ಸಾರಾಂಶ
ಚುನಾಯಿತ ಪ್ರತಿನಿಧಿಗಳು ಧ್ವಜಾರೋಹಣ ಮಾಡಲು ಅವಕಾಶ ನೀಡಿದರೆ ಗ್ರಾಮದಲ್ಲಿ ನೆಲೆಸಿರುವ ಶಾಂತಿ ಕದಡಿ ಮತ್ತೊಮ್ಮೆ ಗಲಭೆಗೆ ನೀವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಆ ಜವಾಬ್ದಾರಿಯನ್ನೂ ನೀವೇ ಹೊರಬೇಕಾಗುತ್ತದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಕೆರಗೋಡು ಧ್ವಜ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ಆ.೧೫ ರಂದು ೭೮ನೇ ಸ್ವಾತಂತ್ರ್ಯ ದಿನಾಚರಣೆ ದಿನದಂದು ಶಾಸಕರು ಗ್ರಾಮದಲ್ಲಿ ಧ್ವಜಾರೋಹಣ ಮಾಡುವುದಕ್ಕೆ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿದೆ.ಹನುಮಧ್ವಜ ತೆರವಿನಿಂದ ಕೆರಗೋಡು ಗ್ರಾಮ ವಿವಾದದ ಕೇಂದ್ರ ಬಿಂದುವಾಗಿದೆ. ಇದರ ನಡುವೆ ಸ್ವಾತಂತ್ರ್ಯ ದಿನಾಚರಣೆ ದಿನ ಗ್ರಾಮದ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜ ಹಾರಿಸಲು ಅನುಮತಿ ಕೋರಿ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು.
ಗ್ರಾಮಸ್ಥರ ಮನವಿ ಮೇರೆಗೆ ಬುಧವಾರ ಉಪವಿಭಾಗಾಧಿಕಾರಿ ಶಿವಮೂರ್ತಿ ನೇತೃತ್ವದಲ್ಲಿ ಕೆರಗೋಡು ಗ್ರಾಮದಲ್ಲಿ ಗ್ರಾಮಸ್ಥರ ಜೊತೆ ಸಭೆ ನಡೆಸಲಾಯಿತು. ಸಭೆಯಲ್ಲಿ ಶಾಸಕರು ಗ್ರಾಮಕ್ಕೆ ಬಂದು ಧ್ವಜಾರೋಹಣ ಮಾಡುವುದು ಬೇಡ. ಅಧಿಕಾರಿಗಳು ಧ್ವಜಾರೋಹಣ ಮಾಡಿದರೆ ನಮ್ಮ ವಿರೋಧ ಇಲ್ಲ ಎಂದು ಸ್ಪಷ್ಟಪಡಿಸಿದರು.ಅಲ್ಲದೇ, ಚುನಾಯಿತ ಪ್ರತಿನಿಧಿಗಳು ಧ್ವಜಾರೋಹಣ ಮಾಡಲು ಅವಕಾಶ ನೀಡಿದರೆ ಗ್ರಾಮದಲ್ಲಿ ನೆಲೆಸಿರುವ ಶಾಂತಿ ಕದಡಿ ಮತ್ತೊಮ್ಮೆ ಗಲಭೆಗೆ ನೀವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಆ ಜವಾಬ್ದಾರಿಯನ್ನೂ ನೀವೇ ಹೊರಬೇಕಾಗುತ್ತದೆ ಎಂದು ಗ್ರಾಮಸ್ಥರ ತಮ್ಮ ಅಭಿಪ್ರಾಯವನ್ನು ಮನದಟ್ಟು ಮಾಡಿಕೊಟ್ಟರು.
ಆಗ ಉಪವಿಭಾಗಾಧಿಕಾರಿ ಶಿವಮೂರ್ತಿ ಅವರು, ಶಾಸಕರು ಧ್ವಜಾರೋಹಣ ಮಾಡಲು ಅವಕಾಶ ಇಲ್ಲ. ತಾಲೂಕು ಮಟ್ಟದ ಅಧಿಕಾರಿಗಳಿಂದ ಧ್ವಜಾರೋಹಣ ನೆರವೇರಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.ಅಂತಿಮವಾಗಿ ಆ.೧೫ ರಂದು ಗ್ರಾಮದಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ ಅವರಿಂದ ಧ್ವಜಾರೋಹಣ ನಡೆಸುವುದಕ್ಕೆ ಗ್ರಾಮಸ್ಥರು ಒಪ್ಪಿಗೆ ಸೂಚಿಸಿದರು.
ಸಭೆಯಲ್ಲಿ ಎಎಸ್ಪಿ ತಿಮ್ಮಯ್ಯ, ಜಿಪಂ ಉಪಕಾರ್ಯದರ್ಶಿ ಬಾಬು, ಇಓ ವೀಣಾ, ಡಿವೈಎಸ್ಪಿ ರಮೇಶ್, ಗ್ರಾಪಂ ಅಧ್ಯಕ್ಷ ನವೀನ್ ಕುಮಾರ್, ಯೋಗೇಶ್, ಮಹೇಶ್, ವಿರೂಪಾಕ್ಷ, ಸೇರಿ ಗ್ರಾಮಸ್ಥರು ಭಾಗಿಯಾಗಿದ್ದರು.