ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಪಟ್ಟಣದ ಹಳೇ ಆಸ್ಪತ್ರೆಯ ಬಳಿಯ ಕಿಷ್ಕಿಂಧೆ ಗ್ರಂಥಾಲಯ ಸ್ಥಳಾಂತರವಾಗಬೇಕು ಎಂದು ಕಳದೆಂಟು ತಿಂಗಳಿನಿಂದ ಕನ್ನಡಪ್ರಭ, ಕಸಾಪ ಪದಾಧಿಕಾರಿಗಳ ಕಾಳಜಿಯ ಫಲವಾಗಿ ಗ್ರಂಥಾಲಯ ಶಿಪ್ಟ್ ಆಗುವ ಕಾಲ ಸಮೀಪವಾಗುತ್ತಿದೆ. ಕಿಷ್ಕಿಂಧೆಯಲ್ಲಿರುವ ಗ್ರಂಥಾಲಯ ಸ್ಥಳಾಂತರವಾಗಬೇಕು ಎಂದು ಕನ್ನಡಪ್ರಭ ಪತ್ರಿಕೆ ನಿರಂತರ ಸುದ್ದಿಗಳ ಜೊತೆಗೆ ಕಸಾಪ ಜಿಲ್ಲಾಧ್ಯಕ್ಷ ಎಂ.ಶೈಲಕುಮಾರ್ (ಶೈಲೇಶ್), ಪುರಸಭೆ ಸದಸ್ಯ ಎನ್.ಕುಮಾರ್ ಶಾಸಕರ ಗಮನಕ್ಕೆ ತಂದು ಗ್ರಂಥಾಲಯಕ್ಕೆ ಕೊಠಡಿಗಾಗಿ ತಿಂಗಳಾನುಗಟ್ಟಲೇ ಹುಡುಕಾಟ ನಡೆಸಿದ್ದರು.ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಕೂಡ ಹಳೆಯ ಬಿಇಒ ಕಚೇರಿಯ ಒಂದು ಕೊಠಡಿ ನೀಡುವಂತೆ ಬಿಇಒಗೆ ಸೂಚನೆ ನೀಡಿದ್ದರು. ಕಳೆದ ತಿಂಗಳ ಫೆ.8 ರಂದು ಒಲ್ಲದ ಮನಸ್ಸಿನಿಂದಲೇ ಬಿಇಒ ರಾಜಶೇಖರ ಸೂಚನೆ ಮೇರೆಗೆ ಬಿಆರ್‌ಪಿ ಗ್ರಂಥಾಲಯ ಪಾಲಕರಿಗೆ ಕೊಠಡಿಯ ಕೀ ಹಸ್ತಾಂತರಿಸಿದರು. ಇದೀಗ ಹಳೆಯ ಬಿಇಒ ಕಚೇರಿ (ಆರಂಭವಾಗಲಿರುವ ಗ್ರಂಥಾಲಯ) ಆವರಣದ ಮಲ, ಮೂತ್ರ ವಿಸರ್ಜನೆಯ ಕೇಂದ್ರವಾಗಿ ಮಾರ್ಪಾಟಿತ್ತು. ಆವರಣದಲ್ಲಿ ಮಲ, ಮೂತ್ರ ವಿಸರ್ಜನೆಯಿಂದ ಗಬ್ಬೆದ್ದು ನಾರುತ್ತಿದೆ. ಇದನ್ನು ಸ್ವಚ್ಛ ಮಾಡಿಸಲು ಪುರಸಭೆ ಸದಸ್ಯ ಎನ್.ಕುಮಾರ್ ಕಾಳಜಿ ವಹಿಸಿ ಪುರಸಭೆ ವತಿಯಿಂದ ಜೆಸಿಬಿ ಯಂತ್ರದ ಮೂಲಕ ಕ್ಲೀನ್ ಮಾಡಿಸಿದ್ದಾರೆ.ಗ್ರಂಥಾಲಯ ಆರಂಭವಾಗಿರುವ ಕೊಠಡಿಗೆ ವಿದ್ಯುತ್ ಸಂಪರ್ಕ, ಪೋನ್ ಸಂಪರ್ಕ ಕೊಡಿಸಲು ಗ್ರಂಥಾಲಯ ಇಲಾಖೆಯ ಸಹಾಯಕ ನಿರ್ದೇಶಕ ಶಿವಸ್ವಾಮಿ ಮುಂದಾಗಿದ್ದಾರೆ. ಸಹಾಯಕ ನಿರ್ದೇಶಕ ಶಿವಸ್ವಾಮಿ ಕನ್ನಡಪ್ರಭದೊಂದಿಗೆ ಮಾತನಾಡಿ ಸ್ಥಳಾಂತರವಾಗಲಿರುವ ಗ್ರಂಥಾಲಯ ಮೈಸೂರು, ಊಟಿ ರಸ್ತೆಯ ಬಳಿಗೆ ಬರಲಿದ್ದು ಸದ್ಯದಲ್ಲೇ ಶಾಸಕರನ್ನು ಆಹ್ವಾನಿಸಿ ಉದ್ಘಾಟನೆ ಮಾಡಿಸುವುದಾಗಿ ಹೇಳಿದ್ದಾರೆ.ಕನ್ನಡಪ್ರಭದ ನಿರಂತರ ವರದಿಗೆ ಸ್ಪಂದಿಸಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಕಾಳಜಿ ವಹಿಸಿ ಶಿಕ್ಷಣ ಇಲಾಖೆಗೆ ಸೇರಿದ ಕೊಠಡಿ ಕೊಡಿಸಿದ್ದಾರೆ. ಇದೀಗ ಸ್ವಚ್ಛತಾ ಕೆಲಸ ಮುಗಿದಿದೆ. ಶಾಸಕರು ಸುತ್ತುಗೋಡೆ ಹಾಕಿಸಿದರೆ ಗಾಳಿ, ಬೆಳಕು ಇಲ್ಲದೆ ಓದುತ್ತಿದ್ದ ಪಟ್ಟಣದ ವಾಚಕರಿಗೆ ಅನುಕೂಲವಾಗಲಿದೆ.ಎಂ.ಶೈಲಕುಮಾರ್, ಕಸಾಪ ಜಿಲ್ಲಾಧ್ಯಕ್ಷ