ನಿರುದ್ಯೋಗ ಸಮಸ್ಯೆ ತೀವ್ರಗೊಂಡು ಯುವ ಜನತೆಯಲ್ಲಿ ಮಡುಗಟ್ಟಿರುವ ಆಕ್ರೋಶ ಒಂದೆಡೆ ಭುಗಿಲೇಳುತ್ತಿದೆ. ಸರ್ಕಾರಿ ಹುದ್ದೆ ಭರ್ತಿ ಜತೆಗೆ ಕೈಗಾರಿಕಾ ಸ್ಥಾಪನೆಯಾಗಿ ಯುವ ಜನತೆಯ ಕೈಗೆ ಕೆಲಸ ಸಿಗುವಂತೆ ಮಾಡಬೇಕಾದ ತುರ್ತು ಹಿಂದಿಗಿಂತ ಹೆಚ್ಚಿದೆ. ಪ್ರಸಕ್ತ ರಾಜ್ಯ ಬಜೆಟ್‌ನಲ್ಲಿ ಹಾವೇರಿ ಕೈಗಾರಿಕಾ ಕಾರಿಡಾರ್‌ ಅಭಿವೃದ್ಧಿಗೆ ಆದ್ಯತೆ ನೀಡುವ ಅಗತ್ಯವಿದೆ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಹಾವೇರಿನಿರುದ್ಯೋಗ ಸಮಸ್ಯೆ ತೀವ್ರಗೊಂಡು ಯುವ ಜನತೆಯಲ್ಲಿ ಮಡುಗಟ್ಟಿರುವ ಆಕ್ರೋಶ ಒಂದೆಡೆ ಭುಗಿಲೇಳುತ್ತಿದೆ. ಸರ್ಕಾರಿ ಹುದ್ದೆ ಭರ್ತಿ ಜತೆಗೆ ಕೈಗಾರಿಕಾ ಸ್ಥಾಪನೆಯಾಗಿ ಯುವ ಜನತೆಯ ಕೈಗೆ ಕೆಲಸ ಸಿಗುವಂತೆ ಮಾಡಬೇಕಾದ ತುರ್ತು ಹಿಂದಿಗಿಂತ ಹೆಚ್ಚಿದೆ. ಪ್ರಸಕ್ತ ರಾಜ್ಯ ಬಜೆಟ್‌ನಲ್ಲಿ ಹಾವೇರಿ ಕೈಗಾರಿಕಾ ಕಾರಿಡಾರ್‌ ಅಭಿವೃದ್ಧಿಗೆ ಆದ್ಯತೆ ನೀಡುವ ಅಗತ್ಯವಿದೆ.

ಪ್ರಸಕ್ತ ವರ್ಷದ ರಾಜ್ಯ ಬಜೆಟ್‍ನಲ್ಲಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಯೋಜನೆಗಳು ಘೋಷಣೆಯಾಗುವುದು ಜತೆಗೆ ಕುಂಟುತ್ತ ಸಾಗಿರುವ ಯೋಜನೆಗಳು ಈ ವರ್ಷವಾದರೂ ಪೂರ್ಣಗೊಳ್ಳುವ ನಿರೀಕ್ಷೆ ಜನರದ್ದಾಗಿದೆ. ಹಾವೇರಿ ಸಮೀಪದ ಕೋಳೂರು-ಗಣಜೂರು ಗ್ರಾಮಗಳ 400 ಎಕರೆ ಪ್ರದೇಶದ ಕೈಗಾರಿಕಾ ಕಾರಿಡಾರ್ ಕಾಮಗಾರಿ ಕುಂಟುತ್ತ ಸಾಗಿದ್ದು ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗಿದೆ.ನೂರಾರು ಕೋಟಿ ವೆಚ್ಚದಲ್ಲಿ ಕೆಐಎಡಿಬಿ ಕೋಳುರು-ಗಣಜೂರು ನಡುವಿನ 400 ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಸಾಹತು ನಿರ್ಮಾಣ ಕಾಮಗಾರಿಯನ್ನು ಸುಮಾರು 4 ವರ್ಷಗಳ ಹಿಂದೆ ಕೈಗೆತ್ತಿಕೊಂಡಿತು. ಆಗ ಕೈಗಾರಿಕೆಗಳು ಹೇರಳವಾಗಿ ಸ್ಥಾಪನೆಯಾಗಿ ಉದ್ಯೋಗ ಲಭಿಸುವ ಭರವಸೆಯನ್ನು ಜಿಲ್ಲೆಯ ಯುವಜನತೆ, ಉದ್ಯೋಗಾಕಾಂಕ್ಷಿಗಳು ಹೊಂದಿದ್ದರು. ಆದರೆ ಇದುವರೆಗೂ ಕಾಮಗಾರಿ ಪೂರ್ಣಗೊಳ್ಳದಿರುವುದು ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯಮ ಸ್ಥಾಪಿಸುವವರ ಬೇಸರಕ್ಕೆ ಕಾರಣವಾಗಿದೆ.ಉತ್ತಮ ಪ್ರತಿಭೆಗಳಿದ್ದರೂ ಯುವ ಜನತೆ ಉದ್ಯೋಗಕ್ಕಾಗಿ ಹೊರ ಜಿಲ್ಲೆ ಮತ್ತು ಮಹಾ ನಗರಗಳನ್ನು ಅವಲಂಬಿಸುವ ಸಮಸ್ಯೆ ತಪ್ಪಿಲ್ಲ. ಪ್ರಸಕ್ತ ಬಜೆಟ್‍ನಲ್ಲಿ ಈ ಯೋಜನೆಗೆ ಹೆಚ್ಚಿನ ಅನುದಾನ ಲಬಿಸಬೇಕಿದೆ. ಕಾಮಗಾರಿ ಚುರುಕಾಗಿ ನಡೆಸಿ ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ವಹಿಸಬೇಕಿದೆ.ಕೃಷಿಗೆ ಪೂರಕವಾಗಲಿ; ಹಾವೇರಿ ಕೃಷಿ ಪ್ರಧಾನವಾದ ಜಿಲ್ಲೆ. ಈ ಹಿನ್ನೆಲೆಯಲ್ಲಿ ಉದ್ದೇಶಿತ ಕೈಗಾರಿಕಾ ವಸಾಹತುಗಳಲ್ಲಿ ಕೃಷಿಗೆ ಪೂರಕವಾದ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಜಿಲ್ಲೆಯ ಯುವ ಜನತೆಗೆ ಸ್ಥಳೀಯವಾಗಿ ಹೆಚ್ಚಿನ ಉದ್ಯೋಗ ಸೃಷ್ಟಿಸಬೇಕಿದೆ. ಇದರಿಂದ ರೈತರಿಗೂ ಅನುಕೂಲ ಕಲ್ಪಿಸಲು ಸಾಧ್ಯವಿದೆ.ಈಡೇರದ ಹಿಂದಿನ ಬಜೆಟ್‌ ಭರವಸೆಗಳು:2025ರ ರಾಜ್ಯ ಬಜೆಟ್‍ನಲ್ಲಿ ಭಕ್ತಶ್ರೇಷ್ಠ ಕನಕದಾಸರ ಕಾಗಿನೆಲೆಯನ್ನು ಕೂಡಲ ಸಂಗಮದ ಮಾದರಿಯಲ್ಲಿ ವಿಶ್ವಮಟ್ಟದ ಪ್ರವಾಸಿ ತಾಣವಾಗಿ ರೂಪಿಸುವ ಕಾರ್ಯಕ್ಕೆ 34 ಕೋಟಿ ರು. ಅನುದಾನದ ಭರವಸೆ ನೀಡಲಾಗಿತ್ತು. ಹಿರೇಕೆರೂರು ಸರ್ವಜ್ಞ ಕೆರೆ ತುಂಬಿಸುವ ಯೋಜನೆ, ಹಾನಗಲ್ ಹಿರೇಕೌಂಶಿ ಕೆರೆ ತುಂಬಿಸುವ ಯೋಜನೆ, ರಾಣಿಬೆನ್ನೂರಿನಲ್ಲಿ ಜವಳಿ ಪಾರ್ಕ್, ಬ್ಯಾಡಗಿ ಮೆಣಸಿನಕಾಯಿ ತಳಿ ಸಂಸ್ಕರಣೆ ಮತ್ತೆ ಎಲೆ ಮುಟುರು ರೋಗ, ತ್ರಿಪ್ಸ್ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಸಂಶೋಧನೆ ಕೈಗೊಳ್ಳಲು ಯೋಜನೆ, 2024ರ ರಾಜ್ಯ ಬಜೆಟ್‍ನಲ್ಲಿ ವಚನಕಾರ ಸರ್ವಜ್ಞ ಸ್ಮಾರಕದ ಅಭಿವೃದ್ಧಿ, ರಾಣಿಬೆನ್ನೂರಿನಲ್ಲಿ ಮೆಗಾ ಮಾರುಕಟ್ಟೆ ಪ್ರಾಂಗಣದಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ ಪ್ರಾರಂಭಿಸುವುದು ಹಾಗೂ ರಾಣಿಬೆನ್ನೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೋಲ್ಡ್ ಸ್ಟೋರೆಜ್ ನಿರ್ಮಿಸುವುದಾಗಿ ಘೋಷಿಸಲಾಗಿತ್ತು. ಆದರೆ ಇವುಗಳಲ್ಲಿ ಯಾವುದೂ ಈಡೇರಿಲ್ಲ. ಹಾನಗಲ್ಲ ತಾಲೂಕಿನಲ್ಲಿ ಮಾವು ಸಂಸ್ಕರಣಾ ಘಟಕವನ್ನು ಖಾಸಗಿ ಸಹಭಾಗಿತ್ವದಲ್ಲಿ ಮಾಡುವುದಾಗಿ ಘೋಷಿಸಲಾಗಿತ್ತು. ಆದರೆ, ವರ್ಷ ಕಳೆದರೂ ಈ ಬಗ್ಗೆ ಖಾಸಗಿಯವರು ಘಟಕ ಸ್ಥಾಪನೆಗೆ ಆಸಕ್ತಿ ತೋರದಿರುವುದರಿಂದ ಮಾವು ಬೆಳೆಯಿಂದಲೇ ರೈತರು ವಿಮುಖರಾಗುತ್ತಿದ್ದಾರೆ.

ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರ ಹಾವೇರಿ ಜಿಲ್ಲೆಗೆ ರಾಜಕೀಯವಾಗಿ ಹೆಚ್ಚಿನ ಶಕ್ತಿ ನೀಡಿದೆ. ಉಪಚುನಾವಣೆ ಸೇರಿದಂತೆ ಜಿಲ್ಲೆಯ ಎಲ್ಲ ಆರೂ ಶಾಸಕರು ಕಾಂಗ್ರೆಸ್‍ನವರೇ ಆಗಿದ್ದಾರೆ. ಆದರೆ ಜನ ಈ ಸರ್ಕಾರಕ್ಕೆ ಶಕ್ತಿ ತುಂಬಿದಕ್ಕೆ ಪ್ರತಿಯಾಗಿ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡದಿರುವುದು ಎಲ್ಲರ ನಿರಾಸೆಗೆ ಕಾರಣವಾಗಿದೆ. ದಾಖಲೆ ಬಾರಿ ಬಜೆಟ್‌ ಮಂಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಜೆಟ್‍ನಲ್ಲಾದರೂ ಉತ್ತಮ ಯೋಜನೆಗಳನ್ನು ಘೋಷಿಸುವ ಮೂಲಕ ಜಿಲ್ಲೆಯ ಆಶಯಗಳಿಗೆ ಸ್ಪಂದಿಸಬೇಕು ಎಂಬುದು ಜನರ ಆಗ್ರಹವಾಗಿದೆ. ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆ, ಕೈಗಾರಿಕಾ ಕಾರಿಡಾರ್ ಕಾಮಗಾರಿ ಪೂರ್ಣಗೊಳಿಸುವುದು, ನೀರಾವರಿ ಯೋಜನೆಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಯ ಬಗ್ಗೆ ಬಜೆಟ್‍ನತ್ತ ಎಲ್ಲರ ಚಿತ್ತ ನೆಟ್ಟಿದೆ.

ಕೋಳೂರು-ಗಣಜೂರು ಕೈಗಾರಿಕಾ ಪ್ರದೇಶದ ಅಭಿವೃದ್ಧಿ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಸರ್ಕಾರ ಬಜೆಟ್‌ನಲ್ಲಿ ಅನುದಾನ ನೀಡಬೇಕು. 400 ಎಕರೆ ಪೈಕಿ ಮೊದಲ ಹಂತದಲ್ಲಿ 200 ಎಕರೆಯಾದರೂ ಅಭಿವೃದ್ಧಿ ಮಾಡಿ ವಾಣಿಜ್ಯೋದ್ಯಮಿಗಳಿಗೆ ನೀಡಿದರೆ ಅನುಕೂಲವಾಗುತ್ತದೆ. ಇದರಿಂದ ಯುವ ಜನತೆಗೆ ಉದ್ಯೋಗ ಸೃಷ್ಟಿಯಾಗಿ ಜಿಲ್ಲೆಯ ಅಭಿವೃದ್ಧಿಗೂ ನೆರವಾಗಲಿದೆ ಎಂದು ಜಿಲ್ಲಾ ಕೈಗಾರಿಕಾ ಸಂಘದ ಕಾರ್ಯದರ್ಶಿ ರಮೇಶ ಬಳ್ಳಾರಿ ಹೇಳಿದರು.