ಬಿತ್ತನೆ ಬೀಜದ ದರ ಏರಿಕೆ, ರೈತ ಸಮುದಾಯ ಕಂಗಾಲು

| Published : May 28 2024, 01:02 AM IST

ಸಾರಾಂಶ

ಬೀಜ ಬಿತ್ತನೆಗೆ ಉತ್ಸಾಹದಲ್ಲಿ ಹೊಲ ಹದಗೊಳಿಸಿದ ರೈತರಿಗೆ ಬೀಜ, ಗೊಬ್ಬರ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ

ಮಹೇಶ ಛಬ್ಬಿ ಗದಗ

ರಾಜ್ಯ ಸರ್ಕಾರ ಸಬ್ಸಿಡಿ ದರದಲ್ಲಿ ರೈತರಿಗೆ ವಿತರಣೆ ಮಾಡುವ ಕೆಲವು ಬಿತ್ತನೆ ಬೀಜಗಳ ದರ ಹೆಚ್ಚಳವಾಗಿದೆ. ಇದು ರೈತ ಸಮುದಾಯಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಪ್ರಸಕ್ತ ವರ್ಷ ಉತ್ತಮ ಮುಂಗಾರು ಮಳೆ ನಿರೀಕ್ಷೆ ಇದ್ದು, ಸದ್ಯ ರಾಜ್ಯ, ಜಿಲ್ಲೆಗಳಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಕೃಷಿ ಚಟುವಟಿಕೆ ಗರಿಗೆದರಿದೆ. ಬೀಜ ಬಿತ್ತನೆಗೆ ಉತ್ಸಾಹದಲ್ಲಿ ಹೊಲ ಹದಗೊಳಿಸಿದ ರೈತರಿಗೆ ಬೀಜ, ಗೊಬ್ಬರ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರತಿ 5 ಕೆಜಿ ಬೀಜದ ಪ್ಯಾಕೆಟ್‌ ಮೇಲೆ 250 ರು. ವರೆಗೆ ಹೆಚ್ಚಳವಾಗಿದೆ.

ಅತಿವೃಷ್ಟಿ, ಅನಾವೃಷ್ಟಿ, ಬರ, ಅಸಮರ್ಪಕ ಬೆಳೆ ಪರಿಹಾರ ಸೇರಿದಂತೆ ನಾನಾ ಕಾರಣಗಳಿಂದ ರೈತ ಸಮುದಾಯ ಸಂಕಷ್ಟ ಎದುರಿಸುತ್ತಿದೆ. ಪ್ರಸಕ್ತ ಉತ್ತಮ ಮಳೆ ಮುನ್ಸೂಚನೆ ಸಿಕ್ಕಿದ್ದು, ರೈತರು ಉತ್ಸಾಹದಲ್ಲಿದ್ದಾರೆ. ಬಿತ್ತನೆ ಬೀಜ ಖರೀದಿಗೆ ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಬರುತ್ತಿದ್ದಾರೆ. ಆದರೆ ಬಿತ್ತನೆ ಬೀಜದ ದರ ಕೇಳಿ ಕಂಗಾಲಾಗಿದ್ದಾರೆ. ಬರಗಾಲದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರೈತರಿಗೆ ಮುಂಗಾರು ಬೀಜ ಬಿತ್ತನೆಗೆ ಅನುಕೂಲವಾಗುವಂತೆ ದರ ನಿಗದಿಪಡಿಸಿ, ರೈತರ ಹಿತ ಕಾಪಾಡಬೇಕಿತ್ತು. ಆದರೆ ಏಕಾಏಕಿ ದರ ಹೆಚ್ಚಳ ರೈತರ ನಿದ್ದೆಗೆಡಿಸಿದೆ.

ಸ್ಪಿಕ್ ಡಿಎಪಿ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ:ರೈತರು ಬೀಜ ಬಿತ್ತನೆಗೆ ಹೊಲ ಸಿದ್ಧಗೊಳಿಸಿ, ಬಿತ್ತುವ ತವಕದಲ್ಲಿದ್ದಾರೆ. ಆದರೆ ಬಿತ್ತನೆಗೆ ಸ್ಪಿಕ್ ಡಿಎಪಿ ಗೊಬ್ಬರ ಸಿಗದೇ ಪರದಾಡುತ್ತಿದ್ದಾರೆ. ಬೇರೆ, ಬೇರೆ ತಾಲೂಕು, ಜಿಲ್ಲೆಗಳಿಂದ ಸ್ಪಿಕ್ ಡಿಎಪಿ ಗೊಬ್ಬರವನ್ನು ಹೆಚ್ಚಿನ ದರ ನೀಡಿ ತರುವಂತಹ ಸ್ಥಿತಿ ನಿರ್ಮಾಣವಾಗಿದೆ.

ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಹೇಳುತ್ತಲೇ ಇದೆ. ಆದರೆ ಬೇಡಿಕೆಗೆ ತಕ್ಕಂತೆ ಯಾಕೆ ಪೂರೈಕೆ ಮಾಡುತ್ತಿಲ್ಲ ಎಂಬುದು ರೈತರ ಪ್ರಶ್ನೆ. ಪಕ್ಕದ ತಾಲೂಕು, ಜಿಲ್ಲೆಗಳಿಂದ ಗೊಬ್ಬರವನ್ನು ಹೆಚ್ಚಿನ ದರ ನೀಡಿ, ಸಾರಿಗೆ ವೆಚ್ಚ ಭರಿಸಿ ತರುವಂತಾಗಿದೆ. ರೈತರನ್ನು ಸಾಲದಿಂದ ಮುಕ್ತಗೊಳಿಸಬೇಕಾದ ಸರ್ಕಾರವೇ ರೈತರನ್ನು ಮತ್ತಷ್ಟು ಸಾಲದ ಸುಳಿಯಲ್ಲಿ ಸಿಲುಕುವಂತೆ ಮಾಡುತ್ತಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

2023ರಲ್ಲಿ ಬೀಜದ ದರಬಿತ್ತನೆ ಬೀಜ ಸಾಮಾನ್ಯ ವರ್ಗ ಎಸ್ಸಿ, ಎಸ್ಟಿಹೆಸರು 501 438ತೊಗರಿ 525 462ಜೋಳ. 202 157ಬಾಕ್ಸ್...

2024ರ ಬಿತ್ತನೆ ಬೀಜದ ದರ

ಬಿತ್ತನೆ ಬೀಜಪೂರ್ಣ ದರಸಾಮಾನ್ಯ ವರ್ಗ (ಸಬ್ಸಿಡಿ)ಎಸ್ಸಿ-ಎಸ್ಟಿ (ಸಬ್ಸಿಡಿ)

ಹೆಸರು905 (5 ಕೆಜಿ)785725

ತೊಗರಿ895 (5 ಕೆಜಿ)770707.5

ಜೋಳ375 (3 ಕೆಜಿ)285 240

ಬಿತ್ತನೆ ಗುರಿ:ಜಿಲ್ಲೆಯಲ್ಲಿ 2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 1.25 ಲಕ್ಷ ಹೆಕ್ಟೆರ್‌ ಹೆಸರು, ಮೆಕ್ಕೆ ಜೋಳ 1 ಲಕ್ಷ ಹೆ, 30 ಸಾವಿರ ಹೆ.ಶೇಂಗಾ, 11 ಸಾವಿರ ಹೆ.ಸೂರ್ಯಕಾಂತಿ ಹಾಗೂ 20 ಸಾವಿರ ಹೆ. ಹತ್ತಿ ಸೇರಿದಂತೆ ಒಟ್ಟು 3ಲಕ್ಷ 1 ಸಾವಿರ ಹೆ. ಪ್ರದೇಶದಲ್ಲಿ ಬಿತ್ತನೆ ಕ್ಷೇತ್ರದ ಗುರಿ ಹೊಂದಿದೆ. ವಿವಿಧ ಗೊಬ್ಬರ ದಾಸ್ತಾನು:ಜಿಲ್ಲೆಯಲ್ಲಿ ಯೂರಿಯಾ 7732.79 ಮೆ.ಟನ್, ಡಿಎಪಿ 2574.65 ಮೆ.ಟನ್, ಎಂಓಪಿ 670.20 ಮೆ.ಟನ್, ಎಸ್.ಎಸ್.ಪಿ 174.10 ಮೆ.ಟನ್‌ ಹಾಗೂ ಇತರೆ ಸಂಯುಕ್ತ ರಸಗೊಬ್ಬರ 4435.19 ಮೆ.ಟನ್ ಸೇರಿ ಒಟ್ಟಾರೆ 15586.93 ಮೆ.ಟನ್‍ಗಳಷ್ಟು ವಿವಿಧ ರಸಗೊಬ್ಬರಗಳ ದಾಸ್ತಾನು ಮಾಡಲಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಬೇಡಿಕೆಗೆ ತಕ್ಕಂತೆ ಪೂರೈಸಿ...

ರಾಜ್ಯ ಸರ್ಕಾರ ಸದ್ಯದ ರೈತರ ಪರಿಸ್ಥಿತಿಯನ್ನು ಅರಿತು ದರ ನಿಗದಿಪಡಿಸಬೇಕಿತ್ತು. ಜತೆಗೆ ಬೀಜ ಬಿತ್ತನೆಗೆ ರೈತರ ಬೇಡಿಕೆಗೆ ತಕ್ಕಂತೆ ಸ್ಪಿಕ್ ಡಿಎಪಿ ಗೊಬ್ಬರವನ್ನು ಸ್ಥಳೀಯ ಮಟ್ಟದಲ್ಲಿಯೇ ಸಿಗುವಂತೆ ಕ್ರಮ ಕೈಗೊಳ್ಳಬೇಕಿತ್ತು. ಸಕಾಲದಲ್ಲಿ ಗೊಬ್ಬರ ಸಿಗದೇ ಹೋದರೆ ಬೀಜ ಬಿತ್ತನೆಗೆ ಹಿನ್ನೆಡೆಯಾಗುತ್ತದೆ. ಮುಂದೆ ಇಳುವರಿಯಲ್ಲೂ ಕುಂಠಿತವಾಗುವುದರಿಂದ ರೈತರಿಗೆ ನಷ್ಟವಾಗುತ್ತದೆ ಎನ್ನುತ್ತಾರೆ ರೈತರು.

ಬರದಿಂದ ಕಂಗಾಲಾಗಿದ್ದ ರೈತರಿಗೆ ರಾಜ್ಯ ಸರ್ಕಾರ ಬಿತ್ತನೆ ಬೀಜದ ದರ ಹೆಚ್ಚಿಸುವ ಮೂಲಕ ಗಾಯದ ಮೇಲೆ ಬರೆ ಎಳೆದಿದೆ. ಹೆಸರು ಬೀಜವನ್ನು ಹೊರಗಡೆ ಖರೀದಿಸಿದರೆ 1 ಕೆಜಿ ಹೆಸರಿಗೆ ₹130ರಂತೆ 5 ಕೆಜಿಗೆ ₹650ಕ್ಕೆ ಸಿಗುತ್ತದೆ. ರೈತ ಸಂಪರ್ಕ ಕೇಂದ್ರದಲ್ಲಿ ಸಬ್ಸಿಡಿ ದರದಲ್ಲಿ 5 ಕೆಜಿಗೆ ₹785 ಸರ್ಕಾರ ದರ ನಿಗದಿ ಮಾಡಿದೆ. ಯಾವ ಅರ್ಥದಲ್ಲಿ ರೈತರಿಗೆ ಅನುಕೂಲವಾಗುವಂತೆ ಸಬ್ಸಿಡಿ ದರದಲ್ಲಿ ಬೀಜ ವಿತರಣೆ ಮಾಡುತ್ತಿದೆ ಎಂಬುದೇ ತಿಳಿಯದಂತಾಗಿದೆ. ರೈತ ಸಂಪರ್ಕ ಕೇಂದ್ರದಲ್ಲಿ ವಿತರಿಸಿದ ಹೆಸರು ಬೀಜ ಕೂಡಾ ಗುಣಮಟ್ಟದ್ದಲ್ಲ. ಸಣ್ಣ ಕಾಳು ಇದ್ದು, ಮುಂದೆ ಉತ್ತಮ ಇಳುವರಿ ಬರುವ ಲಕ್ಷಣ ಇಲ್ಲ ಎಂದು ರೈತ ದೇವರಾಜ ಸಂಗನಪೇಟಿ ಹೇಳಿದರು.