ತಾಲೂಕಿನ ಭಾರಂಗಿ ಹೋಬಳಿಯ ಮುಪ್ಪಾನೆ ಲಾಂಚ್‌ನಲ್ಲಿ ರಂದ್ರವಾಗಿದ್ದರಿಂದ ಲಾಂಚ್ ಸೇವೆ ಸ್ಥಗಿತಗೊಂಡು ೨೨ ದಿನವಾಗಿದ್ದರೂ, ತಾಲೂಕು ಆಡಳಿತ ಅದನ್ನು ದುರಸ್ತಿ ಮಾಡಲಾಗಲಿ ಅಥವಾ ಓಡಾಟಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿತ್ತು. ಅಧಿಕಾರಿಗಳು ಬಂದು ಲಾಂಚ್ ತಳದಲ್ಲಿ ರಂದ್ರವಾಗಿರುವುದನ್ನು ನೋಡಿ ಫೋಟೋ ಹೊಡೆದುಕೊಂಡು ಹೋಗಿದ್ದು ಬಿಟ್ಟರೆ ದುರಸ್ತಿಗೆ ಕ್ರಮ ತೆಗೆದುಕೊಂಡಿರಲಿಲ್ಲ.

ಕನ್ನಡಪ್ರಭ ವಾರ್ತೆ ಸಾಗರ

ತಾಲೂಕಿನ ಭಾರಂಗಿ ಹೋಬಳಿಯ ಮುಪ್ಪಾನೆ ಲಾಂಚ್‌ನಲ್ಲಿ ರಂದ್ರವಾಗಿದ್ದರಿಂದ ಲಾಂಚ್ ಸೇವೆ ಸ್ಥಗಿತಗೊಂಡು ೨೨ ದಿನವಾಗಿದ್ದರೂ, ತಾಲೂಕು ಆಡಳಿತ ಅದನ್ನು ದುರಸ್ತಿ ಮಾಡಲಾಗಲಿ ಅಥವಾ ಓಡಾಟಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿತ್ತು. ಅಧಿಕಾರಿಗಳು ಬಂದು ಲಾಂಚ್ ತಳದಲ್ಲಿ ರಂದ್ರವಾಗಿರುವುದನ್ನು ನೋಡಿ ಫೋಟೋ ಹೊಡೆದುಕೊಂಡು ಹೋಗಿದ್ದು ಬಿಟ್ಟರೆ ದುರಸ್ತಿಗೆ ಕ್ರಮ ತೆಗೆದುಕೊಂಡಿರಲಿಲ್ಲ.

ಲಾಂಚ್ ಸೇವೆ ಸ್ಥಗಿತಗೊಂಡಿದ್ದರಿಂದ ಕರೂರು, ಭಾರಂಗಿ ಹೋಬಳಿ ನಡುವಿನ ಸಂಪರ್ಕ ಕಡಿತಗೊಂಡಿತ್ತು. ೩೮ಕಿ.ಮೀನೊಳಗೆ ಸಾಗಬೇಕಾಗಿದ್ದ ದಾರಿ ೭೮ ಕಿ.ಮೀ. ಕ್ರಮಿಸುವ ಸ್ಥಿತಿ ನಿರ್ಮಾಣವಾಗಿತ್ತು. ಈ ಕುರಿತು ಗ್ರಾಮಸ್ಥರು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಚ್.ಹಾಲಪ್ಪನವರ ಗಮನಕ್ಕೆ ತಂದಿದ್ದರು. ತಡವಾಗಿ ವಿಷಯ ತಿಳಿದರೂ, ತಕ್ಷಣ ಗ್ರಾಮಸ್ಥರ ತೊಂದರೆಗೆ ಸ್ಪಂದಿಸಿದ ಹಾಲಪ್ಪ, ಒಳನಾಡು ಬಂದರು ಇಲಾಖೆ ಅಧಿಕಾರಿಗಳ ಜೊತೆಗಿನ ತಮ್ಮ ವೈಯಕ್ತಿಕ ಸ್ನೇಹವನ್ನು ಬಳಸಿಕೊಂಡು ಕಳೆದ ಎರಡು ದಿನಗಳಿಂದ ನಿರಂತರ ಸಂಪರ್ಕದಲ್ಲಿದ್ದು, ಹಾಳಾಗಿರುವ ಲಾಂಚ್ ದುರಸ್ತಿಯಾಗುವವರೆಗೆ ಪರ್ಯಾಯ ವ್ಯವಸ್ಥೆಗೆ ಒತ್ತಾಯಿಸಿದ್ದರು.

ಈ ಹಿನ್ನೆಲೆಯಲ್ಲಿ ಒಳನಾಡು ಬಂದರು ಇಲಾಖೆ ಅಧಿಕಾರಿಗಳು ಸಿಗಂದೂರು ಸೇತುವೆ ನಿರ್ಮಾಣದ ನಂತರ ಕಳಸವಳ್ಳಿ ದಡದಲ್ಲಿ ನಿಂತಿದ್ದ ದೊಡ್ಡ ಲಾಂಚನ್ನು ಮುಪ್ಪಾನೆ ದಡಕ್ಕೆ ತಂದು ಕಡವು ಸೇವೆ ಕಲ್ಪಿಸುವ ಮೂಲಕ ಮತ್ತೆ ಎರಡೂ ಹೋಬಳಿ ನಡುವಿನ ಸಂಪರ್ಕಕ್ಕೆ ಅನುವು ಮಾಡಿಕೊಟ್ಟರು.

ಹಾಲಪ್ಪ ಭೇಟಿ: ಮುಪ್ಪಾನೆ ಲಾಂಚ್ ಸ್ಥಳಕ್ಕೆ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಚ್.ಹಾಲಪ್ಪ ಭೇಟಿ ನೀಡಿ, ಈ ಪ್ರದೇಶವು ಮುಳುಗಡೆಯಾಗಿ ೬೫ ವರ್ಷವಾಯಿತು. ಈ ಮಾರ್ಗ ಕರೂರು ಭಾರಂಗಿ ಹೋಬಳಿ ನಡುವೆ ಸಂಪರ್ಕ ಬೆಸೆಯುವಲ್ಲಿ ಪ್ರಮುಖಪಾತ್ರ ವಹಿಸಿದೆ. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಸ್ಥಳೀಯ ಗ್ರಾಮಸ್ಥರ ಮನವಿ ಮೇರೆಗೆ ಮುಪ್ಪಾನೆ ಲಾಂಚ್ ಪ್ರಾರಂಭಿಸಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಿ ಕೊಡಲಾಗಿತ್ತು. ಕಳೆದ ೨೨ ದಿನಗಳಿಂದ ಲಾಂಚ್ ನಿಂತು ಎರಡೂ ಹೋಬಳಿ ನಡುವೆ ಸಂಪರ್ಕ ತಪ್ಪಿ ಹೋಗಿತ್ತು. ಗ್ರಾಮಸ್ಥರು ಇದನ್ನು ನನ್ನ ಗಮನಕ್ಕೆ ತಂದಿದ್ದರು. ತಕ್ಷಣ ಒಳನಾಡು ಬಂದರು ಇಲಾಖೆ ಜೊತೆ ಸಂಪರ್ಕ ಸಾಧಿಸಿ ಸಿಗಂದೂರಿನಲ್ಲಿ ನಿಂತಿದ್ದ ಲಾಂಚನ್ನು ಇಲ್ಲಿಗೆ ಬಿಡಲು ಅಧಿಕಾರಿಗಳ ಜೊತೆ ನಡೆಸಿದ ಚರ್ಚೆಗೆ ಫಲ ಸಿಕ್ಕಿದೆ. ಇದೀಗ ಲಾಂಚ್ ಸೇವೆ ಮತ್ತೆ ಪ್ರಾರಂಭವಾಗಿದ್ದು, ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿದ್ದಾರೆ ಎಂದರು.

ಗ್ರಾಮಸ್ಥರ ಕೃತಜ್ಞತೆ: ಕಳೆದ ೨೨ ದಿನಗಳಿಂದ ಮುಪ್ಪಾನೆ ಲಾಂಚ್ ನಿಂತುಹೋಗಿದ್ದರಿಂದ ಜೋಗ ಜಲಪಾತ, ಕಾರ್ಗಲ್ ಭಾಗದಿಂದ ಸಿಗಂದೂರು, ತುಮರಿ ಹೋಗುವವರಿಗೆ ತೊಂದರೆ ಆಗುತ್ತಿತ್ತು. ಇದನ್ನು ಹಾಲಪ್ಪನವರಿಗೆ ತಿಳಿಸಿ ಅಗತ್ಯ ಸಹಾಯ ಮಾಡಲು ಮನವಿ ಮಾಡಿಕೊಳ್ಳಲಾಗಿತ್ತು. ಅವರು ಕಡವು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ದೊಡ್ಡ ಲಾಂಚ್ ಸೇವೆ ಒದಗಿಸಲು ಪ್ರಮುಖಪಾತ್ರ ವಹಿಸಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಸಿ.ಲಕ್ಷ್ಮೀನಾರಾಯಣ ತಿಳಿಸಿದರು.

ದೇವೇಂದ್ರಪ್ಪ ಯಲಕುಂದ್ಲಿ, ರಾಜೇಶ್ ಯಲಕೋಡು, ದಿನೇಶ್ ಆರೋಡಿ, ಮಂಜಯ್ಯ ಜೈನ್, ಓಂಕಾರ್ ಜೈನ್, ಪ್ರಸನ್ನ ಇಡುವಾಣಿ, ನಾಗರಾಜ್ ವಾಟೆಮಕ್ಕಿ ಇನ್ನಿತರರು ಹಾಜರಿದ್ದರು.