ಸಾರಾಂಶ
ಟೆಂಡರ್ ಆಗಿ 17 ವರ್ಷವಾದರೂ ಮುಗಿದಿಲ್ಲ । ಯೋಜನೆ ಪೂರ್ಣಗೊಂಡರೆ 1200 ಎಕ್ರೆ ಜಮೀನು ನೀರಾವರಿ । 5 ಗ್ರಾಮದ 60 ಕೆರೆಗಳು ಭರ್ತಿ
ಯಡಗೆರೆ ಮಂಜುನಾಥ್,ಕನ್ನಡಪ್ರಭವಾರ್ತೆ, ನರಸಿಂಹರಾಜಪುರ
ತಾಲೂಕಿನ ಹೊನ್ನೇಕೊಡಿಗೆ ಏತ ನೀರಾವರಿ ಯೋಜನೆ ಕಳೆದ 17 ವರ್ಷಗಳ ಹಿಂದೆ ಪ್ರಾರಂಭವಾಗಿದ್ದರೂ ಅರಣ್ಯ ಇಲಾಖೆ ಒಪ್ಪಿಗೆ ಸಿಗದೆ ಇನ್ನೂ ನೆನೆಗುದಿಗೆ ಬಿದ್ದಿದ್ದು ಈ ಭಾಗದ ಜನರು ತಮ್ಮ ಜಮೀನಿನ ನೀರಾವರಿಗೆ ಚಾತಕ ಪಕ್ಷಿಯಂತೆ ಇನ್ನೂ ಕಾಯುತ್ತಲೇ ಇದ್ದಾರೆ. ಭದ್ರಾ ಡ್ಯಾಂ ಆದ ನಂತರ ಹೊನ್ನೇಕೊಡಿಗೆ ಗ್ರಾಪಂ ವ್ಯಾಪ್ತಿಯ ಸಾಲೂರು, ಬಿಳಾಲುಕೊಪ್ಪ, ಹಂದೂರು, ಹೊನ್ನೇಕೊಡಿಗೆ ಹಾಗೂ ವರ್ಕಾಟೆ ಗ್ರಾಮಗಳಲ್ಲಿ ಕೆಲವು ನೀರಾವರಿ ಜಮೀನು ಮುಳುಗಡೆಯಾಯಿತು. ಉಳಿದ ಜಮೀನಿನಲ್ಲಿ ನಿರಾಶ್ರಿತರಾದ ರೈತರು ಮನೆಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಆದರೆ, ಆ ರೈತರು ಇರುವ ಜಮೀನುಗಳಲ್ಲಿ ನೀರು ಕಡಿಮೆಯಾಗಿರುವುದರಿಂದ ರೈತರಿಗೆ ನಿರೀಕ್ಷಿತ ಫಲ ಸಿಗುತ್ತಿಲ್ಲ. 1978 ರಲ್ಲಿ ಅರ್ಜಿ: ಭದ್ರಾ ನದಿ ಕಣ್ಣಿಗೆ ಕಾಣುತ್ತಿದ್ದರೂ ಕೈಗೆ ನೀರು ಸಿಗದೆ ಈ ಭಾಗದ ರೈತರಿಗೆ ಮರೀಚಿಕೆಯಾಗಿತ್ತು. ಇದನ್ನು ಮನಗಂಡ ಹೊನ್ನೇಕೊಡಿಗೆ ಹಿರಿಯ ಕೃಷಿಕರು ಹಾಗೂ ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯರಾಗಿದ್ದ ಎಚ್.ಎಸ್.ಕೃಷ್ಣಯ್ಯ ಮೊದಲ ಬಾರಿಗೆ ಗ್ರಾಮಸ್ಥರ ಸಹಕಾರದೊಂದಿಗೆ 1978 ರಲ್ಲಿ ಏತ ನೀರಾವರಿಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರು. ಹಲವು ಹೋರಾಟದ ನಂತರ 2007 ರಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಅಂದಾಜು ಪಟ್ಟಿಗೆ ಅನುಮೋದನೆ ದೊರೆಯಿತು. ಹೊನ್ನೇಕೊಡಿಗೆ ಏತ ನೀರಾವರಿಗೆ ಅಂದಾಜು 3 .75 ಕೋಟಿ ರು. ಮಂಜೂರಾಗಿ, ಹೊನ್ನೇಕೊಡಿಗೆ ಏತ ನೀರಾವರಿ ಯೋಜನೆ ಕಾಮಗಾರಿ ಪ್ರಾರಂಭವಾಯಿತು.ಈ ಯೋಜನೆ ಪ್ರಕಾರ ಸಾಲೂರು, ಹೊನ್ನೇಕೊಡಿಗೆ, ಬಿಳಾಲುಕೊಪ್ಪ, ಹಂದೂರು ಹಾಗೂ ವರ್ಕಾಟೆ ಸ್ವಲ್ಫ ಭಾಗದ ಜಮೀನುಗಳು ನೀರಾವರಿಗೆ ಒಳಪಡಲಿವೆ. ಉದ್ದೇಶಿತ ಯೋಜನೆಯ ಪ್ರಕಾರ ಭದ್ರಾ ನದಿ ಪಕ್ಕದಲ್ಲಿ ಜಾಕ್ ವೆಲ್ ನಿರ್ಮಿಸಿ ಅಲ್ಲಿಂದ ಪಂಪ್ ಸೆಟ್ ಮೂಲಕ ನೀರೆತ್ತಿ ಸಾಲೂರು ಗ್ರಾಮದ ಎತ್ತರದ ಜಾಗದಲ್ಲಿ ಟ್ಯಾಂಕ್ ನಿರ್ಮಿಸುವುದು. ಅಲ್ಲಿಂದ ಗ್ರಾವಿಟಿ ಮೂಲಕ 60 ಕೆರೆಗಳಿಗೆ ನೀರು ತುಂಬಿಸುವುದು. ಆ ಕೆರೆಗಳ ಕೆಳಭಾಗದಲ್ಲಿ ಬರುವ ಸಾಲೂರು, ಹೊನ್ನೇಕೊಡಿಗೆ, ಬಿಳಾಲುಕೊಪ್ಪ, ಹಂದೂರು ಹಾಗೂ ವರ್ಕಾಟೆ ಗ್ರಾಮದ ಜಮೀನುಗಳಿಗೆ ನೀರು ಹಾಯಿಸುವುದು ಉದ್ದೇಶವಾಗಿದೆ. ತೊಡಕಾದ ಅರಣ್ಯ ಇಲಾಖೆ ಕಾನೂನು: ಆದರೆ, ಅಂದುಕೊಂಡಂತೆ ಹೊನ್ನೇಕೊಡಿಗೆ ಏತ ನೀರಾವರಿ ಯೋಜನೆ ಪ್ರಾರಂಭವಾಗಿ 17 ವರ್ಷವಾದರೂ ಪರಿಪೂರ್ಣವಾಗಿ ಮುಗಿದಿಲ್ಲ ಎಂದು ಇಲ್ಲಿನ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಾರಂಭದಲ್ಲಿ ಭದ್ರಾ ನದಿ ಪಕ್ಕದ ಹೆಬ್ಬೆ ದೋಣಿ ಗುಂಡಿ ಹತ್ತಿರ ಬೃಹತ್ ಗಾತ್ರದ ಜಾಕ್ ವೆಲ್, ಪಂಪ್ ಹೌಸ್ ಕೆಲಸ ಮುಗಿಸಲಾಯಿತು. ಸಾಲೂರು ಗ್ರಾಮದ ಎತ್ತರದ ಜಾಗದಲ್ಲಿ ಓವರ್ ಟ್ಯಾಂಕ್ ನಿರ್ಮಾಣ ಮತ್ತು ಭದ್ರಾ ನದಿಯ ಪಕ್ಕದ ಜಾಕ್ ವೆಲ್, ಪಂಪ್ ಹೌಸ್ ನಿಂದ ಓವರ್ ಟ್ಯಾಂಕಿಗೆ ನೀರು ತರಲು ಬೃಹತ್ ಗಾತ್ರದ ಪೈಪುಗಳು ಹಾಕಬೇಕಾಗಿತ್ತು. ಇದಕ್ಕೆ ಅಂದಾಜು 1.77 ಹೆಕ್ಟೇರ್ ಜಾಗ ಬೇಕಾಗಿತ್ತು. ಈ ಜಾಗ ಅರಣ್ಯ ಇಲಾಖೆಗೆ ಸೇರಿದ್ದರಿಂದ ಪೈಪ್ ಲೈನ್ ಹಾಕಲು, ಓವರ್ ಟ್ಯಾಂಕ್ ನಿರ್ಮಿಸಲು ಇಲಾಖೆ ಒಪ್ಪಿಗೆ ನೀಡಲಿಲ್ಲ. ಇದರಿಂದಾಗಿ ಅರಣ್ಯ ಇಲಾಖೆ ಒಪ್ಪಿಗೆಗಾಗಿ ಶಬರಿಯಂತೆ ಕಾಯುತ್ತ ಹತ್ತಾರು ವರ್ಷವೇ ಕಳೆದರೂ, ಜನರಿಗೆ ಏತ ನೀರಾವರಿ ಯೋಜನೆ ಇನ್ನೂ ಮರೀಚಿಕೆಯಾಗೇ ಉಳಿದಿದೆ. ಭದ್ರಾ ನದಿಯಿಂದ ಓವರ್ ಟ್ಯಾಂಕಿಗೆ ಸಂಪರ್ಕ ಕಲ್ಪಿಸಲು ತಂದಿದ್ದ ಬೃಹತ್ ಗಾತ್ರದ ಪೈಪು ಹಾಗೂ ಇತರ ಸಲಕರಣೆಗಳು ಬಿಸಿಲು, ಮಳೆ ಎನ್ನದೆ ಹಾಗೆ ಬಿದ್ದಿವೆ. ಸರ್ಕಾರ ಇಂತಹ ದೊಡ್ಡ ಯೋಜನೆಗಳನ್ನು ಜನರ ಉಪಯೋಗಕ್ಕಾಗಿ ಮಾಡಿರುವಾಗ ಸರ್ಕಾರದ ಇನ್ನೊಂದು ಅಂಗವೇ ಆಗಿರುವ ಅರಣ್ಯ ಇಲಾಖೆ ಕಾನೂನನ್ನು ಮುಂದೆ ಇಟ್ಟುಕೊಂಡು ಇಷ್ಟು ಸುಧೀರ್ಘವಾಗಿ ತಡೆ ಒಡ್ಡಿರುವುದು ಪ್ರಜಾ ಪ್ರಭುತ್ವದ ಅಣಕವಾಗಿದೆ. ತಕ್ಷಣ ಸಂಬಂಧಪಟ್ಟವರು ಅಡ್ಡಿ, ಆತಂಕಗಳನ್ನು ದೂರ ಮಾಡಿ ಹೊನ್ನೇಕೊಡಿಗೆ ಏತ ನೀರಾವರಿ ಯೋಜನೆ ಪೂರ್ಣಗೊಳಿಸಬೇಕು ಎಂಬುದು ಈ ಭಾಗದ ಗ್ರಾಮಸ್ಥರ ಆಗ್ರಹವಾಗಿದೆ. --ಕೋಟ್ -
ಹೊನ್ನೇಕೊಡಿಗೆ ಏತ ನೀರಾವರಿ ಯೋಜನೆಗೆ 1978 ರಲ್ಲಿ ನಾನೇ ಪ್ರಥಮವಾಗಿ ಗ್ರಾಮಸ್ಥರ ಸಹಕಾರದಿಂದ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದೆ. ನಂತರ ಈ ನೀರಾವರಿ ಯೋಜನೆಗೆ ಹಲವು ವರ್ಷಗಳ ಹೋರಾಟ ಮಾಡಿ ಹಣ ಮಂಜೂರಾಗಿ ಅರ್ಧ ಕಾಮಗಾರಿ ಆಗಿದೆ. ಆದರೆ, ಪೈಪ್‌ಗಳು ಅರಣ್ಯ ಇಲಾಖೆ ಜಾಗದಲ್ಲಿ ಹೋಗಬೇಕಾಗಿರುವುದರಿಂದ ಅರಣ್ಯ ಇಲಾಖೆ ಒಪ್ಪಿಗೆ ನೀಡದೆ ಏತ ನೀರಾವರಿ ಯೋಜನೆ ನೆನೆಗುದಿಗೆ ಬಿದ್ದಿದೆ. ಸಂಬಂಧಪಟ್ಟವರು ಎಲ್ಲಾ ತೊಡಕುಗಳನ್ನು ನಿರ್ಮೂಲನೆ ಮಾಡಿ ಹೊನ್ನೇಕೊಡಿಗೆ ಏತ ನೀರಾವರಿ ಯೋಜನೆಯನ್ನು ತ್ವರಿತವಾಗಿ ಮುಗಿಸಿಕೊಡಬೇಕು.ಎ.ಎಸ್. ಕೃಷ್ಣಯ್ಯ, ತಾಲೂಕು ಅಭಿವೃದ್ಧಿ ಮಂಡಳಿ ಮಾಜಿ ಸದಸ್ಯರು--- ಕೋಟ್---
ಏತ ನೀರಾವರಿ ಯೋಜನೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಪೈಪ್ ಲೈನ್ ಹೋಗಲು ಅರಣ್ಯ ಇಲಾಖೆ ಒಪ್ಪಿಗೆ ನೀಡಿಲ್ಲ. ಇಷ್ಟು ದೊಡ್ಡ ಯೋಜನೆ ರೂಪಿಸುವಾಗ ಇದರ ಸಾಧಕ ಬಾಧಕಗಳನ್ನು ಸಂಬಂಧಪಟ್ಟ ಅಧಿಕಾರಿಗಳು ತಿಳಿದು ಕೊಂಡು ಯೋಜನೆ ರೂಪಿಸಬೇಕಾಗಿತ್ತು. ಅರಣ್ಯ ಇಲಾಖೆ ಕಠಿಣ ಕಾನೂನು ರೈತರಿಗೆ ತೊಂದರೆಯಾಯಿತು.ಮೀನಾಕ್ಷಿ ಕಾಂತರಾಜ್,
ತಾಲೂಕು ಪಂಚಾಯಿತಿ ಮಾಜಿ ಸದಸ್ಯರು,ಹೊನ್ನೇಕೊಡಿಗೆ
ಪೋಟೋ ವಿವರ-( 12.ಕೆ.ಎನ್.ಆರ್.ಪಿ.1)ನರಸಿಂಹರಾಜಪುರ ತಾಲೂಕಿನ ಹೊನ್ನೇಕೊಡಿಗೆ ಏತ ನೀರಾವರಿ ಯೋಜನೆಗೆ ತಂದಿದ್ದ ದೊಡ್ಡ ಗಾತ್ರದ ಪೈಪುಗಳು ಹತ್ತಾರು ವರ್ಷದಿಂದ ರಸ್ತೆಯ ಪಕ್ಕದಲ್ಲೇ ಬಿದ್ದಿದೆ. ಪೋಟೋ ವಿವರ- ( 12.ಕೆ.ಎನ್.ಆರ್.ಪಿ.2)
ನರಸಿಂಹರಾಜಪುರ ತಾಲೂಕಿನ ಹೊನ್ನೇಕೊಡಿಗೆ ಏತ ನೀರಾವರಿ ಯೋಜನೆಗೆ ಭದ್ರಾ ನದಿ ಪಕ್ಕದಲ್ಲಿ ನಿರ್ಮಿಸಿರುವ ಪಂಪ್ ಹೌಸ್.