ಸಾರಾಂಶ
ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ ಹಾವೇರಿಮುಂಗಾರು ಹಂಗಾಮು ಆರಂಭದಲ್ಲೇ ಜಿಲ್ಲೆಯಲ್ಲಿ ಶೇ. 52ರಷ್ಟು ಕ್ಷೇತ್ರಗಳಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಉತ್ತಮ ಮಳೆಗಾಗಿ ಕಾಯದ ರೈತರು, ಆರಂಭಿಕವಾಗಿ ಬಿದ್ದ ಮಳೆಯನ್ನೇ ನಂಬಿ ಬಿತ್ತನೆ ಮಾಡಿದ್ದಾರೆ. ಅದರಲ್ಲಿ ಮೆಕ್ಕೆಜೋಳದ್ದೇ ಸಿಂಹಪಾಲಾಗಿದೆ.
ಕಳೆದ ಮುಂಗಾರು ಹಂಗಾಮು ಕೈಕೊಟ್ಟಿದ್ದರಿಂದ ಭೀಕರ ಬರ ಎದುರಿಸಿರುವ ಜಿಲ್ಲೆಯ ರೈತರು ಈ ಸಲ ಮಳೆ ಹನಿ ಭೂಮಿಗೆ ಬೀಳುವುದನ್ನೇ ಕಾಯುತ್ತಿದ್ದರು. ಮೇ ತಿಂಗಳ ಕೊನೆಯ ವಾರ ಹಾಗೂ ಕಳೆದ ನಾಲ್ಕಾರು ದಿನಗಳಿಂದ ಮಳೆಯಾಗುತ್ತಿದ್ದಂತೆ ಸಿದ್ಧಪಡಿಸಿದ್ದ ಹೊಲದಲ್ಲಿ ಬಿತ್ತನೆ ಮಾಡಿ ಮುಗಿಸಿದ್ದಾರೆ. ಒಣ ಬೇಸಾಯ ಮಾಡುವ ಬಹುಪಾಲು ರೈತರು ಬಿತ್ತನೆ ಮಾಡಿ ಮುಗಿಸಿದ್ದಾರೆ. ಮೇ ತಿಂಗಳಲ್ಲಿ ಒಂದೆರಡು ಮಳೆಯಾಗುತ್ತಲೇ ಸೋಯಾಬಿನ್, ಮೆಕ್ಕೆಜೋಳ ಬಿತ್ತಿ ಅವು ಈಗ ಒಂದಡಿ ಎತ್ತರದ ಸಸಿಗಳಾಗಿವೆ.ಶೇ.52ರಷ್ಟು ಬಿತ್ತನೆ ಸಾಧನೆ: ಜಿಲ್ಲೆಯಲ್ಲಿ ಈ ಮುಂಗಾರು ಹಂಗಾಮಿನಲ್ಲಿ 3.27 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಲ್ಲಿ ಈಗಾಗಲೇ 1.72 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. 7014 ಹೆಕ್ಟೇರ್‌ನಲ್ಲಿ ಭತ್ತ, 1,20,065 ಹೆಕ್ಟೇರ್ ಮೆಕ್ಕೆಜೋಳ, 10668 ಹೆಕ್ಟೇರ್ ಶೇಂಗಾ, 9067 ಹೆಕ್ಟೇರ್‌ನಲ್ಲಿ ಸೋಯಾಬಿನ್, 18960 ಹೆಕ್ಟೇರ್‌ನಲ್ಲಿ ಶೇಂಗಾ ಬಿತ್ತನೆಯಾಗಿದೆ. ಈಗ ಬಿತ್ತನೆ ಕಾರ್ಯ ಮತ್ತಷ್ಟು ಚುರುಕುಗೊಂಡಿದೆ. ಮೆಕ್ಕೆಜೋಳಕ್ಕೆ ಈಗಿನ ಮಳೆ ಪ್ರಮಾಣ ಸಾಕು ಎನ್ನುತ್ತಾರೆ ರೈತರು. ಆಗಾಗ ಒಂದೊಂದು ಮಳೆಯಾಗುತ್ತ ಇದೇ ವಾತಾವರಣ ಮುಂದುವರಿದರೆ ಉತ್ತಮ ಫಸಲು ನಿರೀಕ್ಷಿಸಬಹುದು ಎಂದು ರೈತರು ಹೇಳುತ್ತಾರೆ. ಇನ್ನೊಂದು ವಾರದಲ್ಲಿ ಶೇ. 80ರಷ್ಟು ಬಿತ್ತನೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಎಲ್ಲೆಡೆ ಬಿತ್ತನೆ ಕಾರ್ಯ ನಡೆಯುತ್ತಿದೆ.
ಮೆಕ್ಕೆಜೋಳಕ್ಕೆ ಜೋತು ಬಿದ್ದ ರೈತರು: ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ಬಹುಪಾಲು ಕ್ಷೇತ್ರವನ್ನು ಮೆಕ್ಕೆಜೋಳ ಬೆಳೆ ಆಕ್ರಮಿಸಿಕೊಂಡಿದೆ. ಈ ಸಲ ಕೂಡ ಅದೇ ಬೆಳೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಹಂಗಾಮಿನಲ್ಲಿ 2.05 ಲಕ್ಷ ಮೆಕ್ಕೆಜೋಳ ಬಿತ್ತನೆ ಗುರಿಯಲ್ಲಿ ಈಗಾಗಲೇ 1.20 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮುಗಿದಿದೆ. ಮಳೆ ಸಂಪೂರ್ಣವಾಗಿ ಕೈಕೊಟ್ಟರೂ ಅಲ್ಪಸ್ವಲ್ಪ ಪೀಕು ಮೆಕ್ಕೆಜೋಳದಿಂದ ಸಿಗಬಹುದು ಎಂಬ ಲೆಕ್ಕಾಚಾರ ರೈತರದ್ದು. ಬೇರೆ ಬೆಳೆಯಾದರೆ ನಿಯಮಿತವಾಗಿ ಮಳೆಯಾಗುತ್ತಿದ್ದರೆ ಮಾತ್ರ ಬೆಳೆ ಬರುತ್ತದೆ. ಕೀಟ ಮತ್ತು ರೋಗಬಾಧೆಯೂ ಮೆಕ್ಕೆಜೋಳಕ್ಕೆ ಕಡಿಮೆ ಇರುವುದರಿಂದ ಬಹುಪಾಲು ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಮೇ ತಿಂಗಳಲ್ಲೇ ಅನೇಕರು ಮೆಕ್ಕೆಜೋಳ ಬಿತ್ತನೆ ಮಾಡಿದ್ದು, ಈಗ ಅವು 15 ದಿನಗಳ ಸಸಿಯಾಗಿವೆ. ಮೊದಲೇ ಬಿತ್ತನೆ ಮಾಡಿದವರು ಈಗ ರಂಟೆ ಹೊಡೆಯಲು ಶುರುಮಾಡಿದ್ದಾರೆ. ಹತ್ತಿ, ಶೇಂಗಾ, ಸೋಯಾಬಿನ್ ಕೂಡ ಬಿತ್ತನೆಯಾಗುತ್ತಿದೆ.ಹದವಾದ ಮಳೆ: ಜಿಲ್ಲೆಯಲ್ಲಿ ಮೇ ಅಂತ್ಯದವರೆಗಿನ ಪೂರ್ವ ಮುಂಗಾರು ಅವಧಿಯ ವಾಸ್ತವ ಮಳೆ 121 ಮಿಮೀ ಎದುರು 133 ಮಿಮೀ ಮಳೆ ಬಿದ್ದಿದೆ. ಜೂನ್ ತಿಂಗಳಲ್ಲಿ ಈವರೆಗೆ 51 ಮಿಮೀ ಮಳೆಯಾಗಿದ್ದು, ವಾಡಿಕೆ ಮಳೆ ಪ್ರಮಾಣಕ್ಕಿಂತ ಹೆಚ್ಚು ಮಳೆಯಾಗಿದೆ. ಇನ್ನೂ ಕೆರೆ ಕಟ್ಟೆಗಳು ತುಂಬಿಲ್ಲವಾದರೂ ಬಿತ್ತನೆಗೆ ಯೋಗ್ಯ ವಾತಾವರಣ ಇರುವುದು ಈ ಸಲ ರೈತರನ್ನು ಹೊಲದತ್ತ ಕರೆದೊಯ್ದಿದೆ.
ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ತೀವ್ರಗತಿಯಲ್ಲಿ ನಡೆಯುತ್ತಿದೆ. ಮೇ ತಿಂಗಳಲ್ಲಿ ಆದ ಮಳೆ ಹಾಗೂ ಹಿಂದಿನ ವಾರ ಬಿದ್ದ ಮಳೆ ಬಿತ್ತನೆಗೆ ಹದ ಒದಗಿಸಿದೆ. ಮೆಕ್ಕೆಜೋಳ, ಶೇಂಗಾ, ಹತ್ತಿ ಬಿತ್ತನೆ ಹೆಚ್ಚಾಗಿ ಆಗುತ್ತಿದೆ. ಇನ್ನೊಂದು ಎಂಟುಹತ್ತು ದಿನಗಳಲ್ಲಿ ಶೇ.80ಕ್ಕೂ ಹೆಚ್ಚು ಆಗುವ ನಿರೀಕ್ಷೆಯಿದೆ ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಹೇಳಿದರು.