಕ್ತಿ ವೃದ್ಧಿ, ಉತ್ತಮ ಆರೋಗ್ಯ ಹೊಂದಲು ಯೋಗ ಪರಿಹಾರ ಕಲ್ಪಿಸುತ್ತದೆ. ವಿದ್ಯಾರ್ಥಿಗಳು ಯೋಗ ದಿನಚರಿಯ ಭಾಗವಾಗಿಸಿಕೊಳ್ಳಬೇಕು ಎಂದು ಹೇಳಿದರು.ಚಾಣಕ್ಯ ಕರಿಯರ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಎನ್.ಎಂ.ಬಿರಾದಾರ ಮಾತನಾಡಿದರು. ಬಾಲಗಾಂವ್ ಗುರುದೇವ ಆಶ್ರಮದ ಅಮೃತಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಬಾಲ ವಿಕಾಸ ಅಕಾಡೆಮಿಯ ನಿರ್ದೇಶಕ ಎಚ್.ವೈ.ಯರಾಳಿ, ಶ್ರೀನಿವಾಸ ಸೊರಟೂರ, ಚಿನ್ನಕ್ಕ ಬಿರಾದರಾ, ಅಕಾಡೆಮಿ ಉಪ ನಿರ್ದೇಶಕ ರವಿ ರತ್ನಾಕರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ.ಚವ್ಹಾಣ, ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಗಜಾನನ ಮನ್ನಿಕೇರಿ, ಗುಲಬುರ್ಗಾ ಕೇಂದ್ರೀಯ ವಿಶ್ವವಿದ್ಯಾಲಯದ ಯೋಗ ಗುರು ಜ್ಯೋತ್ಸ್ನಾಅಂಬೇವಾಡ್ಕರ್, ಸಮಾಜ ಕಲ್ಯಾಣ ಇಲಾಖೆಯ ಪುಂಡಲಿಕ ಮಾನವರ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಶಾಂತ ಪೂಜಾರಿ, ಆಯುಷ್ಯ ಇಲಾಖೆ ಅಧಿಕಾರಿ ವಿದ್ಯಾವತಿ ಅಥಣಿ, ಬಿಇಒ ಬಸವರಾಜ ತಳವಾರ ಸೇರಿ ಹಲವರು ಇದ್ದರು.
ಯೋಗ ಪ್ರದರ್ಶನ: ರಾಜ್ಯದ ಮೂಲೆ- ಮೂಲೆಯಿಂದ ಆಗಮಿಸಿದ್ದ ಯೋಗಪಟುಗಳು ರಂಗ ಮಂದಿರ ವೇದಿಕೆಯಲ್ಲಿ ನಡೆದ ಯೋಗ ಪ್ರದರ್ಶನ ಮೈನವಿರೇಳದಿತು. ಯೋಗಪಟುಗಳ ಪ್ರದರ್ಶನಕ್ಕೆ ಚಪ್ಪಾಳೆ ತಟ್ಟುವ ಮೂಲಕ ಹುರಿದುಂಬಿಸಿದರು. ಅದ್ಭುತ ಯೋಗ ಪ್ರದರ್ಶನ ನೀಡಿದ ಯೋಗ ಪಟುಗಳು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.-----
ಕೋಟ್ನಾಡಿನ ಮಕ್ಕಳ ಅವರ ಸೃಜನಶೀಲ ವ್ಯಕ್ತಿತ್ವ ಬೆಳೆಸುವ ನಿಟ್ಟಿನಲ್ಲಿ ಅಕಾಡಮಿ ತನ್ನ ಕಾರ್ಯ ಚಟುವಟಿಕೆಯನ್ನು ವಿಸ್ತರಿಸಿಕೊಂಡು ಆ ದಿಸೆಯಲ್ಲಿಯೂ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಮಕ್ಕಳು ಬೆಳಕಾಗಿ ಬೆಳಗಬೇಕಾದರೆ ಅವರಲ್ಲಿರುವ ಸೂಪ್ತ ಪ್ರತಿಭೆಗೆ ನೀರೆರೆಯಬೇಕು. ಯೋಗಮಯ ಜೀವನ ನಡೆಸುವ ಮೂಲಕ ಆರೋಗ್ಯಯುತ ಜೀವನ ಕಾಯ್ದುಕೊಳ್ಳಬೇಕು. ಆತ್ಮವಿಶ್ವಾಸದಿಂದ ಗುರಿ ಸಾಧನೆಯಡೆಗೆ ಸಾಗಿ ಮಕ್ಕಳು ಉತ್ತಮ ಜೀವನವನ್ನು ನಡೆಸಿ ಸಮಾಜಕ್ಕೆ ಮಾದರಿಯಾಗಬೇಕು.
- ಸಂಗಮೇಶ ಬಬಲೇಶ್ವರ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ