ಯಶಸ್ಸು ಕೇವಲ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುವುದಿಲ್ಲ. ನಮ್ಮ ಆಲೋಚನೆ, ಮನೋಭಾವ ಮತ್ತು ನಡವಳಿಕೆಗಳು ಜೀವನದ ದಿಕ್ಕನ್ನು ನಿರ್ಧರಿಸುತ್ತವೆ. ಇತರರ ನಕಾರಾತ್ಮಕ ವರ್ತನೆ, ಪರಿಸರ ಹಾಗೂ ಹಿಂದಿನ ಅನುಭವಗಳು ನಮ್ಮ ಮೇಲೆ ಪ್ರಭಾವ ಬೀರಬಹುದು. ಶಿಕ್ಷಕರು ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯವ ಬೆಳೆಸಿಕೊಳ್ಳಬಹುದು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಶಿಕ್ಷಕರ ಬಗ್ಗೆ ಅಪಾರ ಕಾಳಜಿ, ಶ್ರದ್ಧೆ ಹೊಂದಿದ್ದ ನನ್ನ ತಂದೆ ಮಾಜಿ ಸಂಸದ ದಿ.ಜಿ.ಮಾದೇಗೌಡ ಶೈಕ್ಷಣಿಕ ಕ್ಷೇತ್ರದ ದಂತಕಥೆಯಾಗಿ ಶಿಕ್ಷಕರ ಏಳ್ಗೆಗೆ ಸದಾ ಪ್ರೋತ್ಸಾಹಿಸುತ್ತಿದ್ದರು ಎಂದು ಭಾರತೀ ಶಿಕ್ಷಣ ಸಂಸ್ಥೆ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಬಣ್ಣಿಸಿದರು.

ಭಾರತೀ ಶಿಕ್ಷಣ ಸಂಸ್ಥೆಯಿಂದ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಕುಗ್ರಾಮದಲ್ಲಿ ಶಿಕ್ಷಣ ಸಂಸ್ಥೆ ತೆರೆದ ಗೌಡರು ಗುಣಮಟ್ಟದ ಶಿಕ್ಷಣ ನೀಡುತ್ತಾ ಹತ್ತಾರು ಹೊಸ ಕೋರ್ಸ್‌ಗಳನ್ನು ಆರಂಭಿಸಿ ಹಳ್ಳಿಗಾಡಿನ ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಣ ಸಂಜೀವಿನಿಯಾಗಿದ್ದಾರೆ ಎಂದು ಸ್ಮರಿಸಿದರು.

ಶಿಕ್ಷಕರು ಕೇವಲ ಪಾಠ ಬೋಧಿಸುವುದಕ್ಕೆ ಸೀಮಿತವಾಗದೆ ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ, ಚಿಂತನಾ ಸಾಮರ್ಥ್ಯ ಹಾಗೂ ಹೊಸ ವಿಚಾರ ಬೆಳೆಸಬೇಕು. ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರೂ ವೇಗವಾಗಿ ಬದಲಾಗುತ್ತಿರುವ ಜ್ಞಾನ ಮತ್ತು ತಂತ್ರಜ್ಞಾನಕ್ಕೆ ಹೊಂದಿಕೊಂಡು ಕೆಲಸ ಮಾಡಬೇಕು ಎಂದರು.

ಬೆಂಗಳೂರಿನ ದಿಗಂತ ಸಂಸ್ಥೆ ಸಂಸ್ಥಾಪಕಿ ಗೀತಾ ಶ್ರೀನಿವಾಸನ್ ಮಾತನಾಡಿ, ಶಿಕ್ಷಕರು ಸಕಾರಾತ್ಮಕ ಮನೋಭಾವ ಬೆಳೆಸಿಕೊಂಡು ಸ್ವಯಂ ಅರಿವು ಹಾಗೂ ಆತ್ಮಗೌರವ ಹೆಚ್ಚಿಸಿಕೊಂಡಾಗ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಸಾಧ್ಯ ಎಂದರು.

ಯಶಸ್ಸು ಕೇವಲ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುವುದಿಲ್ಲ. ನಮ್ಮ ಆಲೋಚನೆ, ಮನೋಭಾವ ಮತ್ತು ನಡವಳಿಕೆಗಳು ಜೀವನದ ದಿಕ್ಕನ್ನು ನಿರ್ಧರಿಸುತ್ತವೆ. ಇತರರ ನಕಾರಾತ್ಮಕ ವರ್ತನೆ, ಪರಿಸರ ಹಾಗೂ ಹಿಂದಿನ ಅನುಭವಗಳು ನಮ್ಮ ಮೇಲೆ ಪ್ರಭಾವ ಬೀರಬಹುದು. ಶಿಕ್ಷಕರು ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯವ ಬೆಳೆಸಿಕೊಳ್ಳಬಹುದು ಎಂದರು.

ಶಿಕ್ಷಕರಿಂದ ನೃತ್ಯ, ಏಕಪಾತ್ರಾಭಿನಯ, ಗೀತ ಗಾಯನ, ವೇಷಭೂಷಣ ಸ್ಪರ್ಧೆ, ಫ್ಯಾಶನ್ ಶೋ, ನಾಟಕ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ವಿವಿಧ ಕಲಾ ಪ್ರದರ್ಶನಗಳ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿದರು.

ಕಾರ್ಯಕ್ರಮದಲ್ಲಿ ಡಾ.ಎಸ್.ಪ್ರಭಾವತಿ ನಂಜಯ್ಯ ಉತ್ತಮ ಅಧ್ಯಾಪಕಿ ಪ್ರಶಸ್ತಿಯನ್ನು ಹುಣಸೂರಿನ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಧ್ಯಾಪಕಿ ಡಾ.ಪಿ.ಎಚ್. ಸರ್ತಾಜ್ ಅವರಿಗೆ ಪ್ರದಾನ ಮಾಡಲಾಯಿತು. ವಿವಿಧ ಕ್ರೀಡಾ ಸ್ಪರ್ಧೆಗಳ ವಿಜೇತ ಶಿಕ್ಷಕರು ಹಾಗೂ ಸಿಬ್ಬಂದಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾರತೀ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಬಿಇಟಿ ಹನುಮಂತನಗರ ಕ್ಯಾಂಪಸ್ ಕಾರ್ಯದರ್ಶಿ ಜಿ.ಡಿ.ಹಳ್ಳಿ ಸಿದ್ದೇಗೌಡ, ಟ್ರಸ್ಟಿ ಕಾರ್ಕಹಳ್ಳಿ ಬಸವೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.