ಚಿಕ್ಕಮಗಳೂರುಜಿಲ್ಲೆಯಲ್ಲಿ ಈ ಹಿಂದೆ ಗುತ್ತಿಗೆ ಕಾಮಗಾರಿಗಳು ಕೇವಲ ಒಬ್ಬ ವ್ಯಕ್ತಿ ಪಾಲಾಗುತ್ತಿದ್ದವು. ಇದೀಗ ಎಲ್ಲರಿಗೂ ಸಮಾನವಾಗಿ ಗುತ್ತಿಗೆ ಕಾಮಗಾರಿ ಲಭಿಸುತ್ತಿವೆ ಎಂದು ಶಾಸಕ ಎಚ್. ಡಿ.ತಮ್ಮಯ್ಯ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಜಿಲ್ಲೆಯಲ್ಲಿ ಈ ಹಿಂದೆ ಗುತ್ತಿಗೆ ಕಾಮಗಾರಿಗಳು ಕೇವಲ ಒಬ್ಬ ವ್ಯಕ್ತಿ ಪಾಲಾಗುತ್ತಿದ್ದವು. ಇದೀಗ ಎಲ್ಲರಿಗೂ ಸಮಾನವಾಗಿ ಗುತ್ತಿಗೆ ಕಾಮಗಾರಿ ಲಭಿಸುತ್ತಿವೆ ಎಂದು ಶಾಸಕ ಎಚ್. ಡಿ.ತಮ್ಮಯ್ಯ ಹೇಳಿದರು.ಸೋಮವಾರ ನಗರದ ‘ಸೈಕಲ್ ತುಳಿ ಸಮಸ್ಯೆ ತಿಳಿ’ ಕಾರ್ಯಕ್ರಮದ ಮೂಲಕ ವಿವಿಧ ವಾರ್ಡ್‌ನಲ್ಲಿ ಸರ್ಕಾರದಿಂದ ಹಮ್ಮಿ ಕೊಂಡ ಅಭಿವೃದ್ಧಿ ಕಾಮಗಾರಿಗಳ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ನರಿ ದ್ರಾಕ್ಷಿ ಹಣ್ಣು ಸಿಗದೇ ಇದ್ದಾಗ ಹುಳಿ ಎಂದು ಹೇಳಿದಂತೆ, ಎಲ್ಲ ಗುತ್ತಿಗೆಯನ್ನು ಒಬ್ಬರೇ ಮಾಡುತ್ತಿದ್ದರು. ಈಗ ಅವರಿಗೆ ಕೆಲಸ ಸಿಗುತ್ತಿಲ್ಲ. ಹಾಗಾಗಿ ಕೆಲವರ ಮುಖಾಂತರ ಮಾತನಾಡುತ್ತಿದ್ದಾರೆ ಎಂದರು.
6 ರಿಂದ 10 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ₹5 ಕೋಟಿ ವೆಚ್ಚದಲ್ಲಿ ಮೌಲಾನ ಆಜಾದ್ ಸ್ಕೂಲ್ ಕಟ್ಟಡದ ನಿರ್ಮಾಣದ ಕಾಮಗಾರಿ ವೀಕ್ಷಣೆ ಮಾಡಲಾಗಿದೆ. ಗುಣಮಟ್ಟ ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.ವಾಜಪೇಯಿ ಬಡಾವಣೆ ಒಂದಿಷ್ಟು ಜನ ಸಮಸ್ಯೆಯನ್ನ ಗಮನಕ್ಕೆ ತಂದಿದ್ದಾರೆ. ಈ ಹಿಂದೆ ವಾಜಪೇಯಿ ಲೇಔಟ್ ಕಟ್ಟಲು ಬಹಳಷ್ಟು ಸಮಯವನ್ನು ತೆಗೆದುಕೊಂಡರು. ನಿವೇಶನಗಳನ್ನು ಹಂಚಿಕೆ ಮಾಡುವ ಮೊದಲು ಕುಡಿಯುವ ನೀರು ಹಾಗೂ ಇತರೆ ಮೂಲ ಸೌಲಭ್ಯಗಳು ಮಾಡಿಕೊಡಬೇಕಾಗಿತ್ತು. ಆದರೆ, ಆ ಕೆಲಸ ಆಗಿಲ್ಲ ಎಂದರು.ಶಾಸಕನಾದ ಬಳಿಕ ತಾತ್ಕಾಲಿಕವಾಗಿ ಅಲ್ಲಿನ ಮನೆಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಅದು ಶಾಶ್ವತ ಅಲ್ಲ. ಅವರಿಗೆ ಶಾಶ್ವತವಾಗಿ ವಿದ್ಯುತ್ ಕೊಡುವ ವ್ಯವಸ್ಥೆ ಆಗಬೇಕು. ಜಿಲ್ಲೆಯ ಉಸ್ತುವಾರಿ ಸಚಿವರ ಸಹಕಾರದಿಂದ ಈಗಾಗಲೇ ಪವರ್ ಸ್ಟೇಷನ್ ಮಂಜೂರಾಗಿದೆ. ಒಂದು ವಾರದೊಳಗೆ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಯಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಚರಂಡಿ, ರಸ್ತೆ ನಿರ್ಮಾಣ ಮಾತ್ರ ಅಭಿವೃದ್ಧಿ ಅಲ್ಲ. ಹಾಗಾಗಿ, ಅಂಗನವಾಡಿ, ಪಡಿತರ ಚೀಟಿ, ವಿದ್ಯುತ್, ಸಣ್ಣ ನೀರಾವರಿ ಇಲಾಖೆ ಸಮಸ್ಯೆ ಇರುತ್ತದೆ. ಅಧಿಕಾರಿಗಳ ಜೊತೆ ಬಂದಾಗ ಎಲ್ಲಾ ಸಮಸ್ಯೆಗಳನ್ನು ನೇರವಾಗಿ ಇಲ್ಲೇ ಅಧಿಕಾರಿಗಳ ಎದುರೇ ಬಗೆಹರಿಸುವ ಪ್ರಯತ್ನಪ್ರಾಮಾಣಿಕವಾಗಿ ಮಾಡಲಾಗುತ್ತದೆ ಎಂದರು.ಪಾರ್ಕ್‌ಗಳ ಅಭಿವೃದ್ಧಿಗೆ ₹25 ಲಕ್ಷ ನೀಡಲಾಗಿದೆ. ಎರಡು ತಿಂಗಳ ಒಳಗೆ ಈ ಎಲ್ಲ ಕಾಮಗಾರಿ ಮುಗಿಸಿ ಲೋಕಾರ್ಪಣೆ ಮಾಡಲಾಗುವುದು ಎಂದರು.
ಈ ವೇಳೆ ಸಿಡಿಎ ಅಧ್ಯಕ್ಷ ಮಂಜೇಗೌಡ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವಾನಂದ ಸ್ವಾಮಿ, ನಗರ ಸಭೆ ಆಯುಕ್ತ ಬಸವರಾಜ್ ಮೊದಲಾದವರಿದ್ದರು.-- ಬಾಕ್ಸ್ ---
ಸ್ವಚ್ಛತೆ ಇಲ್ಲವಾದರೆ ದುಪಟ್ಟು ಟ್ಯಾಕ್ಸ್ಖಾಲಿ ನಿವೇಶನದಲ್ಲಿ ಇರುವ ಗಿಡಗಂಟೆಗಳನ್ನು ತೆಗೆದು ಸ್ವಚ್ಛಗೊಳಿಸಬೇಕು. ಇಲ್ಲದೆ ಹೋದರೆ ನಗರಸಭೆಯಿಂದ ಸ್ವಚ್ಛಗೊಳಿಸಿ ನಿವೇಶನದ ಮಾಲೀಕರಿಂದ ದುಪಟ್ಟು ಟ್ಯಾಕ್ಸ್ ವಸೂಲಿ ಮಾಡಬೇಕೆಂದು ನಗರಸಭೆ ಅಧಿಕಾರಿಗಳಿಗೆ ಶಾಸಕ ಎಚ್.ಡಿ.ತಮ್ಮಯ್ಯ ಸೂಚಿಸಿದರು.
-- ಕೋಟ್ --ಚುನಾವಣಾ ಆಯೋಗ ಎಸ್‌ಐಆರ್ ಮಾಡುತ್ತಿದ್ದು, ಯಾವುದೇ ನಿರಾಪರಾಧಿಗೆ ಶಿಕ್ಷೆ ಆಗಬಾರದು. ಕಾನೂನು ಬದ್ಧವಾಗಿ ಕ್ರಮವಹಿಸಬೇಕು. ಮತದಾರರು ಎಸ್‌ಐಆರ್‌ಗೆ ಕೈಜೋಡಿಸಬೇಕು.
-ಎಚ್.ಡಿ.ತಮ್ಮಯ್ಯ, ಶಾಸಕರು, ಚಿಕ್ಕಮಗಳೂರು