ಸಾರಾಂಶ
ಮಾಹಿತಿಯ ಕೊರತೆಯಿಂದ ಸಿಗದ ಭೂಮಿಯ ಹಕ್ಕು, 2023ರಲ್ಲಿ ಜಾರಿಗೆ ಬಂದ ಕಾಯ್ದೆಯ ಬಗ್ಗೆ ಕಾನೂನು ಅರಿವು,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಾಜ್ಯ ಸರ್ಕಾರ ಶೋಷಿತ ಸಮುದಾಯಗಳಿಗೆ ಮಂಜೂರು ಮಾಡಿರುವ ದರಖಾಸ್ತು, ಬಗರ್‌ಹುಕುಂ ನಂತಹ ಯಾವುದೇ ರೀತಿಯ ಜಮೀನುಗಳು ಪ್ರಭಾವಿಗಳು, ಮೇಲ್ವರ್ಗದವರಿಂದ ಕಬಳಿಕೆ, ಖರೀದಿಯಾಗಿದ್ದರೇ ಅಂತಹ ಜಮೀನುಗಳನ್ನು ಮೂಲ ವಾರಸುದಾರರು ಮರಳಿ ತಮ್ಮ ವಶಕ್ಕೆ ಪಡೆಯಲು ಅನುವಾಗುವಂತಹ ಕಾಯ್ದೆ 2023ರಲ್ಲಿ ಜಾರಿಯಾಗಿದೆ. ಈ ಕಾನೂನಿನ ಬಗ್ಗೆ ಅರಿವಿಲ್ಲದಿರುವುದು, ಕಾನೂನು ಹೋರಾಟದ ಬಗ್ಗೆ ಮಾಹಿತಿ ಕೊರತೆಯಿಂದ ಶೋಷಿತ ಸಮುದಾಯದವರಿಗೆ ಜಮೀನು ಧಕ್ಕದಂತಾಗಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಕಾನೂನು ಅರಿವು ಕಾರ್ಯಾಗಾರ ನಡೆಸಲಾಗುತ್ತಿದೆ ಎಂದು ಹೈಕೋರ್ಟ್ ವಕೀಲರು ಹಾಗೂ ಎಐಕೆಕೆಎಸ್ ಅಧ್ಯಕ್ಷ ಕಂದೇಗಾಲ ಶ್ರೀನಿವಾಸ್ ಹೇಳಿದರು.ಪರ್ಯಾಯ ಕಾನೂನು ವೇದಿಕೆ ಹಾಗೂ ಸಂವಿಧಾನ ಸಂರಕ್ಷಣಾ ವೇದಿಕೆ ಜಿಲ್ಲಾ ಘಟಕಗಳ ಸಂಯುಕ್ತಾಶ್ರಯದಲ್ಲಿ ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಪಿಟಿಸಿಎಲ್ ಕಾಯ್ದೆ, ಕರ್ನಾಟಕ ಭೂ ಸುಧಾರಣಾ ಕಾಯ್ದೆ, ಭೂ ಮಂಜೂರಾತಿ ಕಾಯ್ದೆ ಮತ್ತು ಇನಾಂ ಭೂಮಿ ರದ್ಧತಿ ಕಾಯ್ದೆ ಕುರಿತು ಉಪನ್ಯಾಸ ನೀಡಿದರು.
ಸಕಲ ಜೀವರಾಶಿಗಳ ಬದುಕಿಗೆ ಭೂಮಿಯೇ ಆಧಾರ. ಹಿಂದೆ ಭೂಮಿ ಹಕ್ಕಿನ ಪ್ರತಿಪಾದನೆಗೆ ಅನೇಕ ಹೋರಾಟ, ಚಳವಳಿಗಳು ನಡೆದು ಸಾವಿರಾರು ಜನರ ಬಲಿದಾನ ವಾಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಭೂಮಿ ಹಕ್ಕಿಗೆ ಅನೇಕ ಹೋರಾಟ, ರೈತ ಧಂಗೆ ನಡೆದಿದ್ದು, ಸ್ವಾತಂತ್ರ್ಯ ನಂತರ ಪಶ್ಚಿಮಬಂಗಾಳದ ನಕ್ಸಲ್‌ಬರಿ ಗ್ರಾಮದಲ್ಲಿ ಮೊದಲ ಬಾರಿಗೆ ಭೂಮಿ ಹಕ್ಕಿಗೆ ಸಂಘರ್ಷ ನಡೆಯಿತು. ನಂತರ ಭೂಮಿ ಹಕ್ಕಿನ ಹೋರಾಟ ದೇಶದ ವಿವಿಧ ರಾಜ್ಯಗಳಲ್ಲೂ ನಡೆದಿದೆ. ಕರ್ನಾಟಕದಲ್ಲಿ ಶಾಂತವೇರಿ ಗೋಪಾಲಗೌಡ ನೇತೃತ್ವದಲ್ಲಿ ನಡೆದ ಭೂಮಿ ಹಕ್ಕಿನ ಹೋರಾಟದ ಫಲವಾಗಿ ರಾಜ್ಯದಲ್ಲಿದ್ದ ಹಿಂದಿನ ಸರ್ಕಾರಗಳು ಉಳುವವವನೇ ಭೂ ಒಡೆಯ, ಭೂ ಸುಧಾರಣಾ ಕಾಯ್ದೆಗಳ ಮೂಲಕ ಭೂ ರಹಿತರು, ಶೋಷಿತ ಸಮುದಾಯಗಳಿಗೆ ಭೂಮಿ ಹಕ್ಕು ನೀಡಿವೆ ಎಂದು ವಿವರಿಸಿದರು.ಭೂಮಿ ಹಕ್ಕಿಗಾಗಿ ಸರ್ಕಾರದ ಅನೇಕ ಕಾಯ್ದೆ, ಕಾನೂನು ಪರಿಣಾಮಕಾರಿಯಾಗಿ ಜಾರಿಯಾಗದ ಪರಿಣಾಮ ರಾಜ್ಯದಲ್ಲಿ ಇಂದಿಗೂ ಅರ್ಹರಿಗೆ ಭೂಮಿ ಹಕ್ಕು ಸಿಕ್ಕಿಲ್ಲ ಎಂದ ಅವರು, ರಾಜ್ಯದಲ್ಲಿ ಇನಾಂ ಭೂಮಿ ರದ್ಧತಿ ಕಾಯ್ದೆ, ಧಾರ್ಮಿಕ ದತ್ತಿ ಕಾಯ್ದೆ ಜಾರಿಯಿಂದ ಸಾವಿರಾರು ಎಕರೆ ಸರ್ಕಾರದ ವಶಕ್ಕೆ ಬಂದಿವೆ. ಆದರೆ ಇಂದಿಗೂ ಸಾವಿರಾರು ಎಕರೆ ಭೂಮಿ ದೇವಾಲಯಗಳು, ಮಠಗಳ ಹೆಸರಿನಲ್ಲೇ ಇವೆ, ಇಂತಹ ಜಮೀನು ಗಳನ್ನು ತನ್ನ ವಶಕ್ಕೆ ಪಡೆದು ಭೂ ರಹಿತರಿಗೆ ಹಂಚಿಕೆ ಮಾಡುವಲ್ಲಿ ಸರ್ಕಾರ, ಕಂದಾಯಾಧಿಕಾರಿಗಳು, ಜಿಲ್ಲಾಡಳಿತ ವಿಫಲವಾಗಿದೆ ಎಂದು ಹೇಳಿದರು.1969ರಲ್ಲಿ ಭೂ ಮಂಜೂರಾತಿ ಕಾಯ್ದೆ ಜಾರಿಯಾಗಿದ್ದು, ಈ ಕಾಯ್ದೆ ಪ್ರಕಾರ ಪ್ರತ ಗ್ರಾಮ, ಹೋಬಳಿ, ತಾಲೂಕು ವ್ಯಾಪ್ತಿಯಲ್ಲಿ ಖರಾಬು ಜಮೀನು, ಗೋಮಾಳದಂತಹ ಹೆಚ್ಚುವರಿ ಸರ್ಕಾರಿ ಭೂಮಿ ಎಷ್ಟಿದೆ ಎಂಬ ಮಾಹಿತಿಯನ್ನು ಸ್ಥಳೀಯ ಕಂದಾಯಾಧಿಕಾರಿ ಪ್ರತಿ ವರ್ಷ ಕಲೆ ಹಾಕಬೇಕು. ಈ ಸಂಬಂಧ ಅವರು ತಹಸೀಲ್ದಾರ್, ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಬೇಕು. ಜಿಲ್ಲಾಧಿಕಾರಿ ಲಭ್ಯವಿರುವ ಸರ್ಕಾರಿ ಭೂಮಿ ಬಗ್ಗೆ ಪ್ರಕಟಣೆ ಹೊರಡಿಸಿ, ಲಭ್ಯವಿರುವ ಭೂಮಿ ಪೈಕಿ ಎಸ್ಸಿ, ಎಸ್ಟಿಗಳಿಗೆ ಶೇ.50, ಹಿಂದುಳಿದ ವರ್ಗಗಳಿಗೆ ಶೇ.30, ಶೇ.10 ಇತರ ವರ್ಗದವರಿಗೆ, ಶೇ.5 ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ಶೇ.5 ರಷ್ಟನ್ನು ಮಾಜಿ ಸೈನಿಕರಿಗೆ ಮಂಜೂರು ಮಾಡಬೇಕು. ಆದರೆ, ಕಂದಾಯಾಧಿ ಕಾರಿಗಳು, ಜಿಲ್ಲಾಡಳಿತ ಈ ನಿಯಮ ಪಾಲಿಸದ ಪರಿಣಾಮ ಸರ್ಕಾರಿ ಜಮೀನು ಉಳ್ಳವರ ಪಾಲಾಗುತ್ತಿದೆ. ಶೋಷಿತ ಸಮುದಾಯಗಳು ಭೂಮಿ ಹಕ್ಕಿನಿಂದ ವಂಚಿತವಾಗಿವೆ. ಈ ಅನ್ಯಾಯದ ಬಗ್ಗೆ ಶಾಸಕರ ನೇತೃತ್ವದ ಭೂ ಮಂಜೂರಾತಿ ಕಮಿಟಿಗಳು ಮಾತನಾಡುತ್ತಿಲ್ಲ ಎಂದು ವಿಷಾದಿಸಿದರು.ಹಿಂದೆ ದಲಿತರು, ಶೋಷಿತ ಸಮುದಾಯಗಳಿಗೆ ಸರ್ಕಾರ ಭೂಮಿ ಹಕ್ಕು ನೀಡಿದೆ. ಆದರೆ ಪ್ರಭಾವಿಗಳು, ಮೇಲ್ವರ್ಗದವರು ಬೆದರಿಕೆ ಅಥವಾ ಹಣದ ಆಮಿಷವೊಡ್ಡಿ ಇಂತಹ ಭೂಮಿಯನ್ನು ಕಬಳಿಸಿದ್ದಾರೆ. ಇದರಿಂದ ಶೋಷಿತರ ಬದುಕು ಹೀನಾಯ ಸ್ಥಿತಿಗೆ ತಳ್ಳಲ್ಪಟ್ಟಿದೆ. ಇಂತಹ ಜಮೀನು ಗಳನ್ನು ಮೂಲ ಮಂಜೂರಾತಿದಾರರ ವಶಕ್ಕೆ ಕೊಡಿಸುವಲ್ಲಿ ಮೊದಲ ಬಾರಿಗೆ ಭದ್ರಾವತಿಯಲ್ಲಿ ದಸಂಸ ನಡೆಸಿದ ಹೋರಾಟದ ಫಲವಾಗಿ ಪಿಟಿಸಿಎಲ್ ಕಾಯ್ದೆ ಜಾರಿ ಮಾಡಿದೆ. ಈ ಕಾಯ್ದೆಯಿಂದ ಕಬಳಿಕೆ, ಖರೀದಿಯಾಗಿದ್ದ ಜಮೀನುಗಳ ಮೂಲ ಜಮೀನು ಮಾಲೀಕರಿಗೆ ಧಕ್ಕು ವಂತಾಗಿದೆಯಾದರೂ ಕಾನೂನಿನ ಅರಿವಿನ ಕೊರತೆಯಿಂದ ಶೋಷಿತ, ದಲಿತರಿಗೆ ಮಂಜೂರಾದ ಸಾವಿರಾರು ಎಕರೆ ಜಮೀನುಗಳು ಇಂದಿಗೂ ಬಲಾಢ್ಯರು, ಪ್ರಭಾವಿಗಳ ವಶದಲ್ಲೇ ಇದೆ. ಇಂತಹ ಪ್ರಕರಣಗಳ ಬಗ್ಗೆ ಸಂತ್ರಸ್ಥರಲ್ಲಿ ಅರಿವು ಮೂಡಿಸಿ ಕಾನೂನು ಹೋರಾಟದ ಮೂಲಕ ಜಮೀನನ್ನು ಮರಳಿ ಮೂಲ ಮಂಜೂರಿದಾರರ ವಶಕ್ಕೆ ನೀಡುವ ಕೆಲಸ ರಾಜ್ಯಾದ್ಯಂತ ಮಾಡಲಾಗುತ್ತಿದೆ ಎಂದರು.ದಲಿತ ದೌರ್ಜನ್ಯ ಪ್ರತಿಬಂಧಕ ಕಾಯ್ದೆ ಕುರಿತು ಮಾತನಾಡಿದ ಹೈಕೋರ್ಟ್ ವಕೀಲ ಬಸವಪ್ರಸಾದ್, ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಸಂವಿಧಾನದ ಆಶಯ. ಈ ಆಶಯಗಳಿಗೆ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಅಡ್ಡಿಯಾಗಿದೆ. ಈ ಆಚರಣೆಗಳ ಮೂಲಕ ಎಸ್ಸಿ, ಎಸ್ಟಿ ಸಮುದಾಯದ ವ್ಯಕ್ತಿ ಘನತೆಗೆ ಧಕ್ಕೆಯಾಗುವುದನ್ನು ತಪ್ಪಿಸಲು ದಲಿತ ದೌರ್ಜನ್ಯ ಪ್ರತಿಬಂಧಕ ಕಾಯ್ದೆ ಜಾರಿ ಮಾಡಲಾಗಿದೆ. ಕಾಯ್ದೆ ಜಾರಿಯಲ್ಲಿದ್ದರೂ ವರದಿಯಾಗುವ ಪ್ರಕರಣಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷೆಯಾಗುತ್ತಿಲ್ಲ. ಕಾನೂನಿನ ಅರಿವಿನ ಕೊರತೆಯಿಂದ ಶಿಕ್ಷೆಯ ಪ್ರಮಾಣ ಕಡಿಮೆ ಯಾಗುತ್ತಿದೆ ಎಂದರು.
ಸಂವಿಧಾನ ರಕ್ಷಣಾ ವೇದಿಕೆ ಜಿಲ್ಲಾ ಸಂಚಾಲಕ ಕೃಷ್ಣಮೂರ್ತಿ ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಸ್ಟಡಿ ಸರ್ಕಲ್ ಜಿಲ್ಲಾಧ್ಯಕ್ಷ ಚಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಕೀಲ ತರೀಕೆರೆ ಚಂದ್ರಪ್ಪ ಉಪಸ್ಥಿತರಿದ್ದರು.29 ಕೆಸಿಕೆಎಂ 2ಚಿಕ್ಕಮಗಳೂರಿನ ಅಂಬೇಡ್ಕರ್ ಸಮುದಾಯ ಭವನದಲ್ಲಿ ಪಿಟಿಸಿಎಲ್ ಕಾಯ್ದೆ, ಕರ್ನಾಟಕ ಭೂಸುಧಾರಣಾ ಕಾಯ್ದೆ, ಭೂ ಮಂಜೂರಾತಿ ಕಾಯ್ದೆ ಮತ್ತು ಇನಾಂ ಭೂಮಿ ರದ್ದತಿ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಹೈಕೋರ್ಟ್ ವಕೀಲರಾದ ಕಂದೇಗಾಲ ಶ್ರೀನಿವಾಸ್, ಬಸವಪ್ರಸಾದ್, ಕೃಷ್ಣಮೂರ್ತಿ, ಚಂದ್ರಪ್ಪ ಇದ್ದರು.