ಮುಂಗಾರಿನ ಬಿತ್ತನೆಗೆ ಮಿದುವಾಯಿತು ನೆಲ

| Published : May 22 2025, 12:55 AM IST

ಸಾರಾಂಶ

ಕಳೆದ ಐದಾರು ದಿನಗಳಿಂದ ಆಗಾಗ್ಗೆ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಹಳ್ಳಕೊಳ್ಳಗಳು ಭರ್ತಿಯಾಗಲಾರಂಭಿಸಿವೆ.

ಅವಧಿಪೂರ್ವವೇ ಶುರುಗೊಂಡ ಮಳೆ/ ತುಂಬಿಕೊಂಡ ಹಳ್ಳ-ಕೊಳ್ಳಗಳು/ ತಂಪಾಯಿತು ಬಿಸಿಲೂರು

ಕನ್ನಡಪ್ರಭ ವಾರ್ತೆ ಬಳ್ಳಾರಿ

ಕಳೆದ ಐದಾರು ದಿನಗಳಿಂದ ಆಗಾಗ್ಗೆ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಹಳ್ಳಕೊಳ್ಳಗಳು ಭರ್ತಿಯಾಗಲಾರಂಭಿಸಿವೆ. ಅವಧಿ ಮುನ್ನವೇ ಶುರುಗೊಂಡ ಮಳೆಯಿಂದ ರೈತಾಪಿಗಳು ಈ ಬಾರಿ ಉತ್ತಮ ಬೆಳೆ ತೆಗೆಯುವ ಹುಮ್ಮಸ್ಸಿನಲ್ಲಿದ್ದಾರೆ. ಹವಾಮಾನ ಇಲಾಖೆ ಮೂಲಗಳ ಪ್ರಕಾರ ಕಳೆದ ಒಂದೂವರೆ ದಶಕದ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಮುಂಗಾರು ಹಂಗಾಮಿನ ಮಳೆ ಮುಂಚಿತವಾಗಿ ರಾಜ್ಯ ಪ್ರವೇಶಿಸಿದ್ದು ಜಿಲ್ಲೆಯಲ್ಲಿ ಮಳೆಯಾರ್ಭಟ ಕಂಡು ಬಂದಿದೆ.ಸಂಡೂರು ತಾಲೂಕಿನ ಜೀವನದಿ ಎನಿಸಿದ ತಾರಾನಗರ ಬಳಿಯ ನಾರೀಹಳ್ಳ ಜಲಾಶಯ ಭರ್ತಿಯಾಗಿದೆ. ಜಲಾಶಯ 0.81 ಟಿಎಂಸಿ ಸಾಮರ್ಥ್ಯವಿದ್ದು ಈ ಪೈಕಿ 0.762 ಟಿಎಂಸಿ ನೀರು ಸಂಗ್ರಹಗೊಂಡಿದೆ. ನಾರೀಹಳ್ಳ ಜಲಾಶಯದಿಂದ ಸಂಡೂರು ಪಟ್ಟಣ ಹಾಗೂ ದೋಣಿಮಲೈ ಟೌನ್‌ಶಿಫ್‌ಗೆ ಕುಡಿವನೀರು ಪೂರೈಕೆಯಾಗುತ್ತಿದೆ. ಜಲಾಶಯದ ಭರ್ತಿಯಿಂದ ಸಂಡೂರಿಗೆ ಕುಡಿವನೀರಿನ ಸಮಸ್ಯೆ ನೀಗಲಿದೆ. ಸಿರುಗುಪ್ಪ ತಾಲೂಕಿನ ಹೊಸಹಳ್ಳಿ-ಕರೂರು ಬಳಿಯ ಹಿರೇಹಳ್ಳ, ಕರ್ನಾಟಕಾಂಧ್ರ ಗಡಿಭಾಗದ ಗರ್ಜಿ ಹಳ್ಳ, ರಾರಾವಿ ಬಳಿಯ ಯಲ್ಲಮ್ಮನಹಳ್ಳಗಳು ಭರ್ತಿಯಾಗಿ ನೀರು ಹೊರ ಹರಿಯುತ್ತಿವೆ. ಈ ಮೂರು ಹಳ್ಳಗಳು ಭರ್ತಿಗೊಂಡಿರುವುದರಿಂದ ಗ್ರಾಮೀಣ ಭಾಗದ ಅನೇಕ ಗ್ರಾಮಗಳ ಸಂಪರ್ಕ ಕಡಿತಗೊಂಡಿವೆ. ಬೇರೆ ಮಾರ್ಗಗಳನ್ನು ಬಳಸಿ ಗ್ರಾಮೀಣರು ಊರು ಸೇರಿಕೊಳ್ಳುವಂತಾಗಿದೆ. ರಾರಾವಿ ಬಳಿಯ ಸೇತುವೆ ನಿರ್ಮಾಣದಿಂದಾಗಿ ಪ್ರತಿಬಾರಿ ಮಳೆಗಾಲದಲ್ಲಿ ಸಮಸ್ಯೆಯಾಗುತ್ತಿದ್ದ ಆಂಧ್ರಸಂಪರ್ಕ ಕಡಿತ ಸಮಸ್ಯೆ ನಿವಾರಣೆಗೊಂಡಿದೆ.

ಬಳ್ಳಾರಿ, ಕುರುಗೋಡು ಹಾಗೂ ಕಂಪ್ಲಿ ತಾಲೂಕಿನಲ್ಲಿ ಸುರಿದ ಮಳೆಗೆ ಕೆರೆಗಳು ತುಂಬಿಕೊಳ್ಳುತ್ತಿದ್ದು, ಮಳೆಯಾಶ್ರಿತ ಪ್ರದೇಶಗಳಲ್ಲಿ ಬಿತ್ತನೆ ಕಾರ್ಯಕ್ಕೆ ಅನುಕೂಲ ಒದಗಿಸಿದೆ. ಮಳೆಯಾಗಮನದಿಂದ ಈ ಮೂರು ತಾಲೂಕುಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಚಾಲನೆ ಸಿಕ್ಕಿದ್ದು ಮಳೆಯಾಶ್ರಿತ ಕಡೆ ಮತ್ತಷ್ಟೂ ಚುರುಕಾಗಿದೆ.ಈ ಬಾರಿಯ ಮಳೆಗೆ ಜಿಲ್ಲೆಯ ನಾಲ್ವರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಕುರಿಗಳು ಸಿಡಿಲಿಗೆ ಬಲಿಯಾಗಿವೆ. ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಯಾಗಿವೆ. ಕಳೆದ ವರ್ಷದ ಮುಂಗಾರಿನಲ್ಲಿ ಯಾವುದೇ ಸಾವು ನೋವು ಸಂಭವಿಸಿರಲಿಲ್ಲ. 2023/24ನೇ ಸಾಲಿನಲ್ಲಿ ಜಿಲ್ಲೆಯ 8 ಜನರು ಸಿಡಿಲು ಬಡಿದು ಸಾವನ್ನಪ್ಪಿದ್ದರು. 200ಕ್ಕೂ ಹೆಚ್ಚು ಕುರಿಗಳು ಸಾವಿಗೀಡಾಗಿದ್ದವು. ಈ ಬಾರಿ ಸಿಡಿಲಿಗೆ ಸತ್ತವರ ಪೈಕಿ ಸಿರುಗುಪ್ಪದ ಇಬ್ಬರು, ಕಂಪ್ಲಿ ಹಾಗೂ ಕುರುಗೋಡಿನ ತಲಾ ಒಬ್ಬರು ಕುರಿಗಾಹಿಗಳಾಗಿದ್ದಾರೆ.

ಮಂಗಳವಾರ ರಾತ್ರಿ ಜಿಲ್ಲೆಯ ಕಂಪ್ಲಿ ಹಾಗೂ ಕುರುಗೋಡು ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಬಳ್ಳಾರಿ, ಸಂಡೂರು ಹಾಗೂ ಸಿರುಗುಪ್ಪ ತಾಲೂಕಿನಲ್ಲಿ ಸಾಧಾರಣ ಮಳೆಯಾಗಿದೆ.

ಬಳ್ಳಾರಿ 6.1 ಮಿಮೀ, ಸಂಡೂರು 9.9 ಮಿಮೀ, ಸಿರುಗುಪ್ಪ 9.4 ಮಿಮೀ, ಕುರುಗೋಡು 24.1 ಮಿಮೀ ಹಾಗೂ ಕಂಪ್ಲಿ ತಾಲೂಕಿನಲ್ಲಿ 26.6 ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕುರುಗೋಡು ತಾಲೂಕಿನ ಸಿದ್ದಮ್ಮನಹಳ್ಳಿ, ದಮ್ಮೂರು ಹಾಗೂ ಚಾನಾಳ್ ಗ್ರಾಮದ ಹೊರ ವಲಯದಲ್ಲಿ ಭಾರೀ ಪ್ರಮಾಣದ ಹಳ್ಳ ಬಂದಿದ್ದು, ಸಂಜೆ ಹೊತ್ತಿಗೆ ನೀರು ಇಳಿಮುಖಗೊಂಡಿದೆ.ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಹೊಲಗಳಲ್ಲಿ ಇರಿಸಲಾಗಿದ್ದ ಬತ್ತದ ಮೂಟೆಗಳ ರಕ್ಷಣೆಗೆ ರೈತರು ಪರದಾಡುವ ದೃಶ್ಯಗಳು ಕಂಡು ಬಂದವು. ಮುಂಗಾರು ಹಂಗಾಮು ಇಷ್ಟೊಂದು ಬೇಗ ಶುರುಗೊಳ್ಳುತ್ತದೆ ಎಂಬುದರ ನಿರೀಕ್ಷೆ ಇಲ್ಲದ ರೈತರು, ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಬತ್ತವನ್ನು ಹೊಲಗಳಲ್ಲಿಯೇ ಇರಿಸಿಕೊಂಡಿದ್ದರು. ಕೆಲವರು ಬತ್ತವನ್ನು ಮೂಟೆಯಲ್ಲಿರಿಸಿದ್ದರೆ, ಮತ್ತೆ ಕೆಲವರು ರಾಶಿ ಮಾಡಿಟ್ಟುಕೊಂಡು ಸೂಕ್ತ ಬೆಲೆಯ ನಿರೀಕ್ಷೆಯಲ್ಲಿದ್ದರು. ದಿಢೀರ್ ಸುರಿಯುತ್ತಿರುವ ಮಳೆಗೆ ರೈತರು ಬತ್ತ ರಕ್ಷಣೆಗೆ ಪರದಾಡುತ್ತಿದ್ದಾರೆ.