ರಾಮನಗರ: ಕನ್ನಡ ಭಾಷೆ ಜಾತಿ, ಧರ್ಮಗಳ ಎಲ್ಲೆ ಮೀರಿ ಬೆಳೆದಿರುವ ಭಾವನಾತ್ಮಕ ಶಕ್ತಿಯಾಗಿದೆ. ಎಲ್ಲರನ್ನು ಒಳಗೊಳ್ಳುವ ಬೆಸುಗೆಯಾಗಿ ಕನ್ನಡ ರೂಪುಗೊಂಡಿದೆ. ಕನ್ನಡದ ಜೊತೆಗೆ ವಿಜ್ಞಾನ ಮತ್ತು ತಂತ್ರಜ್ಞಾನವೂ ಬೆಳೆದಾಗ ಮಾತ್ರ ನಾಡಿನ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಹಿರಿಯ ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು
ರಾಮನಗರ: ಕನ್ನಡ ಭಾಷೆ ಜಾತಿ, ಧರ್ಮಗಳ ಎಲ್ಲೆ ಮೀರಿ ಬೆಳೆದಿರುವ ಭಾವನಾತ್ಮಕ ಶಕ್ತಿಯಾಗಿದೆ. ಎಲ್ಲರನ್ನು ಒಳಗೊಳ್ಳುವ ಬೆಸುಗೆಯಾಗಿ ಕನ್ನಡ ರೂಪುಗೊಂಡಿದೆ. ಕನ್ನಡದ ಜೊತೆಗೆ ವಿಜ್ಞಾನ ಮತ್ತು ತಂತ್ರಜ್ಞಾನವೂ ಬೆಳೆದಾಗ ಮಾತ್ರ ನಾಡಿನ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಹಿರಿಯ ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು.
ನಗರದ ಗೌಸಿಯಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗುರುವಾರ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆ ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲ. ಯಾರು ಬೇಕಾದರೂ ಕನ್ನಡಿಗರಾಗಬಹುದು. ಕವಿಗಳು ಕನ್ನಡವನ್ನು ‘ಕನ್ನಡ ಕುಲ’ ಎಂದು ಕರೆಯುವುದಕ್ಕೂ ಇದೇ ಕಾರಣ ಎಂದರು.ಕನ್ನಡ ನಾಡಿನ ಏಕೀಕರಣದ ಹೋರಾಟದಲ್ಲಿಯೂ ಎಲ್ಲ ಜಾತಿ, ಧರ್ಮಗಳ ಜನರು ಭಾಗವಹಿಸಿದ್ದರು. ಬ್ರಿಟಿಷರ ಆಡಳಿತದ ಸಂದರ್ಭದಲ್ಲಿ ಕರ್ನಾಟಕದ ವಿವಿಧ ಭಾಗಗಳು ನಿಜಾಮರ, ಮದ್ರಾಸ್, ಮರಾಠ ಮತ್ತು ಮೈಸೂರು ಸಂಸ್ಥಾನಗಳ ಆಡಳಿತಕ್ಕೆ ಒಳಪಟ್ಟಿದ್ದವು. ಇಂತಹ ಸಂದರ್ಭದಲ್ಲಿ ಕರ್ನಾಟಕ ಏಕೀಕರಣದ ಬೇಡಿಕೆಯನ್ನು ಮುಂದಿಟ್ಟುಕೊಂಡು ಸ್ವಾತಂತ್ರ್ಯ ಹೋರಾಟದಲ್ಲಿಯೂ ಕನ್ನಡಿಗರು ಭಾಗವಹಿಸಿದ್ದರು ಎಂದು ಹೇಳಿದರು.
1921ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿಯೂ ಕರ್ನಾಟಕ ಏಕೀಕರಣದ ಬೇಡಿಕೆಯನ್ನು ಮುಂದಿಡಲಾಗಿತ್ತು. ಈ ಬೇಡಿಕೆಗೆ ಸ್ಪಂದಿಸುವ ಷರತ್ತಿನೊಂದಿಗೆ ಕಾಂಗ್ರೆಸ್ಗೆ ಬೆಂಬಲ ನೀಡಲಾಗಿತ್ತು. ಕವಿಗಳು, ವಿದ್ಯಾವಂತರು ಹಾಗೂ ರಾಜಕಾರಣಿಗಳು ಏಕೀಕರಣದ ಹೋರಾಟಕ್ಕೆ ಮುನ್ನಡೆ ನೀಡಿದರೆ, ಸಾಮಾನ್ಯ ಜನರು ಬೀದಿಗಿಳಿದು ಹೋರಾಡಿ ಜೈಲು ಸೇರಿದ್ದರು. ಸುದೀರ್ಘ ಹೋರಾಟದ ಫಲವಾಗಿ 1956ರಲ್ಲಿ ಕರ್ನಾಟಕ ಏಕೀಕರಣ ಸಾಕಾರಗೊಂಡಿತು. ಆದರೆ, ಕೆಲವು ಕನ್ನಡ ಭಾಷಿಕ ಪ್ರದೇಶಗಳು ರಾಜ್ಯಕ್ಕೆ ಸೇರ್ಪಡೆಯಾಗದೆ ಉಳಿದವು ಎಂದರು.ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಬಳ್ಳಾರಿ ಕರ್ನಾಟಕಕ್ಕೆ ಸೇರ್ಪಡೆಯಾಗದೆ ಉಳಿದಿದ್ದಾಗ, ಅದನ್ನು ಕರ್ನಾಟಕಕ್ಕೆ ಸೇರಿಸಬೇಕೆಂಬ ಹೋರಾಟ ತೀವ್ರಗೊಂಡಿತ್ತು. ಈ ಏಕೀಕರಣ ಹೋರಾಟದಲ್ಲಿ ರಂಜಾನ್ಸಾಬ್ ಅವರು ಹುತಾತ್ಮರಾಗಿದ್ದರು. ಅವರ ಧರ್ಮ, ಜಾತಿ ಬೇರೆ ಇರಬಹುದು. ಆದರೆ, ಕನ್ನಡ ನಾಡು ಮತ್ತು ಭಾಷೆಯ ಉಳಿವಿಗಾಗಿ ಪ್ರಾಣತ್ಯಾಗ ಮಾಡಿದ ಅವರು ಕನ್ನಡ ಕುಲದವರಾಗಿದ್ದಾರೆ. ಕನ್ನಡದ ಏಕೀಕರಣದ ಹೋರಾಟ ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿರಲಿಲ್ಲ ಎಂಬುದಕ್ಕೆ ಇಂತಹ ಹೋರಾಟಗಾರರ ತ್ಯಾಗವೇ ಸಾಕ್ಷಿ ಎಂದು ಡಾ. ಬಂಜಗೆರೆ ಜಯಪ್ರಕಾಶ್ ಸ್ಮರಿಸಿದರು.
ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಉಮರ್ ಇಸ್ಮಾಯಿಲ್ ಖಾನ್ ಮಾತನಾಡಿ, ಕನ್ನಡ ಭಾಷೆ ನಮ್ಮೆಲ್ಲರ ಏಕತೆಯ ಸಂಕೇತ, ಕನ್ನಡ ನಮ್ಮ ಅಸ್ಮಿತೆ. ಕನ್ನಡ ರಾಜ್ಯೋತ್ಸವದ ಈ ವೇಳೆ ನಾವೆಲ್ಲ ಕನ್ನಡ ಭಾಷೆ, ನಾಡು, ಸಂಸ್ಕೃತಿಯ ಗೌರವಿಸುವ, ರಕ್ಷಿಸುವ ಮತ್ತು ಪ್ರವರ್ಧಮಾನಕ್ಕೆ ತರುವ ವಿಚಾರದಲ್ಲಿ ನಮ್ಮ ಹೊಣೆಯನ್ನು ಸದಾ ಸ್ಮರಣೆಯಲ್ಲಿರಿಸಿಕೊಂಡು ಆಚರಿಸಬೇಕು. ಕನ್ನಡ ನಾಡು, ಭಾಷೆಯ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಎಂದು ಕರೆ ನೀಡಿದರು.ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ನವಾಜ್ ಎ.ಷರೀಪ್ ಕಾಲೇಜು ಆವರಣದಲ್ಲಿ ರಾಷ್ಟ್ರ ಧ್ವಜ ಮತ್ತು ಕನ್ನಡ ಧ್ವಜಾರೋಹಣ ನೆರೆವೇರಿಸಿದರು.
ಕಾರ್ಯಕ್ರಮದಲ್ಲಿ ಗೌಸಿಯಾ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ಕೆ.ಆರ್.ಏಜಾಜ್ ಅಹಮದ್ , ಪ್ರಾಂಶುಪಾಲ ಡಾ. ಎನ್.ಎಂ. ಕುಮಾರ್, ಸಂಚಾಲಕ ಡಾ. ಸೈಫುಲ್ಲಾ ಖಾನ್, ನಾಟಕ ಅಕಾಡೆಮಿ ಸದಸ್ಯ ಕುಂಬಾಪುರ ಬಾಬು ಮತ್ತಿತರರು ಉಪಸ್ಥಿತರಿದ್ದರು.ಬಾಕ್ಸ್ .............
ಜಾನಪದ ಕಲಾ ತಂಡಗಳ ಮೆರವಣಿಗೆ:ಕಾಲೇಜು ವಿದ್ಯಾರ್ಥಿಗಳು ಕನ್ನಡ ಗೀತೆಗಳನ್ನು ಪ್ರಸ್ತುತ ಪಡಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆವೇರಿದವು. ಕಾಲೇಜಿನ ಆಡಳಿತ ಕಚೇರಿಯಿಂದ ಆ್ಯಂಪಿ ಥಿಯೇಟರ್ವರೆಗೆ ನಡೆದ ಮೆರವಣಿಗೆಯಲ್ಲಿ ವೀರಗಾಸೆ, ಪೂಜಾ ಕುಣಿತ, ಗೊಂಬೆ ಕುಣಿತ, ಡೊಳ್ಳು ಮೇಳ ಮುಂತಾದ ಜಾನಪದ ಕಲಾತಂಡಗಳು ಪ್ರದರ್ಶನ ನೀಡಿದವು.
ಕೋಟ್ ...............ಎಲ್ಲ ಭಾಷೆಗಳನ್ನು ಕಲಿತರೂ ಕನ್ನಡದ ಅಸ್ಮಿತೆಯನ್ನು ಕಳೆದುಕೊಳ್ಳಬಾರದು. ಕನ್ನಡ ಎಲ್ಲವನ್ನೂ ಅರಗಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಭಾಷೆಯ ವಿಚಾರದಲ್ಲಿ ಕನ್ನಡಿಗರು ಮತ್ತೊಂದು ಭಾಷೆಯ ಮೇಲೆ ದಾಳಿ ನಡೆಸಿದ ಇತಿಹಾಸವಿಲ್ಲ. ನಾವು ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ವಿವೇಕಶೀಲ ಜನರು.
-ಬಂಜಗೆರೆ ಜಯಪ್ರಕಾಶ್ , ಹಿರಿಯ ಸಾಹಿತಿ12ಕೆಆರ್ ಎಂಎನ್ 1.ಜೆಪಿಜಿ
ರಾಮನಗರದ ಗೌಸಿಯಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಹಿರಿಯ ಸಾಹಿತಿ ಬಂಜಗೆರೆ ಜಯಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.