ಸಾರಾಂಶ
ಹಿರಿಯೂರು: ತಾಲೂಕಿನಾದ್ಯಂತ ಯಾವುದೇ ರೈತರ ಜಮೀನುಗಳ ಪಹಣಿಯಲ್ಲಿ ಅಕ್ರಮವಾಗಿ ವಕ್ಫ್ ಬೋರ್ಡ್ ನ ಅಥವಾ ಇನ್ಯಾವುದೇ ಸಂಘ ಸಂಸ್ಥೆಯ ಹೆಸರನ್ನು ಸೇರಿಸಬಾರದು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ತಾಲೂಕು ಘಟಕದಿಂದ ತಾಲೂಕು ಕಚೇರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಕಿಸಾನ್ ಸಂಘದ ತಾಲೂಕು ಘಟಕದ ಅಧ್ಯಕ್ಷ ಗಡಾರಿ ಕೃಷ್ಣಪ್ಪ ಮಾತನಾಡಿ, ತಾಲೂಕಿನ ರೈತರ ಒಂದು ಇಂಚು ಜಮೀನನ್ನು ಯಾವುದೇ ಸಂಘ ಸಂಸ್ಥೆಗಳು ಅಕ್ರಮವಾಗಿ ವಶಪಡಿಸಿಕೊಂಡಲ್ಲಿ ಅಂತಹವರ ವಿರುದ್ಧ ಭಾರತೀಯ ಕಿಸಾನ್ ಸಂಘವು ಉಗ್ರ ಹೋರಾಟ ಮಾಡುತ್ತದೆ ಎಂದು ಎಚ್ಚರಿಸಿದರು.ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾತ್ರಿಕೇನಹಳ್ಳಿ ಮಂಜುನಾಥ್ ಮಾತನಾಡಿ, ತಾಲೂಕಿನ ರೈತರು ತಮ್ಮ ತಮ್ಮ ಜಮೀನಿನ ಪಹಣಿಯನ್ನು ಪರೀಕ್ಷಿಸಿಕೊಳ್ಳಬೇಕು. ಇಲ್ಲವಾದರೆ ಆರ್‌ಟಿಸಿ 11ನೇ ಕಾಲಂನಲ್ಲಿ ನಿಮ್ಮ ಜಮೀನಿನ ಹಕ್ಕನ್ನು ಸದ್ದಿಲ್ಲದೇ ನಿಮಗೆ ನೋಟಿಸ್ ಕೂಡ ಕೊಡದೇ ಆಕ್ರಮಿಸಿಕೊಳ್ಳುವ ಸಂಭವವಿದೆ. ಇದರಿಂದ ನಿಮ್ಮ ಜಮೀನಿನ ವಾರಸುದಾರರು ಬೇರೆಯವರಾಗುವುದರಿಂದ ಬ್ಯಾಂಕುಗಳ ಸಾಲ ಸೌಲಭ್ಯದಿಂದ ವಂಚಿತರಾಗುತ್ತೀರಿ. ಇಂತಹ ಪ್ರಕರಣಗಳೇನಾದರು ಕಂಡು ಬಂದರೆ ಭಾರತೀಯ ಕಿಸಾನ್ ಸಂಘವು ನಿಮ್ಮ ಜೊತೆಗಿದ್ದು, ನಿಮಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಹೋರಾಟ ನಡೆಸಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ದಿಂಡಾವರ ಚಂದ್ರಗಿರಿ, ಉಪಾಧ್ಯಕ್ಷ ಪರಮೇನಹಳ್ಳಿ ರಂಗನಾಥ್, ತಿಪ್ಪೇಸ್ವಾಮಿ, ಮೆಟಿಕುರ್ಕೆ ಜಯಣ್ಣ, ಸಹ ಕಾರ್ಯದರ್ಶಿ ಕೆ.ಕೆ.ಹಟ್ಟಿ ಜಯಪ್ರಕಾಶ್, ತಾಲೂಕು ಪದಾಧಿಕಾರಿಗಳಾದ ಎ.ವಿ.ಕೊಟ್ಟಿಗೆ ಸುರೇಶ್, ಕಾಳಿದಾಸ್ ಮುಂತಾದವರು ಹಾಜರಿದ್ದರು.