ದಾವಣಗೆರೆಗೆ ನೈಜ ಅರ್ಥದಲ್ಲಿ ಸಮರ್ಥ ನಾಯಕತ್ವ ನೀಡಿದ ಬೆರಳೆಣಿಕೆಯ ನಾಯಕರಲ್ಲಿ ಖಂಡಿತವಾಗಿಯೂ ಮೊದಲ ಸಾಲಿನಲ್ಲಿ ಕಾಣಬರುವ ಹೆಸರು ಯಜಮಾನ್ ಮೋತಿ ವೀರಣ್ಣ. ತೊಂಬತ್ತರ ಹೊಸ್ತಿಲಲ್ಲಿದ್ದು, ಶತಮಾನ ಕಾಣಲೆಂಬ ಅಭಿಮಾನಿಗಳ ಆಶಯ ಪೂರೈಸಲಾಗದೆ ಕಾಲನ ಕರೆಗೆ ಓಗೊಟ್ಟು ಇಂದು ಮುಂಜಾನೆ ಸಂತನಂತೆ ನಡೆದು ಹೋದ ವೀರಣ್ಣನವರ ನಿಧನ ಅಕ್ಷರಶಃ ದಾವಣಗೆರೆಗೆ ತುಂಬಿ ಬಾರದ ನಷ್ಟ. ಹಿರಿಯ ಧುರೀಣ ಡಾ.ಶಾಮನೂರು ಶಿವಶಂಕರಪ್ಪನವರ ಕಣ್ಮರೆಯಿಂದಿನ್ನೂ ಸುಧಾರಿಸಿಕೊಳ್ಳದ ನಗರಕ್ಕೆ ಮತ್ತೊಂದು ಹೊಡೆತವಾಗಿದೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆಗೆ ನೈಜ ಅರ್ಥದಲ್ಲಿ ಸಮರ್ಥ ನಾಯಕತ್ವ ನೀಡಿದ ಬೆರಳೆಣಿಕೆಯ ನಾಯಕರಲ್ಲಿ ಖಂಡಿತವಾಗಿಯೂ ಮೊದಲ ಸಾಲಿನಲ್ಲಿ ಕಾಣಬರುವ ಹೆಸರು ಯಜಮಾನ್ ಮೋತಿ ವೀರಣ್ಣ. ತೊಂಬತ್ತರ ಹೊಸ್ತಿಲಲ್ಲಿದ್ದು, ಶತಮಾನ ಕಾಣಲೆಂಬ ಅಭಿಮಾನಿಗಳ ಆಶಯ ಪೂರೈಸಲಾಗದೆ ಕಾಲನ ಕರೆಗೆ ಓಗೊಟ್ಟು ಇಂದು ಮುಂಜಾನೆ ಸಂತನಂತೆ ನಡೆದು ಹೋದ ವೀರಣ್ಣನವರ ನಿಧನ ಅಕ್ಷರಶಃ ದಾವಣಗೆರೆಗೆ ತುಂಬಿ ಬಾರದ ನಷ್ಟ. ಹಿರಿಯ ಧುರೀಣ ಡಾ.ಶಾಮನೂರು ಶಿವಶಂಕರಪ್ಪನವರ ಕಣ್ಮರೆಯಿಂದಿನ್ನೂ ಸುಧಾರಿಸಿಕೊಳ್ಳದ ನಗರಕ್ಕೆ ಮತ್ತೊಂದು ಹೊಡೆತವಾಗಿದೆ ಎಂದು ಹಿರಿಯ ಪತ್ರಕರ್ತ ಹಳೇಬೀಡು ರಾಮಪ್ರಸಾದ ತಿಳಿಸಿದ್ದಾರೆ.ನಗರಸಭಾ ಸದಸ್ಯರಾಗಿ, ಶಾಸಕರಾಗಿ, ಸಹಕಾರಿ ಧುರೀಣರಾಗಿ, ಯುವಜನ ಸಂಘಟನೆಗಳ ಸಾರಥಿಯಾಗಿ ಕಳೆದ ಅರವತ್ತರ ದಶಕದಿಂದ ಇತ್ತೀಚಿನ ವರ್ಷಗಳವರೆಗೂ ಸಕ್ರಿಯರಾಗಿದ್ದ ಮೋತಿ ವೀರಣ್ಣನವರು ಜಾತಿ, ಮತ, ಅಂತಸ್ತುಗಳ ವ್ಯತ್ಯಯವಿಲ್ಲದೆ ಎಲ್ಲ ವರ್ಗದ ಗೌರವಕ್ಕೆ ಪಾತ್ರರಾದವರು. ರಾಜಕೀಯ ಪಕ್ಷವೊಂದರ ಜೊತೆ ಗುರ್ತಿಸಿಕೊಂಡಿದ್ದರೂ, ವಿರೋಧ, ಚುನಾವಣೆಗೆ ಮಾತ್ರ ಸೀಮಿತ. ಆನಂತರ ಎಲ್ಲರೊಡನೆಯೂ ಅದೇ ವಿಶ್ವಾಸ - ಅಭಿಮಾನದ ನಡೆ. ಹೀಗಾಗಿಯೇ ಪಕ್ಷ ರಾಜಕಾರಣದಲ್ಲಿದ್ದರೂ ನಿಜ ಅರ್ಥದಲ್ಲಿ ಅಜಾತಶತ್ರುವಾಗಿದ್ದರು ಎಂದಿದ್ದಾರೆ.
ಸರಿರಾತ್ರಿಯಲ್ಲಿಯೂ ಮನೆಬಾಗಿಲಿಗೆ ಹೋಗಿ ನೆರವು ಪಡೆಯಬಹುದಾದ ನಾಯಕನೊಬ್ಬನಿದ್ದರೆ, ಅದು ವೈಎಂವಿ ಮಾತ್ರ ಎಂಬಸ್ಟರ ಮಟ್ಟಿಗೆ ಜನಜನಿತವಾಗಿದ್ದ ವೀರಣ್ಣನವರು ಮನೆತನದಿಂದ, ಮನೆತನದ ವೃತ್ತಿ ವ್ಯಾಪಾರದಿಂದ ಗಳಿಸಿದ ಹಣ ಹಾಕಿ ರಾಜಕಾರಣ ಮಾಡಿದವರು. ಅಷ್ಟಕ್ಕೂ ರಾಜಕಾರಣ ಅವರಿಗೆ ಜನಸೇವೆಗೊಂದು ಮಾರ್ಗ ಮಾತ್ರವೇ ವಿನಾ ಅದೇ ಜೀವನವೂ ಅಲ್ಲ, ಹೇಗಾದರೂ ಸರಿ ದುಡ್ದು ಮಾಡಲೇಬೇಕೆಂಬ ಹಪಾಹಪಿ ಖಂಡಿತವಾಗಿಯೂ ಇರಲೇ ಇಲ್ಲ. ಹೀಗಾಗಿಯೇ ಅವರು ಶಾಸಕರಾಗಿದ್ದಾಗ, ತಮ್ಮ ಬೀಗರೇ ಆದ ವೀರೇಂದ್ರ ಪಾಟೀಲರೇ ಮುಖ್ಯಮಂತ್ರಿಯಾಗಿದ್ದರೂ, ಮಂತ್ರಿಯಾಗುವ ಎಲ್ಲಾ ಅವಕಾಶ - ಅರ್ಹತೆಗಳಿದ್ದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಲದೆ ಕ್ಷೇತ್ರದ ಅಭ್ಯುದಯದತ್ತ ಮಾತ್ರ ಗಮನಹರಿಸಿ ಮುನ್ನಡೆದದ್ದು ಈಗ ಇತಿಹಾಸ.ಆ ದಿನಗಳಲ್ಲಿ ನಟ ರಾಜ್‌ಕುಮಾರ್ ನಾಯಕತ್ವದ ‘ಭಲೇ ರಾಜ’ ಸಿನಿಮಾ ಚಲನಚಿತ್ರ ನಿರ್ಮಾಣ, ದಾವಣಗೆರೆಯಲ್ಲಿನ ವೃತ್ತಿ ಹಾಗೂ ಹವ್ಯಾಸಿ ರಂಗ ನಟರಿಗೆ ಹೆಚ್ಚಿನ ಪ್ರೋತ್ಸಾಹ, ಕನ್ನಡ ರಾಜ್ಯೋತ್ಸವ ಮತ್ತಿತರ ಭಾಷಾಪರ ಹೋರಾಟಕ್ಕೆ ಸಕ್ರಿಯ ನೆರವು ಮಾತ್ರವಲ್ಲದೆ ಎಂಬತ್ತರ ದಶಕದ ಪೂರ್ವಾರ್ಧದಲ್ಲಿ ಡಾ.ಎಂ.ಚಿದಾನಂದ ಮೂರ್ತಿಯವರು ಕರೆದಿದ್ದ ಬೆಳಗಾವಿಯಲ್ಲಿನ ಕನ್ನಡಿಗರ ಶಕ್ತಿ ಪ್ರದರ್ಶನದಲ್ಲಿ ದಾವಣಗೆರೆ ನಗರಾಧ್ಯಕ್ಷರನ್ನೊಳಗೊಂಡ ಸಂಪೂರ್ಣ ಕೌನ್ಸಿಲ್ ಹಾಗೂ ಅಭಿಮಾನಿಗಳು ಭಾಗವಹಿಸಿ ನ ಭೂತೋ ಭವಿಷ್ಯತಿ ಎಂಬಂತೆ ಯಶಸ್ವಿಗೊಳಿಸಿದ್ದು ಆಗ ನಗರ ಸಭಾ ಸದಸ್ಯರಾಗಿದ್ದ ವೀರಣ್ಣನವರೇ.
ಯಜಮಾನ್ ಮೋತಿ ವೀರಣ್ಣನವರ ನಿಧನದೊಂದಿಗೆ ವಿಶ್ವಾಸ, ಆತ್ಮೀಯತೆ, ಜನಪರ ಕಾಳಜಿಯ ನೈಜ ನಾಯಕತ್ವದ ಕೊನೆಯ ಕೊಂಡಿ ಕಳಚಿದಂತಾಗಿದೆ. ವೈಎಂವಿ ದಾವಣಗೆರೆಯ ಜನಮನದಲ್ಲಿ ಸದಾ ಹಸಿರಾಗಿರುತ್ತಾರೆ ಎಂದು ಹೇಳಿದ್ದಾರೆ.