ಸಾರಾಂಶ
ಕನ್ನಡಪ್ರಭ ವಾರ್ತೆ ಭಾಲ್ಕಿ
ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರದ್ದು ಬಸವಮಯ ಬದುಕು ಆಗಿದೆ. ಅವರು ತಮ್ಮ ಇಡೀ ಬದುಕು ಬಸವತತ್ವ ಪ್ರಚಾರ ಪ್ರಸಾರಕ್ಕೆ ಮುಡಿಪಾಗಿಟಿದ್ದಾರೆ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್ ಹೇಳಿದರು.ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಅಮೃತ ಮಹೋತ್ಸವ ಸ್ವಾಗತ ಸಮಿತಿಯಿಂದ ಸೋಮವಾರ ಆಯೋಜಿಸಿದ್ದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಉದ್ಘಾಟಿಸಿ ಮಾತನಾಡಿ, ಹಿರೇಮಠ ಸಂಸ್ಥಾನ ಪ್ರಾಚೀನ ಮಠವಾಗಿದ್ದು, ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಪರಂಪರೆ ಹೊಂದಿದ್ದು, ಕಲ್ಯಾಣ ಕರ್ನಾಟಕ ಭಾಗದ ಭಕ್ತರ ಶ್ರದ್ಧಾ, ಭಕ್ತಿಯ ಕೇಂದ್ರವಾಗಿ ಗುರುತಿಸಿಕೊಂಡಿದೆ. ಅಂತಹ ಮಠದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ವಿಶ್ವಗುರು ಬಸವಣ್ಣನವರು ಬೋಧಿಸಿದ ಕಾಯಕ-ದಾಸೋಹ ತತ್ವವನ್ನು ನಾಡಿನಾದ್ಯಂತ ಬೆಳಗಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ಬಡತನದ ಪರಿವಾರದಿಂದ ವಿದ್ಯಾಭ್ಯಾಸಕ್ಕಾಗಿ ಮಠ ಪ್ರವೇಶಿಸಿದ ಇವರು ಪೀಠಾಧಿಪತಿಯಾಗಿ ಹಿರೇಮಠ ಸಂಸ್ಥಾನವನ್ನು ರಾಜ್ಯದಲ್ಲಿಯೇ ಮಾದರಿ ಮಠವಾಗಿ ಬೆಳೆಸಿದ್ದು ಮಾದರಿ ಎನಿಸಿದೆ. ಬಡವರು, ನಿರಾಶ್ರಿತರು, ದುರ್ಬಲ ವರ್ಗದವರಿಗೆ ಅನ್ನ, ಅಕ್ಷರ, ಆಶ್ರಯ ಕಲ್ಪಿಸಿ ಸಮಾಜದಲ್ಲಿ ಬದಲಾವಣೆ ತರುವ ಕೆಲಸ ಮಾಡಿದ್ದಾರೆ ಎಂದರು.ಸಾನ್ನಿಧ್ಯ ವಹಿಸಿದ ಸುತ್ತೂರು ಜಗದ್ಗುರು ವೀರಸಿಂಹಾಸನ ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಮೈಸೂರು ಭಾಗದಲ್ಲಿ ಕನ್ನಡದ ವಿಷಯ ಬಂದಾಗಲೆಲ್ಲ ಶತಾಯಿಷಿ ಡಾ.ಚನ್ನಬಸವ ಪಟ್ಟದ್ದೇವರು ಅವರನ್ನು ನೆನಪು ಮಾಡಿಕೊಳ್ಳಲಾಗುತ್ತದೆ. ಈ ಭಾಗದಲ್ಲಿ ನಿಜಾಂನ ಆಳ್ವಿಕೆಯಲ್ಲಿ ಪೂಜ್ಯರು ಹೊರಗಡೆ ಉರ್ದು ಬೋರ್ಡ್ ಅಳವಡಿಸಿ ಒಳಗಡೆ ಕನ್ನಡ ಕಲಿಸಿ ಕನ್ನಡಾಭಿಮಾನ ಮೆರೆದಿದ್ದಾರೆ. 20ನೆಯ ಶತಮಾನದಲ್ಲಿ ಅನುಭವ ಮಂಟಪ ಪುನರ್‌ಸ್ಥಾಪಿಸಿ ಬಸವಣ್ಣನವರ ವಿಚಾರಧಾರೆ ಜಗದಗಲ ತಲುಪಿಸುವ ಕಾರ್ಯ ಮಾಡಿದ್ದಾರೆ.
ರಾಜ್ಯ ಅಲ್ಲದೇ ನೆರೆಯ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲಿ ವಿಶ್ವಗುರು ಬಸವಣ್ಣನವರ ಸಂದೇಶ ತಲುಪಿಸಿ ಆ ಭಾಗದ ಭಕ್ತರನ್ನು ಉದ್ಧರಿಸುತ್ತಿದ್ದಾರೆ ಎಂದರು.ಸುದೈವಿ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ಕಲ್ಪಿಸಿ ನಾಡಿನ ಅಮೂಲ್ಯ ಆಸ್ತಿಯನ್ನಾಗಿ ಮಾಡುತ್ತಿರುವುದು ಮಾದರಿ ತರಿಸಿದೆ. ಅವರ ಸೇವೆ ಹೀಗೆ ಮುಂದುವರೆಯಲಿ ವಿಶ್ವಗುರು ಬಸವಣ್ಣನವರ ಆಶೀರ್ವಾದ ಪೂಜ್ಯರ ಮೇಲೆ ಸದಾ ಇರಲಿ ಎಂದು ಹಾರೈಸಿದರು.
ಡಾ.ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಸಂಸದ ಸಾಗರ ಖಂಡ್ರೆ, ಬಾಬು ವಾಲಿ, ಬಸವರಾಜ ಬುಳ್ಳಾ, ಚನ್ನಬಸವ ಬಳತೆ, ಬಸವರಾಜ ಧನ್ನೂರು ಇದ್ದರು.