ಸಾರಾಂಶ
ಕೊಟ್ಟೂರು: ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನದ ಅರಿವು ಮೂಡಿಸುವ ಅಧ್ಯಾಯಗಳನ್ನು ಹೊಂದಿರುವ ಶಿಕ್ಷಣಶಾಸ್ತ್ರ ವಿಷಯ ಕೇವಲ ಉತ್ತರ ಕರ್ನಾಟಕ ಭಾಗದ ಪಿಯು ಕಾಲೇಜುಗಳಿಗೆ ಸೀಮಿತವಾಗದೇ ರಾಜ್ಯದ ಎಲ್ಲ ಕಾಲೇಜುಗಳಲ್ಲಿ ಇರುವಂತಾಗಬೇಕು ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಟಿ.ಪಾಲಾಕ್ಷ ಹೇಳಿದರು.
ಪಟ್ಟಣದ ಇಂದು ಪ.ಪೂ.ಕಾಲೇಜಿನಲ್ಲಿ 2 ದಿನಗಳ ಕಾಲ ಆಯೋಜಿಸಿರುವ 14ನೇ ರಾಜ್ಯ ಮಟ್ಟದ ಪ.ಪೂ.ಕಾಲೇಜುಗಳ ಶಿಕ್ಷಣ ಶಾಸ್ತ್ರವಿಷಯ ಉಪನ್ಯಾಸಕ ಶೈಕ್ಷಣಿಕ ಸಮ್ಮೇಳನ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಅವರು ಶುಕ್ರವಾರ ಮಾತನಾಡಿದರು.ಇತ್ತೀಚಿನೆ ದಿನಗಳಲ್ಲಿ ಶಿಕ್ಷಣ ಶಾಸ್ತ್ರ ವಿಷಯ ಆಯ್ದುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಸದರಿ ವಿಷಯದ ಉಪನ್ಯಾಸಕರಲ್ಲಿ ಆತಂಕ ಮೂಡಿಸಿದೆ. ರಾಜ್ಯದ ಉತ್ತರ ಕರ್ನಾಟಕ ಭಾಗದ ಬಹುತೇಕ ಪಿಯು ಕಾಲೇಜುಗಳಲ್ಲಿ ಶಿಕ್ಷಣಶಾಸ್ತ್ರ ವಿಷಯ ಇರುತ್ತದೆ. ಆದರೆ ಕರಾವಳಿ, ಮಲೆನಾಡು, ಮೈಸೂರು, ಬೆಂಗಳೂರು ಭಾಗದ ಬಹುತೇಕ ಪಿಯು ಕಾಲೇಜುಗಳಲ್ಲಿ ಈ ವಿಷಯ ಅಪರೂಪವಾಗಿದೆ. ಎಲ್ಲ ಕಾಲೇಜುಗಳಲ್ಲಿ ಶಿಕ್ಷಣ ಶಾಸ್ತç ವಿಷಯ ಇದ್ದಾಗ ಮಾತ್ರ ಆ ವಿಷಯದ ಉಪನ್ಯಾಸಕರಿಗೆ ಯಾವುದೇ ಆತಂಕವಿಲ್ಲ. ಕಲಾ ವಿಭಾಗದ ವಿದ್ಯಾರ್ಥಿಗಳು ಶಿಕ್ಷಣಶಾಸ್ತ್ರ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವ ರಾಜ್ಯದ ಪಿಯು ಕಾಲೇಜುಗಳ ವಿಷಯ ಉಪನ್ಯಾಸಕರು ಜಾಗೃತಿ ಮೂಡಿಸಬೇಕು. ಆಗ ಮಾತ್ರ ಈ ವಿಷಯದ ಉಪನ್ಯಾಸಕರ ವೃತ್ತಿಗೆ ಯಾವುದೇ ಸಂಚಕಾರವಾಗುವುದಿಲ್ಲ. ಇದೇ ನಿಟ್ಟಿನಲ್ಲಿ ಶೈಕ್ಷಣಿಕ ಸಮ್ಮೇಳನ ಹಾಗೂ ಕಾರ್ಯಾಗಾರದಲ್ಲಿ ಪಾಲ್ಗೊಂಡು ವಿಷಯ ಉಪನ್ಯಾಸಕರು ಜಾಗೃತಿ ವಹಿಸಬೇಕು ಎಂದರು.
ಸಂಘದ ಗೌರವ ಸಲಹೆಗಾರ ಬಿ.ಭರತ್‌ಭೂಷಣ್ ಮಾತನಾಡಿ, ಪಿಯು ಕಲಾ ವಿಭಾಗದಲ್ಲಿ ಶಿಕ್ಷಣ ಶಾಸ್ತ್ರ ವಿಷಯ ಅಳವಡಿಕೆಯಾಗಲು ಡಿಎಡ್ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದ್ದ ಶಿಕ್ಷಣ ಶಾಸ್ತ್ರ ವಿಷಯವನ್ನು ಪಿಯು ವಿದ್ಯಾರ್ಥಿಗಳಿಗೆ ಪರಿಚಯಿಸಿದ್ದು ಡಿಎಡ್ ಕಾಲೇಜೊಂದರ ಉಪನ್ಯಾಸಕ ಭೀಮಪ್ಪ ಎಂಬುವರು.ಎಲ್ಲರಲ್ಲೂ ಜಾಗೃತಿ ಮೂಡಿಸವುದೇ ಶಿಕ್ಷಣ ಶಾಸ್ತçದ ಪರಿಕಲ್ಪನೆಯಾಗಿದೆ. ಸುದೀರ್ಘ 14 ವರ್ಷಗಳ ಕಾಲ ಶಿಕ್ಷ್ಷಣ ಶಾಸ್ತç ವಿಷಯದ ಸಮ್ಮೇಳನ ನಡೆಯುತ್ತ ಬಂದಿರುವುದು ದಾಖಲೆಯಾಗಿದೆ. ಶಿಕ್ಷಣ ಶಾಸ್ತ್ರವಿಷಯಸಮ್ಮೇಳನ ಹಾಗೂ ಕಾರ್ಯಾಗಾರ, ಆ ವಿಷಯದ ಉಪನ್ಯಾಸಕರಲ್ಲಿ ಹೊಸ ಮನ್ವಂತರವನ್ನು ಸೃಷ್ಟಿಸುತ್ತದೆ ಎಂದರು.ಪಿಯು ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ನಾಗರಾಜ್ ಹವಾಲ್ದಾರ್ ಮಾತನಾಡಿ, ಪಟ್ಟಣದಲ್ಲಿ ಆಗುತ್ತಿರುವ ಅಕ್ಷರ ಕ್ರಾಂತಿಯಿದ ಕೊಟ್ಟೂರು ಶೈಕ್ಷಣಿಕ ಜಿಲ್ಲೆಯಾಗುವ ದಿಕ್ಸೂಚಿಯಾಗಿದೆ. ವಿಜ್ಞಾನ ವಿಷಯ ಪಡೆದ ವಿದ್ಯಾರ್ಥಿಗಳು ವೈದ್ಯ, ಎಂಜಿನಿಯರ್, ಇತರೆ ಕೋರ್ಸ್ ಮುಗಿಸಿ ವಿದೇಶಕ್ಕೆ ಹಾರುತ್ತಿದ್ದರೆ, ಕಲಾ ವಿಭಾಗದ ವಿದ್ಯಾರ್ಥಿಗಳು ದೇಶ, ರಾಜ್ಯದಲ್ಲಿಯೇ ಉನ್ನತ ಹುದ್ದೆ ಪಡೆದು ದೇಶ ಅಭಿವೃದ್ಧಿಯಲ್ಲಿ ಪಾಲುದಾರರಾಗುತ್ತಿದ್ದಾರೆ. ಕೊಟ್ಟೂರಿನ ಇಂದು ಪಿಯು ಕಾಲೇಜು ತನ್ನ ಶೈಕ್ಷಣಿಕ ಗುಣಮಟ್ಟದ ಮೂಲಕ ಇತರೆ ಕಾಲೇಜುಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.
ಇಂದು ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಎಚ್.ಎನ್. ವೀರಭದ್ರಪ್ಪ ಮಾತನಾಡಿ, ಕಾಲೇಜಿನ ಎಲ್ಲ ಸಿಬ್ಬಂದಿ ಪ್ರಾಮಾಣಿಕವಾಗಿ ಶ್ರದ್ಧೆ ವಹಿಸಿದಾಗ ಮಾತ್ರ ಶೈಕ್ಷಣಿಕ ಗುಣಮಟ್ಟ ಕಾಪಾಡಲು ಕಾರಣವಾಗುತ್ತದೆ. ಪ್ರತಿ ವರ್ಷ ನಮ್ಮ ಕಾಲೇಜು ಟಾಪ್ ಹತ್ತರಲ್ಲಿ ಫಲಿತಾಂಶ ಹೊಂದುತ್ತಿರುವುದರಲ್ಲಿ ಯಾವುದೇ ಗುಟ್ಟು ಇಲ್ಲ. ವಿದ್ಯಾರ್ಥಿಗಳ, ಉಪನ್ಯಾಸಕರ ಶ್ರಮವೇ ಅದಕ್ಕೆ ಕಾರಣವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ರಾಜ್ಯ ಪ.ಪೂ. ಕಾಲೇಜುಗಳ ಶಿಕ್ಷಣಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಕೊಟ್ರೇಶ ಮಾತನಾಡಿ, ಶಿಕ್ಷಣಶಾಸ್ತ್ರ ವಿಷಯದ ಸಮ್ಮೇಳನ, ಕಾರ್ಯಾಗಾರದಿಂದ ಕೇವಲ ಉಪನ್ಯಾಸಕರಿಗೆ ಮಾತ್ರವಲ್ಲ ವಿದ್ಯಾರ್ಥಿಗಳಿಗೂ ಉಪಯೋಗವಾಗುತ್ತಿದೆ. ಕಾರ್ಯಾಗಾರದಲ್ಲಿ ನಡೆಯುವ ಗೋಷ್ಠಿಗಳು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಉಪನ್ಯಾಸಕರ ಸಹಕಾರಿಯಾಗಿವೆ ಎಂದರು.
ವಿಎಸ್‌ಕೆಡಿ ಸಿಂಡಿಕೇಟ್ ಸದಸ್ಯ ಡಾ.ಪಿಎಂ ವಾಗೀಶಯ್ಯ ಸಂಘದ ಗೌರವಾಧ್ಯಕ್ಷ ಆರ್.ಬಿ.ಸುಂಕದಾಳ, ಶ್ರೀಶೈಲ, ಡಾ.ರಾಜಣ್ಣ, ಎಸ್.ಬಿ.ಪಾಟೀಲ್, ನಿರುಪಮ ನಾಯಕ, ವಿಜಿ ಹೂನಳ್ಳಿ, ಪ್ರವೀಣಕುಮಾರ್ ಸೇರಿ ಅನೇಕರು ಇದ್ದರು. ಇಂದು ಪಿಯು ಕಾಲೇಜು ಉಪ ಪ್ರಾಚಾರ್ಯರಾದ ಎಚ್.ಮಹೇಶ, ಕೆ.ಬಿ.ತಿಪ್ಪೇಸ್ವಾಮಿ ನಿರ್ವಹಿಸಿದರು.