ಸಾರಾಂಶ
ಹಾವೇರಿ (ಶಿಗ್ಗಾಂವಿ): ನಮ್ಮ ಸರ್ಕಾರದ ಸಾಧನೆ ಬಗ್ಗೆ ಮಹಾರಾಷ್ಟ್ರದ ಬಿಜೆಪಿ, ಎನ್ಸಿಪಿ ಸುಳ್ಳು ಜಾಹೀರಾತು ನೀಡುತ್ತಿವೆ. ಮಹಾಯತಿ ನಾಯಕರೆಲ್ಲ ಸುಳ್ಳುಗಾರರು. ಕರ್ನಾಟಕ ಮಾಡೆಲ್ ಇಡೀ ದೇಶಕ್ಕೆ ಮಾದರಿಯಾಗಿದೆ. ನಾವು ನುಡಿದಂತೆ ನಡೆಯುತ್ತೇವೆ, ನಡೆಯುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.ಶಿಗ್ಗಾಂವಿ ಕ್ಷೇತ್ರದ ದುಂಡಶಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿಲ್ಲ ಎಂದು ಮಹಾರಾಷ್ಟ್ರದಲ್ಲಿ ಆಡಳಿತರೂಢ ಪಕ್ಷಗಳು ಸುಳ್ಳು ಹೇಳುತ್ತಿವೆ. ಅಲ್ಲಿನ ಮಹಾಯತಿ ಸರ್ಕಾರದ ಬಿಜೆಪಿ, ಶಿವಸೇನಾ, ಎನ್ಸಿಪಿ ಎಂಎಲ್ಎಗಳಿಗೆ ಕರ್ನಾಟಕಕ್ಕೆ ಭೇಟಿ ಮಾಡಲು ಬಸ್ ಅಥವಾ ವಿಶೇಷ ವಿಮಾನ ವ್ಯವಸ್ಥೆ ಮಾಡುತ್ತೇನೆ. ಅವರು ಇಲ್ಲಿಗೆ ನೇರವಾಗಿ ಬಂದು ಜನರನ್ನು ಕೇಳಬಹುದು. ಜತೆಗೆ ಬಿಜೆಪಿ ಕಾರ್ಯಕರ್ತರ ಬಳಿಯೂ ಅಭಿಪ್ರಾಯ ತಿಳಿದುಕೊಳ್ಳಬಹುದು ಎಂದು ಸವಾಲು ಹಾಕಿದರು.೧.೨೯ ಕೋಟಿ ಮಹಿಳೆಯರ ಖಾತೆಗೆ ನೇರವಾಗಿ ಗೃಹಲಕ್ಷ್ಮೀ ಹಣ ₹೨ ಸಾವಿರ ಬರುತ್ತಿದೆ. ಮಹಿಳೆಯರು ಉಚಿತವಾಗಿ ಬಸ್ಗಳಲ್ಲಿ ಓಡಾಡುತ್ತಿದ್ದಾರೆ. ಸುಮಾರು ₹೫೦- ೫೨ ಸಾವಿರ ಕೋಟಿ ಹಣ ಗ್ಯಾರಂಟಿಗಳಿಗೆ ಎಂದು ಮೀಸಲಿಡಲಾಗಿದೆ ಎಂದರು.ಚನ್ನಪಟ್ಟಣದ ಚುನಾವಣಾ ಪ್ರಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವೇಗೌಡರ ಇಬ್ಬಗೆಯ ನೀತಿ ಬಗ್ಗೆ ಹೇಳಿದ್ದಾರೆ. ಒಬ್ಬ ಮೊಮ್ಮಗ ಏನೋ ಮಾಡಿದಾಗ ಕಣ್ಣಲ್ಲಿ ನೀರು ಬರಲಿಲ್ಲ. ಆದರೆ ಈಗ? ದೊಡ್ಡವರಾದ ಕಾರಣ ಅವರ ಬಗ್ಗೆ ಚರ್ಚೆ ಮಾಡಲು ಹೋಗುವುದಿಲ್ಲ. ದೇವೇಗೌಡರು ಈ ನಾಡಿನ ಹಿರಿಯ ರಾಜಕಾರಣಿ. ಅವರ ಬಗ್ಗೆ ಅಪಾರವಾದ ಗೌರವವಿದೆ. ನಾನೇನಾದರೂ ಲೂಟಿ ಮಾಡಿದ್ದರೆ ನನ್ನ ಕ್ಷೇತ್ರದ ಜನರು ೧.೨೩ ಲಕ್ಷ ಮತಗಳ ಅಂತರದಿಂದ ೮ ಬಾರಿ ನನ್ನ ಆಯ್ಕೆ ಮಾಡುತ್ತಿದ್ದಾರಾ? ದೇವೇಗೌಡರ ಸುಪುತ್ರ ಕುಮಾರಸ್ವಾಮಿ ಅವರ ವಿರುದ್ಧವೂ ನನ್ನನ್ನು ಆಯ್ಕೆ ಮಾಡಿದ್ದಾರೆ. ನನ್ನ ಕ್ಷೇತ್ರದ ಜನರು ನನಗೆ ದೇವರು ಇದ್ದಂತೆ. ಅವರ ಬದುಕಿನಲ್ಲಿ ಬದಲಾವಣೆ ತರಲು ಶ್ರಮಪಡುತ್ತಾ ಇದ್ದೇನೆ ಎಂದು ಹೇಳಿದರು.ಬೊಮ್ಮಾಯಿ, ಸೋಮಣ್ಣ ಸಮಿತಿಯ ಸದಸ್ಯರೇ?: ವಕ್ಫ್ ವಿಚಾರವಾಗಿ ಜೆಪಿಸಿ (ಜಂಟಿ ಪಾರ್ಲಿಮೆಂಟ್ ಸಮಿತಿ) ರಾಜ್ಯಕ್ಕೆ ಭೇಟಿ ಕೊಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವ ಜಂಟಿ ಪಾರ್ಲಿಮೆಂಟ್ ಸಮಿತಿ ಎನ್ನುವುದು ಇಲ್ಲ. ಕೇವಲ ಬಿಜೆಪಿಯ ನಾಯಕರು ಭೇಟಿ ಕೊಟ್ಟಿದ್ದಾರೆ. ಬೊಮ್ಮಾಯಿ, ಸೋಮಣ್ಣ ಆ ಸಮಿತಿಯಲ್ಲಿ ಇದ್ದಾರೆಯೇ? ತೇಜಸ್ವಿಸೂರ್ಯ ರಾಜಕೀಯಕ್ಕಾಗಿ ಹೆಲಿಕಾಪ್ಟರ್ ಅಲ್ಲಿ ಬಂದು ಹೋಗಿದ್ದಾರೆ. ಸಮಿತಿ ಭೇಟಿಯ ಬಗ್ಗೆ ಯಾವುದಾದರೂ ಅಧಿಕಾರಿಗಳಿಗೆ ತಿಳಿಸಿದ್ದಾರೆಯೇ? ಭೇಟಿ ಮಾಡಿ ಎಂದು ಯಾರಾದರೂ ಮನವಿ ಮಾಡಿದ್ದರೇ? ಬಿಜೆಪಿ ಕಾಲದಲ್ಲಿಯೇ ಎಲ್ಲ ಪಹಣಿಗಳನ್ನು ಬದಲಾವಣೆ ಮಾಡಲಾಯಿತು. ಶೀಘ್ರದಲ್ಲಿಯೇ ಎಲ್ಲ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ ಎಂದರು.ಬಿಜೆಪಿ ೨೦೧೦ರಲ್ಲೇ ವಕ್ಫ್ ಬಗ್ಗೆ ಸುತ್ತೋಲೆ ಹೊರಡಿಸಿತ್ತು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ೨೦೧೦ ಸೇರಿದಂತೆ ೨೦೨೦ರಲ್ಲಿಯೂ ಎಲ್ಲ ಪಹಣಿಗಳನ್ನು ಬದಲಾಯಿಸಿದ್ದೇ ಬಿಜೆಪಿ. ಎಲ್ಲ ದಾಖಲೆಗಳು ನಮ್ಮ ಬಳಿಯಿದೆ. ಧಾರವಾಡದಲ್ಲಿಯೂ ಇವೆ. ಎಲ್ಲವನ್ನೂ ಬಿಡುಗಡೆ ಮಾಡುತ್ತೇವೆ ಎಂದರು.