ಸಾರಾಂಶ
-ರಾಜ್ಯಕ್ಕೆ ಸುಣ್ಣ, ಪರರಾಜ್ಯಕ್ಕೆ ಬೆಣ್ಣೆ । ಹೆಚ್ಚು ಆದಾಯ ನೀಡುವ ಈ ಭಾಗಕ್ಕೆ ರೈಲ್ವೆ ಸೌಲಭ್ಯಗಳೇ ಮರೀಚಿಕೆ
---------ಆನಂದ್ ಎಂ. ಸೌದಿ
ಕನ್ನಡಪ್ರಭ ವಾರ್ತೆ ಯಾದಗಿರಿ"ಯಾತ್ರಿಕನ್ ಕೃಪಯಾ ಧ್ಯಾನ್ ದೀಜಿಯೇ...
ರೈಲು ನಿಲ್ದಾಣಗಳಲ್ಲಿ ಇಂತಹ ಉದ್ಘೋಷ ಸಾಮಾನ್ಯ. ಆದರೆ, ನಮ್ಮ ಪ್ರಯಾಣಿಕರು ದಯವಿಟ್ಟು ಗಮನಿಸಬೇಕಾಗಿದೆ. ಈ ಕಲ್ಯಾಣ ಕರ್ನಾಟಕ ಭಾಗದಿಂದ ರೈಲ್ವೆ ಇಲಾಖೆಗೆ ಸಾವಿರಾರು ಕೋಟಿ ರು.ಗಳ ಆದಾಯವಿದ್ದಾಗ್ಯೂ ಸಹ, ಅವಶ್ಯಕ ಸೌಲಭ್ಯಗಳ ನೀಡುವಲ್ಲಿ ರೈಲ್ವೆ ಇಲಾಖೆ ಹಿಂದೇಟು ಹಾಕುತ್ತಿದೆ.ನಮ್ಮ ಈ ಭಾಗದಿಂದ ಆದಾಯ ಪಡೆಯುವ ರೈಲ್ವೆ ಇಲಾಖೆಯು, ತೆಲಂಗಾಣ ಹಾಗೂ ಮಹಾರಾಷ್ಟ್ರಕ್ಕೆ ಹೆಚ್ಚಿನ ಸೌಲಭ್ಯಗಳ ನೀಡುತ್ತಿರುವುದು ಅಚ್ಚರಿ ಮೂಡಿಸಿದೆ. ಹಾಗೊಂದು ವೇಳೆ, ಸೌಲಭ್ಯಗಳಿಗಾಗಿ ಹೋರಾಟ ನಡೆದಾಗ ಮಾತ್ರ ಮೂಗಿಗೆ ತುಪ್ಪ ಹಚ್ಚುವಂತೆ ಒಂದಿಷ್ಟು ರೈಲುಗಳ ನಿಲುಗಡೆಗೆ ಹಸಿರು ನಿಶಾನೆ ತೋರಿಸುತ್ತಿರುವುದು ವಿಪರ್ಯಾಸ.
ಗುಂತಕಲ್ ರೈಲ್ವೆ ವಿಭಾಗದಲ್ಲಿ ತಿರುಪತಿ ನಂತರ ಅತಿ ಹೆಚ್ಚಿನ ಹಣ ಸಂಗ್ರಹ (ಪ್ರತಿದಿನಕ್ಕೆ ಅಂದಾಜು 6 ಲಕ್ಷ ರು.ಗಳು) ರೈಲ್ವೆ ಇಲಾಖೆಗೆ ನೀಡುವ ಯಾದಗಿರಿ ಜಿಲ್ಲಾ ಕೇಂದ್ರವಾಗಿದ್ದರೂ ಅನೇಕ ರೈಲ್ವೆ ಸೌಲಭ್ಯಗಳು ಮರೀಚಿಕೆಯಾಗಿವೆ.ರಾಜಕೀಯ ಇಚ್ಛಾಶಕ್ತಿ ಕೊರತೆಯೂ ಇದಕ್ಕೆ ಕಾರಣ ಅನ್ನೋ ಮಾತುಗಳೂ ಇವೆ. ವಂದೇ ಭಾರತ್ ರೈಲು ನಿಲುಗಡೆಯೊಂದಕ್ಕೇ ತಿಂಗಳುಗಟ್ಟಲೇ ಪ್ರತಿಭಟನೆಗಳ ಕಂಡಿದ್ದ ಯಾದಗಿರಿ ಜನರಿಗೆ ಇನ್ನುಳಿದ ಸೌಲಭ್ಯಗಳ ಪಡೆಯುವಲ್ಲಿ ವರುಷಗಳೇ ಬೇಕಾಗಬಹುದೇನೋ ಎಂಬ ಕೊರಗು ಜನರಲ್ಲಿ ಕಾಡುತ್ತಿದೆ.
ಕೋವಿಡ್ ಕಾಲದ ನೆಪವೊಡ್ಡಿ ಕಡಿತಗೊಂಡ ಕೆಲವೊಂದು ರೈಲುಗಳು ತಟಸ್ಥಗೊಂಡಿವೆ. ದಕ್ಷಿಣದಿಂದ ಉತ್ತರಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ ಸಂಪರ್ಕ ಬೆಸೆಯುವ ಅನೇಕ ರೈಲುಗಳು ಯಾದಗಿರಿ ಮೂಲಕ ಹಾದು ಹೋಗುತ್ತವಾದರೂ, ಇಲ್ಲಿನ ನಿಲ್ದಾಣದಲ್ಲಿ ನಿಲುಗಡೆಯಾಗುವುದಿಲ್ಲ. ಕೇವಲ ಕಾಟಾಚಾರಕ್ಕೆ ಮಾತ್ರ ಒಂದಿಷ್ಟು ಅರೆಬರೆ ಸೌಲಭ್ಯಗಳ ನೀಡಿ, ಹಬ್ಬ-ಹರಿದಿನಗಳಂದು ಒಂದೆರೆಡು ರೈಲುಗಳ ನಿಲ್ಲಿಸಿ ಜನರ ತಾತ್ಕಾಲಿಕ ಸಮಾಧಾನಕ್ಕೆ ಮುಂದಾಗುತ್ತದೆ.ಇಲಾಖೆಯ ಮೇಲಧಿಕಾರಿಳಗಳು ಬಂದಾಗಷ್ಟೇ ಮಾತ್ರ ಒಂದಿಷ್ಟು ಸುಣ್ಣಬಣ್ಣದ ಅಲಂಕಾರ ಹಾಗೂ ಆ ಸಂದರ್ಭಕ್ಕೆ ಮಾತ್ರ ಎನ್ನುವಂತೆ ಕಾಣುವ ಪ್ರಯಾಣಿಕರ ಅವಶ್ಯಕ ಸೌಲಭ್ಯಗಳು ಮತ್ತೇ ಕಾಣುವುದೇ ಇಲ್ಲ.
ಕನಸಾಗಿಯೇ ಉಳಿದ ಯಾದಗಿರಿ -ಆಲಮಟ್ಟಿ ಯೋಜನೆ:1933 ರಲ್ಲಿ ಬ್ರಿಟಿಷ್ ಕಾಲದಲ್ಲೇ ರೂಪುರೇಷೆಗಳ ಸಿದ್ಧಪಡಿಸಿದ್ದ, ಹೈದರಾಬಾದ್ ಕರ್ನಾಟಕ ಭಾಗದಿಂದ ಮುಂಬೈ ಕರ್ನಾಟಕ ಪ್ರಾಂತ್ಯಗಳ ಸಂಪರ್ಕ ಬೆಸೆಯುವ ಯಾದಗಿರಿ-ಆಲಮಟ್ಟಿ ರೈಲ್ವೆ ಮಾರ್ಗದ ಕನಸು ಕನಸಾಗಿಯೇ ಉಳಿದಿದೆ. ರೇಕ್ ಪಾಯಿಂಟ್ ಸ್ಥಾಪನೆ ಪ್ರಸ್ತಾವಕ್ಕೆ ಜೀವ ಬರಬೇಕಿದೆ.
ಇನ್ನು, ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ ಕುರಿತು ಕೇಂದ್ರದ ಮುಂದೆ ಯಾವುದೇ ಪ್ರಸ್ತಾವ ಇಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಈ ಭಾಗದ ದೊಡ್ಡ ಯೋಜನೆಯೊಂದಕ್ಕೆ ಹಿನ್ನೆಡೆಯಾದಂತಾಗಿದೆ. ಕಲಬುರಗಿ ಜಿಲ್ಲೆಯೊಂದರಿಂದಲೇ ಇಲಾಖೆಗೆ ಒಂದು ಸಾವಿರ ಕೋಟಿ ರು.ಗಳ ವಾರ್ಷಿಕ ಆದಾಯವಿದೆ.ರೈಲ್ವೆ ಬೋಗಿ ತಯಾರಿಕಾ ಕಾರ್ಖಾನೆ :
ಈ ಭಾಗದ ಜನರಿಗೆ ಉದ್ಯೋಗ, ಆಸರೆ ಹಾಗೂ ಬದುಕಿಗೆ ನೆರವಾಗಬಹುದು ಎಂಬ ಕಾರಣಕ್ಕೆ ಬಹು ಮಹತ್ವಾಕಾಂಕ್ಷಿ ಯೋಜನೆಯಾಗಿ ರೂಪುಗೊಂಡಿದ್ದ ಕಡೇಚೂರು-ಬಾಡಿಯಾಳ ಬೋಗಿ ತಯಾರಿಕಾ ಕಾರ್ಖಾನೆ ಬಿಳಿಯಾನೆಯಂತಿದೆ. ಜಮೀನು ನೀಡಿ ಉದ್ಯೋಗ ಕನಸು ಕಂಡ ಇಲ್ಲಿನವರು ಇದು ಸುಳ್ಳೆಂದು ಅರಿತು ಮಹಾನಗರಗಳತ್ತ ಗುಳೇ ಹೊರಟಿದ್ದಾರೆ.ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಮಂಗಳವಾರ ಸಂಜೆ ಯಾದಗಿರಿಗೆ ಆಗಮಿಸಿದ್ದಾರೆ. ಬುಧವಾರ ಇಲ್ಲಿ ಅವರು ಇಲಾಖಾ ಸಭೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಇಲ್ಲಿನ ಸೌಲಭ್ಯಗಳ ಕುರಿತು ಜನಪ್ರತಿನಿಧಿಗಳು-ಸಂಘ ಸಂಸ್ಥೆಗಳು ಮನವರಿಕೆ ಮಾಡುವ ಪ್ರಯತ್ನವಾಗಬೇಕಿದೆ.
=========ಬಾಕ್ಸ್===========ಯಾದಗಿರಿ ನಿಲ್ದಾಣದಲ್ಲಿ ನಿಲ್ಲದ ಪ್ರಮುಖ ರೈಲುಗಳು
1. ಬೆಂಗಳೂರು-ನವದೆಹಲಿ ನಡುವಿನ ರಾಜಧಾನಿ ಎಕ್ಸಪ್ರೆಸ್ (22691/22692),2. ಕೋಯಿಮತ್ತೂರ್- ರಾಜಕೋಟ್ ಎಕ್ಸಪ್ರೆಸ್
3. ದ್ವಾರಕಾ ಎಕ್ಸಪ್ರೆಸ್ (16613/16614)4. ವಾಸ್ಕೋ ಎಕ್ಸಪ್ರೆಸ್ (19567/19568)
5. ಸಾಯಿಶಿರಡಿ ನಗರ ಎಕ್ಸಪ್ರೆಸ್ (22601/22602)6. ಅಹ್ಮದಾಬಾದ್ ಎಕ್ಸಪ್ರೆಸ್ (22929/22920)
7. ಗೋರಖಪುರ ಎಕ್ಸಪ್ರೆಸ್ (22533/22534)8. ಮಧುರೈ ಎಕ್ಸಪ್ರೆಸ್ (22101/22102)
9. ತಿರುಪತಿ ಹಮ್ಸಫರ್ (22919/22920) ಸೇರಿದಂತೆ ಯಾದಗಿರಿ ಮಾರ್ಗವಾಗಿ ಸಾಗುವ ಕೆಲವು ಪ್ರಮುಖ ರೈಲುಗಳ ನಿಲುಗಡೆ ಈ ಭಾಗದ ಜನಜೀವನ/ಉದ್ಯಮ/ಔದ್ಯೋಗಿಕ ವ್ಯಾಪಾರ ವಹಿವಾಟಿಗೆ ಅನುಕೂಲವಾಗಲಿದೆ.---
ಫೋಟೊ:ಸಚಿವ ಸೋಮಣ್ಣ ಹಾಗೂ ರೈಲು ಸಾಂದರ್ಭಿಕ ಚಿತ್ರ ಬಳಸಿ
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಮೇಲೆ ಅಪಾರ ನಿರೀಕ್ಷೆ