ಸಮಾಜದಲ್ಲಿ ಸಾಮರಸ್ಯ ಕೊರತೆ ಹೆಚ್ಚಿದೆ: ಡಾ.ರಾಜ್‌ಕುಮಾರ್

| Published : Mar 24 2024, 01:33 AM IST

ಸಾರಾಂಶ

ಲಿಂ. ಒಡೆಯರ್ ಚಂದ್ರಶೇಖರ ಶಿವಾಚಾರ್ಯರ ಜೀವನದ ಅನುಕ್ರಮಗಳನ್ನು, ಮೌಲ್ಯಗಳನ್ನು ಮತ್ತು ಧಾರ್ಮಿಕತೆಯನ್ನು ನಾವುಗಳು ಅವಲೋಕಿಸಿ, ಇಂದು ಅವರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದು ಹರಿಹರ ಪಂಚಮಸಾಲಿ ಪೀಠದ ಆಡಳಿತಾಧಿಕಾರಿ ಹಾಗೂ ಪಟ್ಟಣದ ಖ್ಯಾತ ವೈದ್ಯರಾದ ಡಾ. ಎಚ್.ಪಿ. ರಾಜಕುಮಾರ್ ಹೊನ್ನಾಳಿಯಲ್ಲಿ ಹೇಳಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಲಿಂ. ಒಡೆಯರ್ ಚಂದ್ರಶೇಖರ ಶಿವಾಚಾರ್ಯರ ಜೀವನದ ಅನುಕ್ರಮಗಳನ್ನು, ಮೌಲ್ಯಗಳನ್ನು ಮತ್ತು ಧಾರ್ಮಿಕತೆಯನ್ನು ನಾವುಗಳು ಅವಲೋಕಿಸಿ, ಇಂದು ಅವರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದು ಹರಿಹರ ಪಂಚಮಸಾಲಿ ಪೀಠದ ಆಡಳಿತಾಧಿಕಾರಿ ಹಾಗೂ ಪಟ್ಟಣದ ಖ್ಯಾತ ವೈದ್ಯರಾದ ಡಾ. ಎಚ್.ಪಿ. ರಾಜಕುಮಾರ್ ಹೇಳಿದರು.

ಲಿಂ.ಮೃತ್ಯುಂಜಯ ಶಿವಾಚಾರ್ಯಸ್ವಾಮೀಜಿ 54ನೇ ವಾರ್ಷಿಕ ಪುಣ್ಯಾರಾಧನೆ ಮತ್ತು ಲಿಂ. ಒಡೆಯರ ಚಂದ್ರಶೇಖರ ಶಿವಾಚಾರ್ಯಸ್ವಾಮೀಜಿ 9ನೇ ವಾರ್ಷಿಕ ಸಂಸ್ಮರಣೆ ಕಾರ್ಯಕ್ರಮಗಳ ಅಂಗವಾಗಿ ಹಿರೇಕಲ್ಮಠದಲ್ಲಿ ಹಮ್ಮಿಕೊಂಡಿದ್ದ ಖ್ಯಾತ ಸಾಹಿತಿ ಲಿಂ. ಡಾ. ಎಚ್.ತಿಪ್ಪೇರುದ್ರಸ್ವಾಮಿ, ಲಿಂ. ಎಚ್.ಎನ್. ಷಡಕ್ಷರಿ ಶಾಸ್ತ್ರಿಗಳ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಇಂದು ಯಾವುದೇ ಕ್ಷೇತ್ರಗಳಲ್ಲಿ ಗಮನಹರಿಸಿದರೆ ಸ್ವಾರ್ಥ, ಅಸೂಯೆ ನೋಡುತ್ತಿದ್ದೇವೆ. ಧಾವಂತದ ಬದುಕಿನಲ್ಲಿ ಮಠ-ಮಾನ್ಯಗಳಲ್ಲಿ ನಡೆಯುವ ಧಾರ್ಮಿಕ ಸಭೆಗಳಲ್ಲಿ ಭಾಗವಹಿಸಲು ಸಮಯವೇ ಇಲ್ಲದ ಸಂದಿಗ್ಧತೆ ತಂದುಕೊಂಡಿದ್ದೇವೆ. ಇದು ಎಲ್ಲರ ಸಾಮಾಜಿಕ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮೈಸೂರು ಜೆಎಸ್ಎಸ್ ಕಾಲೇಜು ಉಪನ್ಯಾಸಕಿ ಡಾ. ಎಚ್.ಟಿ. ಶೈಲಜಾ ಮಾತನಾಡಿ, ಡಾ. ಎಚ್.ತಿಪ್ಪೇರುದ್ರಸ್ವಾಮಿ ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಕೇಂದ್ರ ಸಾಹಿತ್ಯ ಅಕಾಡಮಿ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿಗೆ ಭಾಜನರಾದರು. 12ನೇ ಶತಮಾನದ ಶರಣ ಸಾಹಿತ್ಯದ ಬಗ್ಗೆ ಆಮೂಲಾಗ್ರವಾಗಿ ಕೃಷಿ ಮಾಡಿದ ಸಾಹಿತಿ ಡಾ. ಎಚ್.ತಿಪ್ಪೇರುದ್ರಸ್ವಾಮಿ, ಸಾರಸ್ವತ ಲೋಕದಲ್ಲಿ ಮೇರುಸಾಹಿತಿಯಾಗಿ ಹೊರಹೊಮ್ಮಿದರು. ವೈಜ್ಞಾನಿಕ ಹಾಗೂ ವೈಚಾರಿಕವಾಗಿ ಅನೇಕ ಕೃತಿಗಳನ್ನು ಅವರು ರಚಿಸಿದರು. ಹೊನ್ನಾಳಿ ತಾಲೂಕಿನವರಾದ ಡಾ.ತಿಪ್ಪೇರುದ್ರಸ್ವಾಮಿ ಮೈಸೂರು ಹಾಗೂ ಕುವೆಂಪು ವಿ.ವಿ.ಗಳಲ್ಲಿ ಉತ್ತಮ ಸಾಧನೆ ಮಾಡಿದರು ಎಂದರು.

ಅವರಗೊಳ್ಳ ಮಠದ ಓಂಕಾರೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಾನವನ ಅತ್ಯುತ್ತಮ ಬದುಕು ಹಸನವಾಗಲು ಧರ್ಮದಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.

ಡಾ. ಎಚ್.ತಿಪ್ಪೇರುದ್ರಸ್ವಾಮಿ ಅವರ ಕದಳಿ ಕರ್ಪೂರ ಸಾಹಿತ್ಯ ಚಿಂತನ ಎಂಬ ವಿಷಯದ ಮೇಲೆ ಕುವೆಂಪು ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಹಾಗೂ ಎಚ್.ಎನ್. ಷಡಕ್ಷರಿ ಶಾಸ್ತ್ರಿಗಳ ಬದುಕು ಎಂಬ ವಿಷಯದ ಮೇಲೆ ಸಹ್ಯಾದ್ರಿ ಕಾಲೇಜು ಉಪನ್ಯಾಸಕ ಡಾ. ಎಚ್.ಎಂ. ನಾಗಾರ್ಜುನ ದತ್ತಿ ಉಪನ್ಯಾಸ ನೀಡಿದರು.

ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಟ್ಟೇಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಜಕ್ಕಲಿ, ಬಿದರಗಟ್ಟೆ. ರಾಮಲಿಂಗೇಶ್ವರ ಮಠದ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಚನ್ನಪ್ಪಸ್ವಾಮಿ ವಿದ್ಯಾಪೀಠದ ನಿರ್ದೇಶಕ ಕೋರಿ ಮಲ್ಲಿಕಾರ್ಜುನಪ್ಪ, ತಾಲೂಕು ವೀರಶೈವ ಪಂಚಮಸಾಲಿ ಸಮಾಜದ ಅಧ್ಯಕ್ಷ ಪಿ.ವೀರಪ್ಪ, ಪಟ್ಟಣದ ವರ್ತಕ ಬಿ.ಸಿದ್ದಪ್ಪ ಉಪಸ್ಥಿತರಿದ್ದರು. ಎಸ್ಜೆರವಿಪಿ ಶಿಕ್ಷಣ ಮಹಾವಿದ್ಯಾಲಯ ಮತ್ತು ಅಭಿನೇತ್ರಿ ಡ್ಯಾನ್ಸ್ ಮತ್ತು ಮ್ಯೂಸಿಕ್ ಅಕಾಡೆಮಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಶ್ರೀ ಮಠದ ವ್ಯವಸ್ಥಾಪಕ ಚನ್ನಬಸಯ್ಯ ಸ್ವಾಗತಿಸಿ, ಶಿಕ್ಷಕಿ ಶಾಂತ ಸುರೇಶ್ ನಿರೂಪಿಸಿದರು.

- - - -22ಎಚ್.ಎಲ್.ಐ3:

ಹಿರೇಕಲ್ಮಠದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ರಾಜ್ ಕುಮಾರ್ ಮಾತನಾಡಿದರು.