ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಗಿರಿರಾಜ್ಯಕ್ಕೆ ಕರ್ನಾಟಕವೆಂದು ನಾಮಕಾರಣವಾಗಿ ೫೦ನೇ ವರ್ಷ ಸಂಭ್ರಮಾಚರಣೆ ನಿಮಿತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ರಾಜ್ಯವ್ಯಾಪಿ ಕನ್ನಡ ಜ್ಯೋತಿ ರಥಯಾತ್ರೆ ಸಾಗುತ್ತಿದ್ದು, ಮಂಗಳವಾರ ಕನಕಗಿರಿ ಪಟ್ಟಣಕ್ಕೆ ಆಗಮಿಸಿದ ರಥಯಾತ್ರೆ ಮೆರವಣಿಗೆಯಲ್ಲಿ ಸಾವಿರಾರು ಜನರು ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಶ್ರೀಮಂತಗೊಳಿಸಿದ ಗಣ್ಯರನ್ನು ಸ್ಮರಿಸಲಾಯಿತು.
ಕನ್ನಡಪ್ರಭ ವಾರ್ತೆ ಕನಕಗಿರಿ
ರಾಜ್ಯಕ್ಕೆ ಕರ್ನಾಟಕವೆಂದು ನಾಮಕಾರಣವಾಗಿ ೫೦ನೇ ವರ್ಷ ಸಂಭ್ರಮಾಚರಣೆ ನಿಮಿತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ರಾಜ್ಯವ್ಯಾಪಿ ಕನ್ನಡ ಜ್ಯೋತಿ ರಥಯಾತ್ರೆ ಸಾಗುತ್ತಿದ್ದು, ಮಂಗಳವಾರ ಕನಕಗಿರಿ ಪಟ್ಟಣಕ್ಕೆ ಆಗಮಿಸಿದ ರಥಯಾತ್ರೆ ಮೆರವಣಿಗೆಯಲ್ಲಿ ಸಾವಿರಾರು ಜನರು ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಶ್ರೀಮಂತಗೊಳಿಸಿದ ಗಣ್ಯರನ್ನು ಸ್ಮರಿಸಲಾಯಿತು.ಇಲ್ಲಿನ ಕಲ್ಮಠದ ಮುಂಭಾಗದಲ್ಲಿ ಪ್ರಭಾರಿ ತಹಸೀಲ್ದಾರ ವಿ.ಎಚ್ ಹೊರಪೇಟೆ ಮೆರವಣಿಗೆಗೆ ಚಾಲನೆ ನೀಡಿದರು.
ಗೊಂಬೆ ಕುಣಿತ, ಕುದುರೆ ಕುಣಿತ, ಅಲೆಮಾರಿ ಡ್ರಮ್‌ಸೆಟ್ ತಂಡ, ತಾಷಾ ಮೇಳದ ತಂಡಗಳು ವೇಷಭೂಷಣ ಜತೆಗೆ ಭಾಗವಹಿಸಿ ಕನ್ನಡಾಭಿಮಾನ ಮೆರೆದರು.ಪಟ್ಟಣದ ವಿವಿಧ ಶಾಲಾ-ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಕನ್ನಡ ಬಾವುಟ ಹಿಡಿದು ಕನ್ನಡ ನೆಲ, ಜಲ, ಭಾಷೆಗೆ ಸಂಬಂಧಿಸಿದ ಘೋಷಣೆ ಕೂಗಿದರು.ಇನ್ನೂ ರೆನ್‌ಬೋ ಶಾಲಾ ಮಕ್ಕಳು ಕಿತ್ತೂರು ಭುವನೇಶ್ವರಿ, ರಾಣಿ ಚೆನ್ನಮ್ಮ, ಸಾವಿತ್ರಿ ಬಾಪುಲೆ, ಪಟ್ಟರಾಜ ಗವಾಯಿ, ಹಾನಗಲ್ ಕುಮಾರ ಶಿವಯೋಗಿ, ಸುಧಾಮೂರ್ತಿ ಸೇರಿ ಹಲವು ಮಹನೀಯರ ವೇಶಭೂಷಣ ತೊಟ್ಟು ಮೆರವಣಿಗೆಗೆ ಮೆರಗು ತಂದರು.
ರಥಯಾತ್ರೆ ಆರಂಭಗೊಳ್ಳುತ್ತಿದ್ದಂತೆ ರಾಜಬೀದಿಯಲ್ಲಿ ಸಾವಿರಾರು ಜನ ಜಮಾಯಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘಟಗಳ ಮಹಿಳೆಯರು ಕಳಶ, ಕುಂಭದೊಂದಿಗೆ ಭಾಗವಹಿಸಿದ್ದರೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರು, ಮೇಲ್ವಿಚಾರಕಿಯರು, ಆಶಾ ಕಾರ್ಯಕರ್ತೆಯರು ಏಕಬಣ್ಣದ ಉಡುಗೆಯಲ್ಲಿ ಮಿಂಚಿದರು. ಮಹಿಳೆಯರು, ವಯೋವೃದ್ಧರು ಜ್ಯೋತಿ ಯಾತ್ರೆಯ ವೈಭವ ಕಣ್ತುಂಬಿಕೊಂಡರು. ಇನ್ನೂ ಚಿಕ್ಕಮಕ್ಕಳು ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.ಕೆಂಪು, ಹಳದಿ ಉಡುಪಲ್ಲಿ ಮಿಂಚಿದ ಪಪಂ ಸದಸ್ಯ:
ಪಟ್ಟಣದ ೧೦ನೇ ವಾರ್ಡಿನ ಸದಸ್ಯ ಸಂಗಪ್ಪ ಸಜ್ಜನ್ ಹಳದಿ ಜುಬ್ಬಾ, ಕೆಂಪು ಬಣ್ಣದ ಪ್ಯಾಂಟ್, ಕೊರಳಲ್ಲಿ ಕನ್ನಡದ ಶಾಲು ಹಾಕಿಕೊಂಡು ಕನ್ನಡಾಭಿಮಾನಿಯಾಗಿ ಮಿಂಚಿದರು. ಹೀಗೆ ಉಡುಪು ಧರಿಸಿದ್ದ ಸಂಗಪ್ಪರ ಜತೆಗೆ ಅಭಿಮಾನಿಗಳು, ಹಿತೈಸಿಗಳು, ಪಕ್ಷದ ಕಾರ್ಯಕರ್ತರು, ಮುಖಂಡರು ಗುಂಪಾಗಿ ಸೆಲ್ಪಿ ತೆಗೆಯಿಸಿಕೊಂಡರು. ನಾಡಿನ ಬಾವುಟ ಬಣ್ಣವನ್ನು ಹೊಲುವ ಉಡುಪು ಧರಿಸಿದ್ದ ಸಂಗಪ್ಪಗೆ ಜನ ಕೈಕುಲುಕಿ ಅಭಿನಂದಿಸಿದರು.ತಾಪಂ ಇಒ ಚಂದ್ರಶೇಖರ ಕಂದಕೂರು, ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಕಸಾಪ ತಾಲೂಕು ಘಟಕದ ಅಧ್ಯಕ್ಷ ಮೆಹಬೂಬಹುಸೇನ, ಸಿಡಿಪಿಐ ವಿರೂಪಾಕ್ಷಿ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ವಿ. ಮಧುಸೂದನ, ಪಿಎಸ್‌ಐ ಜಾಫರುದ್ಧಿನ್, ಇಸಿಒ ಆಂಜನೇಯ ಸೇರಿದಂತೆ ವಿವಿಧ ಸಂಘಟನೆಗಳು ಪದಾಧಿಕಾರಿಗಳು, ಸರ್ಕಾರಿ ನೌಕರರು ಹಾಗೂ ವಿದ್ಯಾರ್ಥಿಗಳು ಇದ್ದರು.
-----------------------------ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದ ಜನ:
ಜ್ಯೋತಿಯಾತ್ರೆಯಲ್ಲಿ ಭಾಗವಹಿಸಿದ್ದ ಸಾವಿರಾರು ಜನ ಹಾಗೂ ಶಾಲಾ-ಕಾಲೇಜು ಮಕ್ಕಳಿಗೆ ತಾಲೂಕಾಡಳಿತದಿಂದ ಊಟ,ಉಪಹಾರದ ವ್ಯವಸ್ಥೆ ಮಾಡಿರಲಿಲ್ಲ.ಇದರಿಂದ ಕೆಲ ಮುಖಂಡರು, ಪಪಂ ಸದಸ್ಯರು ಅಧಿಕಾರಿಗಳ ಮೇಲೆ ರೊಚ್ಚಿಗೆದ್ದಿದ್ದರು.ಕಾರ್ಯಕ್ರಮಕ್ಕೆ ಬಂದಿರುವ ಸಾವಿರಾರು ಜನರಿಗೆ ಏನು ಉತ್ತರ ಕೊಡಬೇಕು? ಪೂರ್ವಭಾವಿ ಸಭೆ ಅರೆಬರೆಯಾಗಿದ್ದು, ರಥಯಾತ್ರೆ ಸಾಗುವ ಮೆರವಣಿಗೆಗೆ ಪೂರ್ವ ತಯಾರಿಯಾಗಿಲ್ಲ. ರಥಕ್ಕೆ ಪುಷ್ಪಾಲಂಕಾರವಾಗಿಲ್ಲ. ಕುಡಿವ ನೀರಿನ ಅಸ್ತವ್ಯಸ್ಥವಾಗಿರುವ ಕುರಿತು ಸ್ಥಳದಲ್ಲಿದ್ದ ಗ್ರೇಡ್-೧ ತಹಸೀಲ್ದಾರ ವಿ.ಎಚ್ ಹೊರಪೇಟೆ ಅವರನ್ನು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಲ್ಲದೇ ತಪ್ಪಿಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಮುಖಂಡರು ಆಗ್ರಹಿಸಿದರು.