ಸಾರಾಂಶ
ಅರಿಸಿಣ ಬಣ್ಣದ ಸೀರೆ ಉಟ್ಟು, ಬಳೆ ತೊಟ್ಟು, ದ್ರೌಪದಿಯಂತೆ ಸರ್ವಾಲಂಕಾರ ಭೂಷಿತರಾಗಿದ್ದ ಕರಗದ ಪೂಜಾರಿ ವಸಂತ್ ಕುಮಾರ್ ಅವರು, 17ನೇ ಬಾರಿಗೆ ಹೂವಿನ ಕರಗ ಹೊತ್ತು ಒಂದು ಕೈಯಲ್ಲಿ ಕತ್ತಿ, ಮತ್ತೊಂದು ಕೈಯಲ್ಲಿ ಮಂತ್ರದಂಡ ಹಿಡಿದು ದೇವಾಲಯದ ಗರ್ಭಗುಡಿಯಿಂದ ಹೊರಕ್ಕೆ ಬರುತ್ತಿದ್ದಂತೆ ತಮಟೆ ವಾದನ, ಮಂಗಳ ವಾದ್ಯಗಳು ಮೊಳಗಿದವು.
ಕನ್ನಡಪ್ರಭ ವಾರ್ತೆ ಹೊಸಕೋಟೆ
ತಾಲೂಕಿನ ಕಸಬಾ ಹೋಬಳಿ ಸಮೇತನಹಳ್ಳಿ ಗ್ರಾಪಂ ವ್ಯಾಪ್ತಿಯ ನಡವತ್ತಿ ಗ್ರಾಮದಲ್ಲಿ 18ನೇ ವರ್ಷದ ದ್ರೌಪದಾಂಬ ದೇವಿಯ ಕರಗ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಗ್ರಾಮದ ದ್ರೌಪದಾಂಬ ದೇವಾಲಯದಿಂದ ಮಧ್ಯರಾತ್ರಿ 12 ಗಂಟೆ 10 ನಿಮಿಷಕ್ಕೆ ಹೊರಟ ಹೂವಿನ ಕರಗ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬೆಳಗ್ಗೆ 10 ಗಂಟೆಗೆ ವಾಪಸ್ ದೇಗುಲ ತಲುಪಿತು. ಅರಿಸಿಣ ಬಣ್ಣದ ಸೀರೆ ಉಟ್ಟು, ಬಳೆ ತೊಟ್ಟು, ದ್ರೌಪದಿಯಂತೆ ಸರ್ವಾಲಂಕಾರ ಭೂಷಿತರಾಗಿದ್ದ ಕರಗದ ಪೂಜಾರಿ ವಸಂತ್ ಕುಮಾರ್ ಅವರು, 17ನೇ ಬಾರಿಗೆ ಹೂವಿನ ಕರಗ ಹೊತ್ತು ಒಂದು ಕೈಯಲ್ಲಿ ಕತ್ತಿ, ಮತ್ತೊಂದು ಕೈಯಲ್ಲಿ ಮಂತ್ರದಂಡ ಹಿಡಿದು ದೇವಾಲಯದ ಗರ್ಭಗುಡಿಯಿಂದ ಹೊರಕ್ಕೆ ಬರುತ್ತಿದ್ದಂತೆ ತಮಟೆ ವಾದನ, ಮಂಗಳ ವಾದ್ಯಗಳು ಮೊಳಗಿದವು. ಖಡ್ಗ ಹಿಡಿದಿದ್ದ ವೀರಕುಮಾರರು ‘ಗೋವಿಂದಾ. ಗೋವಿಂದಾ’ ಎಂದು ನಾಮಸ್ಮರಣೆ ಮಾಡುತ್ತ ಅವರ ಹಿಂದೆ ಹೆಜ್ಜೆ ಹಾಕಿದರು. ಗ್ರಾಮದ ಜನ ರಸ್ತೆಯ ಇಕ್ಕೇಲಗಳಲ್ಲಿ ನಿಂತು ಕರಗದ ದರ್ಶನ ಪಡೆದರು. ಮುಖಂಡರಾದ ವೆಂಕಟರಮಣಪ್ಪ, ಜಯರಾಮಪ್ಪ, ರಮೇಶ್, ಶಿವಕುಮಾರ್, ಮುನಿಕೃಷ್ಣ, ನಾಗರಾಜಪ್ಪ, ನಟರಾಜ್, ವಿಜಯ್ ಕುಮಾರ್, ಲಕ್ಷ್ಮೀನಾರಾಯಣ್, ರವಿ ಟಿಡಿ, ಮಂಜುನಾಥ್ ಎನ್.ಎ, ವಿಜಯ್ ಕುಮಾರ್, ನವೀನ್ ಕರಗ ಮಹೋತ್ಸವದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.