ಸಾರಾಂಶ
ಪರಿಣತ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ಎಂಜಿನಿಯರ್, ಕಾರ್ಮಿಕರು ಹಗಲಿರುಳು ಶ್ರಮಿಸಿ ಅನ್ನದಾತರನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ.
ಕೃಷ್ಣ ಎನ್. ಲಮಾಣಿ
ಹೊಸಪೇಟೆ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಳಚಿ ಬಿದ್ದು, ನದಿಗೆ ದಿನಕ್ಕೆ ಒಂದು ಲಕ್ಷ ಕ್ಯುಸೆಕ್ ನೀರು ವ್ಯರ್ಥವಾಗಿ ನದಿ ಪಾಲಾಗುತ್ತಿತ್ತು. ಪರಿಣತ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ಎಂಜಿನಿಯರ್, ಕಾರ್ಮಿಕರು ಹಗಲಿರುಳು ಶ್ರಮಿಸಿ ಅನ್ನದಾತರನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ.ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಲದಲ್ಲಿ ಈ ಘಟನೆಯಿಂದ ಹಾಹಾಕಾರ ಉಂಟಾಗಿತ್ತು. ಮೂರು ರಾಜ್ಯಗಳ ನೀರಾವರಿ ಇಲಾಖೆಗಳ ಅಧಿಕಾರಿಗಳ ಬಾಯಲ್ಲಿ ಹೊರಡಿದ್ದು, ಒಂದೇ ಒಂದು ಹೆಸರು ಕನ್ನಯ್ಯ ನಾಯ್ಡು ಅವರದ್ದು, ನಾಯ್ಡು ಅವರು ಬಂದರೆ ಸಮಸ್ಯೆಗೆ ಖಂಡಿತ ಪರಿಹಾರ ದೊರೆಯಲಿದೆ ಎಂದು ನೀರಾವರಿ ತಜ್ಞರೇ ಸೂಚಿಸಿದ್ದರಿಂದ ಕೂಡಲೇ ಅವರನ್ನು ಹೈದರಾಬಾದ್‌ನಿಂದ ಕರೆಸಲಾಯಿತು.
ಜಲಾಶಯದ 19ನೇ ಗೇಟ್‌ಗೆ ಸ್ಟಾಪ್ ಲಾಗ್ ಅಳವಡಿಕೆಗೆ ಎಲಿಮೆಂಟ್ ತಯಾರಿಕೆಯಲ್ಲಿ ಎಂಜಿನಿಯರ್‌ಗಳು, ಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದರೆ, ಇನ್ನೊಂದೆಡೆ ಪರವಾನಗಿ ಲಭಿಸುವುದು ತಡವಾಯಿತು. ತುಂಗಭದ್ರಾ ಮಂಡಳಿ ಹಾಗೂ ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ), ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ನೀರಾವರಿ ಇಲಾಖೆಗಳಿಂದಲೂ ಅನುಮತಿ ಪಡೆಯುವುದು ಸುಲಭವಾಗಿರಲಿಲ್ಲ. ಆನ್‌ಲೈನ್ ಸಭೆಗಳು ನಡೆದು, ಕೊನೆಗೆ ಸ್ಟಾಪ್ ಲಾಗ್ ಗೇಟ್ ಅಳವಡಿಸಲು ಪರವಾನಗಿ ಲಭಿಸಿತು.ಸ್ಕೈವಾಕರ್ ತೊಡಕು:
ಈ ಮಧ್ಯೆ ಜಲಾಶಯದಲ್ಲಿ ಸ್ಟಾಪ್ ಲಾಗ್ ಗೇಟ್‌ನ ಮೊದಲ ಎಲಿಮೆಂಟ್ ಅಳವಡಿಕೆ ಮಾಡುವಾಗ ಜಲಾಶಯದ ಸ್ಕೈವಾಕರ್ ಮತ್ತು ಬಿಮ್ ಅಡ್ಡಿಯಾಯಿತು. ಈ ಕುರಿತು ತುಂಗಭದ್ರಾ ಮಂಡಳಿ ಜೊತೆಗೆ ಚರ್ಚಿಸಿದರೆ, ಆರಂಭದಲ್ಲಿ ತೆರವಿಗೆ ಅನುಮತಿ ನೀಡಲಿಲ್ಲ. ಆಗ ಪರಿಣತ ತಜ್ಞ ಕನ್ನಯ್ಯ ನಾಯ್ಡು 4 ಅಡಿ ಎತ್ತರ 60 ಅಡಿ ಅಗಲದ ತಲಾ ಒಂದು ಎಲಿಮೆಂಟ್‌ಗಳನ್ನು ಎರಡು ತುಂಡುಗಳನ್ನಾಗಿ ಮಾಡಿ ತೂಗುಯ್ಯಾಲೆಯಲ್ಲೇ ವೆಲ್ಡಿಂಗ್ ಮಾಡಿ ಇಳಿಸೋಣ ಎಂದು ಕಾರ್ಮಿಕರು ಹಾಗೂ ಎಂಜಿನಿಯರ್‌ಗಳಲ್ಲಿ ಉತ್ಸಾಹ ತುಂಬಿದರು. ಇದಕ್ಕೆ ಸಿದ್ಧಗೊಂಡ ಕಾರ್ಮಿಕರು ತುಂಡು ಮಾಡಲು ರೆಡಿಯಾಗಿದ್ದರು. ಅಷ್ಟರಲ್ಲೇ ಕರ್ನಾಟಕ ಸಿಎಂ ಸಿದ್ದರಾಮಯ್ಯ ಪರವಾನಗಿ ಕೊಡಿಸಿದ್ದರಿಂದ ತುಂಡು ಮಾಡದೇ ನೇರ ಎಲಿಮೆಂಟ್‌ಗಳನ್ನು ಇಳಿಸಲಾಯಿತು.ಮೂರು ಕಡೆ ಎಲಿಮೆಂಟ್ ನಿರ್ಮಾಣ:
ನೀರಿನ ರಭಸ 100 ಕಿ.ಮೀ. ವೇಗದಲ್ಲಿದ್ದರೂ ಈ ಎಲಿಮೆಂಟ್‌ಗಳನ್ನು ಅಳವಡಿಕೆ ಮಾಡಿ, 100ಕ್ಕೂ ಅಧಿಕ ಎಂಜಿನಿಯರ್ಸ್ ಹಾಗೂ ಕಾರ್ಮಿಕರು ಸೈ ಎನಿಸಿಕೊಂಡರು. ಈ ಮೂಲಕ ರೈತರನ್ನು ಸಂಕಷ್ಟದಿಂದ ಪಾರು ಮಾಡಿದರು.₹50 ಸಾವಿರ ಬಹುಮಾನ:
ಜಲಾಶಯದ ಸ್ಟಾಪ್ ಲಾಗ್ ಗೇಟ್ ನಿರ್ಮಾಣ, ಅಳವಡಿಕೆಯಲ್ಲಿ ಪಾಲ್ಗೊಂಡ ಕಾರ್ಮಿಕರಿಗೆ ತಲಾ ₹50 ಸಾವಿರ ಬಹುಮಾನವನ್ನು ವಸತಿ ಸಚಿವ ಜಮೀರ್ ಅಹಮದ್ ಖಾನ್ ಘೋಷಿಸಿದ್ದಾರೆ. ಈ ಕಾರ್ಯ ಯಶಸ್ವಿ ಆಗಿದ್ದು, ಶೀಘ್ರವೇ ಬಹುಮಾನ ವಿತರಣೆಯೂ ಆಗಲಿದೆ.