ಮಳಲಿ ಮಸೀದಿ ವಿವಾದ: ಉತ್ಖನನ ಮಾಡಿ ಸರ್ವೇಗೆ ವಿಹಿಂಪ ಅರ್ಜಿ

| Published : Feb 09 2024, 01:46 AM IST / Updated: Feb 09 2024, 04:37 PM IST

ಸಾರಾಂಶ

ಮಳಲಿ ಮಸೀದಿ ವಿವಾದ ಸಂಬಂಧ ವಿಹಿಂಪ 2022 ಏ.22ರಂದು ಕೋರ್ಟ್ ‌ಮೆಟ್ಟಿಲೇರಿತ್ತು. ತಾಂಬೂಲ ಪ್ರಶ್ನೆಯಲ್ಲಿ ಮಸೀದಿಯಲ್ಲಿ ದೇವ ಸಾನಿಧ್ಯ ಇರುವುದು ಪತ್ತೆಯಾಗಿತ್ತು. ಆ ಬಳಿಕದ ಬೆಳವಣಿಗೆಯಲ್ಲಿ ಕಾನೂನು ಹೋರಾಟ ನಡೆದಿದ್ದು, ಅದರ ಫಲಿತಾಂಶಕ್ಕಾಗಿ ವಿಹಿಂಪ ಕಾಯುತ್ತಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಅಯೋಧ್ಯೆ, ಕಾಶಿ ಜ್ಞಾನವ್ಯಾಪಿ ಮಾದರಿಯಲ್ಲೇ ಮಂಗಳೂರಿನ ಮಳಲಿ ಮಸೀದಿ ವಿಚಾರದಲ್ಲಿ ಉತ್ಖತನ ಮಾಡಿ ಸರ್ವೆ ಕಾರ್ಯ ನಡೆಸುವಂತೆ ವಿಶ್ವಹಿಂದು ಪರಿಷತ್‌ ಮಂಗಳೂರಿನ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. 

ಆದರೆ ಈ ವಿಚಾರದಲ್ಲಿ ಹೈಕೋರ್ಟ್‌ ನೀಡಿದ ತೀರ್ಪಿನ ಪ್ರತಿ ಲಭಿಸಿದ ಬಳಿಕ ಮಸೀದಿ ವಕೀಲರು ವಾದ ಮಂಡಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಮುಂದಿನ ವಿಚಾರಣೆಯನ್ನು ಫೆ.17ಕ್ಕೆ ಮುಂದೂಡಲಾಯಿತು.

ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್‌ನಲ್ಲಿ ವಿಹಿಂಪ ಪರವಾಗಿ ಧನಂಜಯ್‌ ಎಂಬವರು ಅರ್ಜಿ ಸಲ್ಲಿಸಿದ್ದು, ವಿವಾದಿತ ಮಳಲಿ ಮಸೀದಿಯ ಉತ್ಖನನ ಮಾಡಿ ಸರ್ವೇ ನಡೆಸಲು ಮನವಿ ಮಾಡಲಾಗಿದೆ. 

ಅಲ್ಲದೆ ಕೋರ್ಟ್ ಕಮಿಷನ್‌ ನೇಮಿಸಿ ಸರ್ವೇ ನಡೆಸಲು ಅರ್ಜಿಯಲ್ಲಿ ಆಗ್ರಹಿಸಲಾಗಿದೆ. ಈ ಕುರಿತು ಮಂಗಳವಾರ ಅರ್ಜಿ ಸ್ವೀಕರಿಸಲಾಗಿದ್ದು, ಗುರುವಾರ ವಿಚಾರಣೆಗೆ ಬಂದಿದೆ. 

ಇದೇ ವೇಳೆ ಮಳಲಿ ಮಸೀದಿ ವಕ್ಫ್‌ ಆಸ್ತಿ ಹೌದೋ ಅಲ್ಲವೇ ಎಂಬ ಬಗ್ಗೆ ಹೈಕೋರ್ಟ್‌ ತೀರ್ಪು ಆಧರಿಸಿ ಮಸೀದಿ ಆಡಳಿತ ವಾದ ಮಂಡಿಸಲಿದೆ.

ಮಂಗಳೂರು ಕೋರ್ಟ್‌ನಲ್ಲಿ ವಿಹಿಂಪ ಪರ ವಾದ ಮಂಡಿಸಿದ ವಕೀಲ ಚಿದಾನಂದ ಕೆದಿಲಾಯ, ವಿವಾದಿತ ಕಟ್ಟಡದ ವಿನ್ಯಾಸದ ಬಗ್ಗೆ ಅನುಮಾನಗಳಿವೆ. ಈ ಕಟ್ಟಡದ ವಿನ್ಯಾಸ ಸರ್ವೇ ನಡೆಸಿದ ಬಳಿಕವಷ್ಟೇ ಬಹಿರಂಗ ಆಗಬಹುದು. 

ಹೀಗಾಗಿ ಕೋರ್ಟ್ ಸರ್ವೇ ನಡೆಸಲು ಅನುಮತಿ ನೀಡಬೇಕು. ಪುರಾತತ್ವ ಇಲಾಖೆ ನೇತೃತ್ವದಲ್ಲಿ ಕೋರ್ಟ್ ಕಮಿಷನ್ ನೇಮಿಸಿ ಸರ್ವೇ ನಡೆಯಲಿ. ಉತ್ಖನನ ಮಾಡಿದರೆ ಅಲ್ಲಿ ನಿಜವಾಗಿ ಯಾವ ರಚನೆ ಇದೆ ಎಂಬ ಬಗ್ಗೆ ಉತ್ತರ ದೊರೆಯಲಿದೆ. 

ಭಾರತೀಯ ವಾಸ್ತುಶಿಲ್ಪದ ವಿನ್ಯಾಸ ಮತ್ತು‌ ರಚನೆ ಇರುವಂತೆ ಕಾಣುತ್ತಿದೆ. ಯಾವುದೇ ಪ್ರಾಚೀನ ಸ್ಮಾರಕ ಅಥವಾ ಹಿಂದು ದೇವರ ವಿನ್ಯಾಸವೂ ಇರಬಹುದು. 

ಅಲ್ಲಿ ಏನಿದೆ? 
ಏನಿತ್ತು ಎಂಬ ಬಗ್ಗೆ ಉತ್ತರ ಸಿಗಬೇಕು ಎಂದು ವಾದ ಮಂಡಿಸಿದರು. ಮಸೀದಿ ಪರ ವಕೀಲರು ವಿಹಿಂಪ ಪರ ವಕೀಲರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಈಗಾಗಲೇ ಹೈಕೋರ್ಟ್‌ನಿಂದ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್‌ಗೆ ನಿರ್ದೇಶನ ನೀಡಲಾಗಿದೆ. ಅದರ ಪ್ರತಿ ಲಭಿಸಿದ ಬಳಿಕ ವಾದ ಮಂಡಿಸುವುದಾಗಿ ಮಸೀದಿ ಪರ ವಕೀಲರು ಹೇಳಿದರು. 

ಹೀಗಾಗಿ ಹೈಕೋರ್ಟ್ ಆದೇಶ ತಲುಪಿದ ಕೂಡಲೇ ಮಂಗಳೂರು ಕೋರ್ಟ್‌ನಲ್ಲಿ ಮತ್ತೆ ವಿಚಾರಣೆ ಆರಂಭವಾಗಲಿದೆ.ವಾದ ಮಂಡನೆಗೆ ವಕ್ಫ್‌ ಬೋರ್ಡ್‌ ಸಿದ್ಧತೆ: ವಿವಾದದಲ್ಲಿ ವಕ್ಫ್ ಬೋರ್ಡ್ ಪ್ರವೇಶ ಮಾಡಿದ್ದು, ಅದು ತನ್ನದೇ ಆಸ್ತಿ ಎಂದು ಪ್ರತ್ಯೇಕ ವಾದ ಮಂಡಿಸಲು ನಿರ್ಧರಿಸಿದೆ. ಮಳಲಿ ಮಸೀದಿ ವಕ್ಫ್ ಆಸ್ತಿ ಎಂದು‌ ದ.ಕ. ವಕ್ಫ್ ಬೋರ್ಡ್ ದಾಖಲೆ ಸಲ್ಲಿಸಲಿದೆ.

ಮಳಲಿ ಮಸೀದಿ ವಿವಾದ ಸಂಬಂಧ ವಿಹಿಂಪ 2022 ಏ.22ರಂದು ಕೋರ್ಟ್ ‌ಮೆಟ್ಟಿಲೇರಿತ್ತು. ಮೇ 25, 2022ರಂದು ವಿಹಿಂಪ ಮಳಲಿ ಭಜನಾ ಮಂದಿರದಲ್ಲಿ ಈ ವಿವಾದ ಸಂಬಂಧ ತಾಂಬೂಲ ಪ್ರಶ್ನೆಇರಿಸಿತ್ತು. 

ತಾಂಬೂಲ ಪ್ರಶ್ನೆಯಲ್ಲಿ ಮಸೀದಿಯಲ್ಲಿ ದೇವ ಸಾನಿಧ್ಯ ಇರುವುದು ಪತ್ತೆಯಾಗಿತ್ತು. ಆ ಬಳಿಕದ ಬೆಳವಣಿಗೆಯಲ್ಲಿ ಕಾನೂನು ಹೋರಾಟ ನಡೆದಿದ್ದು, ಅದರ ಫಲಿತಾಂಶಕ್ಕಾಗಿ ವಿಹಿಂಪ ಕಾಯುತ್ತಿದೆ.