ಸಾರಾಂಶ
ಶಿವಮೊಗ್ಗ: ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರಿನ ಮೈದಾನ ಯಾರಿಗೂ ಸೇರಿದ್ದಲ್ಲ, ಸಾರ್ವಜನಿಕರಿಗೆ ಸೇರಿದ್ದು, ಇದಕ್ಕೆ ಪೂರಕ ದಾಖಲೆ ನೀಡಿದ್ದೇವೆ. ಖಾತೆ ಆಗಿದೆ ಎಂದರೆ ಅದು ಕಂದಾಯಕ್ಕೆ ಅಷ್ಟೇ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಾಜ್ ಪಡೆಯುವುದಕ್ಕಿಂತ ಮೊದಲು ಹೇಗಿತ್ತೋ ಹಾಗೆ ಯಥಾಸ್ಥಿತಿ ಬಿಟ್ಟು ಕೊಡುವಂತೆ ಕೇಳಿದ್ದೇವೆ. ಖಾತೆ ಮಾಡುವ ಹಂತದಲ್ಲಿ ತಪ್ಪಾಗಿರುವುದನ್ನು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದೇವೆ. ಅಧಿಕಾರಿಗಳುಗಳು ಈಗ ಇರೋ ಗೊಂದಲಗಳನ್ನು ಬಗೆಹರಿಸಿ ಸರಿಯಾದ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.2016- 17ರಲ್ಲಿ ಖಾತೆಗೆ ಅರ್ಜಿ ಕೊಟ್ಟಿದ್ದಾರೆ. ಖಾತೆ ಮಾಡುವಾಗ ಮಾಡಿರೋ ಮಿಸ್ಟೇಕ್‌ಗಳನ್ನು ಸರಿಪಡಿಸುವಂತೆ ಹೇಳಿದ್ದೇವೆ. ಒಬ್ಬ ಸಾಮಾನ್ಯ ನಾಗರಿಕ ಜಾಗದ ವಿಷಯದಲ್ಲಿ ಸರಿಪಡಿಸಿಕೊಳ್ಳುವ ಅರ್ಜಿ ಹಾಕಿದರೆ ತಿಂಗಳುಗಟ್ಟಲೆ ಕಳೆದರೂ ಆಗುವುದಿಲ್ಲ. ಮೈಸೂರು ಗೆಜೆಟ್ ನೋಟಿಫಿಕೇಶನ್‌ನಲ್ಲಿ ಅವರು ಕೊಟ್ಟಿರುವ ಜಾಗವೇ ಬೇರೆ ಈ ಜಾಗವೇ ಬೇರೆ ಇದನ್ನೆಲ್ಲ ಸಾಭೀತು ಪಡಿಸುತ್ತೇವೆ. 2012ರಲ್ಲಿ ನಿರ್ಣಯ ಆಗಿದೆ ಅದಕ್ಕಿಂತ ಮೊದಲು ಏನಿತ್ತು ಅದನ್ನು ನಾವು ನೋಡಿದ್ದೇವೆ ಎಂದರು.
ಗ್ರಾಮ ಠಾಣಾ ಜಾಗ ಇದ್ದಕ್ಕಿದ್ದ ಹಾಗೆ ಹೇಗೆ ವಕ್ಫ್ ಆಸ್ತಿ ಆಯ್ತು ಗೊತ್ತಿಲ್ಲ. ಸಾರ್ವಜನಿಕರ, ರೈತರ ದೇಗುಲಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದಾರೆ. ಲೋಕಸಭೆಯಲ್ಲಿ ವಕ್ಫ್ ಬಿಲ್ ಬಂದಿರುವುದು ಇಷ್ಟೆಲ್ಲ ಕೊಳ್ಳೆ ಹೊಡೆಯುತ್ತಿರುವುದನ್ನು ಗಮನದಲ್ಲಿಟ್ಟುಕೊಂಡೇ ಮಾಡಿರುವುದು ಎಂದರು.ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಿಲ್ ಪಾಸಾಗಿದೆ ನಮಗೆ ನ್ಯಾಯ ಸಿಗುತ್ತದೆ. ಸಾರ್ವಜನಿಕ ಆಸ್ತಿಗಳನ್ನು ಉಳಿಸಿಕೊಳ್ಳಲು ನಮಗೆ ಶಕ್ತಿ ಸಿಗುತ್ತದೆ. ಎಸ್ಪಿ ಮತ್ತು ಡಿಸಿ ಅವರ ಗಮನಕ್ಕೆ ತಂದಿದ್ದೇವೆ. ಸಾರ್ವಜನಿಕರ ಸ್ವತ್ತಾಗಿರುವ ಹಿನ್ನೆಲೆಯಲ್ಲಿ ನಾಗರಿಕರ ಉಪಯೋಗಕ್ಕೆ ಬಿಡಬೇಕು ಎಂದು ಹೇಳಿದ್ದೇವೆ. ಯಾವಾಗ ವಿಕೋಪದ ಪರಿಸ್ಥಿತಿ ಉಂಟಾಗುತ್ತದೆ, ಆಗ ಬಿಜೆಪಿ ರಸ್ತೆಗಿಳಿದು ಹೋರಾಟ ನಡೆಸಲಿದೆ ಎಂದು ಹೇಳಿದರು.
ಈದ್ಗಾ ಇದ್ದರೆ ಬಂದು ಪೂಜೆ ಮಾಡಲಿ, ಪ್ರಾರ್ಥನೆ ಮಾಡಲಿ ಅದರ ಬಗ್ಗೆ ನಮ್ಮ ತಕರಾರಿಲ್ಲ. ಇದು ಸರ್ಕಾರದ ಆಸ್ತಿ ಯಾರಪ್ಪನ ಮನೆಯ ಸ್ವತ್ತು ಅಲ್ಲ. ರಾಜ್ಯ ಸರ್ಕಾರದ ಒತ್ತಡ, ದೊಡ್ಡ ದೊಡ್ಡ ಅಧಿಕಾರಿಗಳ ಒತ್ತಡದಿಂದ ಪಾಲಿಕೆ ಮಣಿದಿದೆ. ಈ ಹಿನ್ನೆಲೆಯಲ್ಲಿ ಖಾತೆ ಆಗಿದೆ ಇದು ತಪ್ಪು ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು.