ಸಾರಾಂಶ
ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಸಚಿವ ಸಂತೋಷ್ ಲಾಡ್ ತಮ್ಮ ವಾಹನದಲ್ಲೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಧಾರವಾಡ
ಇಲ್ಲಿನ ಕೆಲಗೇರಿ ಸೇತುವೆ ಬಳಿ ಮೂರು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿದ್ದು, ಗಾಯಾಳುಗಳನ್ನು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ತಮ್ಮ ವಾಹನದಲ್ಲೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಈ ಮೂಲಕ ಮಾನವೀಯತೆ ಮೆರೆದಿದ್ದಾರೆ.ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಸಚಿವ ಲಾಡ್ ಅಪಘಾತವಾದ ಮಾರ್ಗದಲ್ಲೇ ಸಂಚರಿಸುತ್ತಿದ್ದರು. ಈ ವೇಳೆ ಮೂರು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿತ್ತು. ಮೂರು ಬೈಕ್‌ಗಳಲ್ಲಿದ್ದ ಇಬ್ಬರು ಯುವತಿಯರು ಹಾಗೂ ನಾಲ್ವರು ಯುವಕರು ಗಾಯಗೊಂಡಿದ್ದರು.
ಇದನ್ನು ಗಮನಿಸಿದ ಸಚಿವರು, ಕೂಡಲೇ ಗಾಯಾಳುಗಳನ್ನು ತಮ್ಮ ವಾಹನದಲ್ಲೇ ಕರೆದೊಯ್ದು ಇಲ್ಲಿನ ಸಿವಿಲ್ ಆಸ್ಪತ್ರೆಯಲ್ಲಿ ದಾಖಲಿಸಿದರು. ಗಾಯಾಳುಗಳನ್ನು ಅಪಘಾತದ ಸ್ಥಳದಿಂದ ಮೇಲೆತ್ತಿ ಆಸ್ಪತ್ರೆಯಲ್ಲಿ ಸ್ಟ್ರೇಚರ್ ಹಾಗೂ ವ್ಹೀಲ್ ಚೇರ್ ಮೇಲೆ ಸಾಗಿಸಲು ಸಚಿವರೇ ಕೈಜೋಡಿಸಿದರು. ಧೈರ್ಯ ಹೇಳಿದರು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ನೀಡಲು ವೈದ್ಯಕೀಯ ಸಿಬ್ಬಂದಿಗೆ ಸೂಚಿಸಿದರು.ಸಚಿವರ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಇದನ್ನು ಸಚಿವರು ಟ್ವೀಟ್ ಮಾಡಿದ್ದು, ಹಲವರು ಸಚಿವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಅಲ್ಲದೇ, ಅದನ್ನು ಮರುಟ್ವೀಟ್ ಮಾಡಿದ್ದಾರೆ.