ಸಾರಾಂಶ
ಅರಂತೋಡು ಗ್ರಾಮದ ಬೆದ್ರುಪಣೆಯ ಮೇಲಡ್ತಲೆ ಕುಟುಂಬದ ದಿ. ನಾಗಪ್ಪ ಎಂ.ಎ.-ಜಾನಕಿ ದಂಪತಿಯ ಪುತ್ರಿ ಸುಶ್ಮಿತಾ ಇಂಡಿಯನ್ ಸ್ಟಾಫ್ ಸೆಲೆಕ್ಷನ್ ಕಮಿಷನ್ ನಡೆಸಿದ ಎಸ್‌ಎಸ್‌ಸಿಜಿಡಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಭಾರತೀಯ ಗಡಿ ಭದ್ರತಾ ಪಡೆಗೆ ಆಯ್ಕೆಯಾಗಿದ್ದಾರೆ.
ದುರ್ಗಾಕುಮಾರ್ ನಾಯರ್‌ಕೆರೆ
ಸುಳ್ಯ: ಸುಳ್ಯ ತಾಲೂಕಿನ ಅತ್ಯಂತ ಗ್ರಾಮೀಣ ಪ್ರದೇಶದ ಹೆಣ್ಣು ಮಗಳೊಬ್ಬಳು ದೇಶದ ಗಡಿ ಕಾಯುವ ಸೇವೆಗೆ ಹೊರಟು ನಿಂತಿದ್ದಾರೆ. ಇಂಡಿಯನ್ ಸ್ಟಾಫ್ ಸೆಲೆಕ್ಷನ್ ಕಮಿಷನ್ ನಡೆಸಿದ ಎಸ್‌ಎಸ್‌ಸಿಜಿಡಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಸುಶ್ಮಿತಾ ತನ್ನ ಬಾಲ್ಯದ ಸಂಕಲ್ಪ ಶಕ್ತಿ ಸಾಕಾರಗೊಳಿಸಿದ ಸಾರ್ಥಕತೆಯಿಂದ ಎಲ್ಲರ ಅಭಿಮಾನಕ್ಕೆ ಪಾತ್ರರಾಗಿದ್ದಾರೆ.ಈ ಮಹೋನ್ನತ ಜವಾಬ್ದಾರಿಯೆಡೆಗೆ ಸುಶ್ಮಿತಾ ಕ್ರಮಿಸಿದ ಹಾದಿ ಸಮಾಜಕ್ಕೊಂದು ಪಾಠವಾಗಿದೆ. ಅರಂತೋಡು ಗ್ರಾಮದ ಬೆದ್ರುಪಣೆಯ ಮೇಲಡ್ತಲೆ ಕುಟುಂಬದ ದಿ. ನಾಗಪ್ಪ ಎಂ.ಎ.-ಜಾನಕಿ ದಂಪತಿಯ ಪುತ್ರಿ ಸುಶ್ಮಿತಾ.ಬೆದ್ರುಪಣೆ ಎಂಬ ಈ ಊರು ದಟ್ಟ ಅರಣ್ಯದ ಒತ್ತಿಗಿದೆ. ಹಗಲು ಹೊತ್ತಿನಲ್ಲೂ ಓಡಾಡಲು ಭಯ ಪಡುವಷ್ಟು ಕಾಡಿನ ಪ್ರದೇಶ. ಇಲ್ಲಿನ ಬಡ ಕುಟುಂಬದ ಹೆಣ್ಣು ಮಗಳು ಸುಶ್ಮಿತಾ. ಇದ್ದ ೬೦ ಸೆಂಟ್ಸ್ ಜಾಗದಲ್ಲಿದ್ದ ಅಡಕೆ ತೋಟವನ್ನೂ ಹಲವು ವರ್ಷದಿಂದ ಹಳದಿ ರೋಗ ಆಪೋಶನ ತೆಗೆದುಕೊಂಡಿತ್ತು. ಪರಿಣಾಮ ಏಳೆಂಟು ವರ್ಷಗಳಿಂದ ಕೃಷಿ ಆದಾಯವಿಲ್ಲ. ಅಪ್ಪ ಅಮ್ಮನ ದಿನದ ದುಡಿಮೆಯೇ ಬದುಕಿಗೆ ಆಧಾರವಾಗಿತ್ತು. ಮನೆಗೆ ಮೊಬೈಲ್ ನೆಟ್ ವರ್ಕ್ ಕೂಡಾ ಇಲ್ಲ. ವನ್ಯ ಜೀವಿಗಳ ಹಾವಳಿ ನಿತ್ಯ ನಿರಂತರ. ದೊಡ್ಡ ಮಳೆ ಬಂದರೆ ನೆರೆ ನೀರು ಮನೆ ಪಕ್ಕಕ್ಕೇ ಬರುತ್ತದೆ. ಇಲ್ಲಿಗಿರುವ ರಸ್ತೆ ಸ್ಥಿತಿಯೂ ನೆಟ್ಟಗಿಲ್ಲ. ಹೀಗೆ ಸವಾಲುಗಳ ಮೇಲೆ ಸವಾಲು ಎದುರಿಸಿಯೇ ಬೆಳೆದು ಬಂದಾಕೆ ಸುಶ್ಮಿತಾ.ತನ್ನ ಪ್ರಾಥಮಿಕ ಶಿಕ್ಷಣವನ್ನು ಅಡ್ತಲೆ ಸರ್ಕಾರಿ ಶಾಲೆಯಲ್ಲಿ ಪೂರೈಸಿದರು. ಅರಂತೋಡು ನೆಹರೂ ಸ್ಮಾರಕ ಕಾಲೇಜಿಗೆ ಸೇರಿ ಪ್ರೌಢ ಮತ್ತು ಪಿಯು ಶಿಕ್ಷಣ ಪಡೆದರು. ಪದವಿ ಶಿಕ್ಷಣವನ್ನು ಸುಳ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೂರೈಸಿದರು. ಶಾಲಾ ಅವಧಿಯಲ್ಲಿ ಸುಶ್ಮಿತಾ ಉತ್ತಮ ಅಥ್ಲೀಟ್ ಆಗಿದ್ದರು. ಬಾಲ್ಯದಲ್ಲೇ ಮಿಲಿಟರಿ ಸೇವೆ ಕನಸು ಕಾಡುತ್ತಿತ್ತು. ಮಿಲಿಟರಿ ಸೇವೆ, ತಪ್ಪಿದರೆ ಪೊಲೀಸ್ ಸೇವೆ ಸುಶ್ಮಿತಾ ಗುರಿಯಾಗಿತ್ತು. ಅದಕ್ಕೆಂದೇ ಸಿದ್ಧತೆ ನಡೆಸುತ್ತಿದ್ದರು. ಪಿಯುಸಿಯಲ್ಲಿರುವಾಗಲೇ ದಾಖಲೆ ಸಿದ್ಧಪಡಿಸಲು ಆರಂಭಿಸಿದ್ದರು. ಬೇರೆ ಬೇರೆ ಸ್ಮರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಶುರುವಿಟ್ಟರು.ಪೊಲೀಸ್ ಇಲಾಖೆಯ ಪಿಎಸ್‌ಐ, ಕಾನ್‌ಸ್ಟೇಬಲ್, ಬಿ.ಎಸ್.ಎಫ್., ಅಗ್ನಿ ಪಥ್, ಅರಣ್ಯ ರಕ್ಷಕ ಸೇರಿದಂತೆ ಹಲವು ಪರೀಕ್ಷೆಗಳನ್ನು ಸುಶ್ಮಿತಾ ಬರೆದಿದ್ದರು.ಈ ಮಧ್ಯೆ ಐದು ವರ್ಷಗಳ ಹಿಂದೆ ದಿಢೀರ್ ಆಗಿ ಅಪ್ಪನ ಅಗಲಿಕೆಯಾಯಿತು. ಇಡೀ ಕುಟುಂಬದ ಜವಾಬ್ದಾರಿ ಸುಶ್ಮಿತಾ ಮೇಲೆ ಬಂತು. ಕೋಚಿಂಗ್ ಕ್ಲಾಸ್ ಗೆ ಹೋಗುತ್ತಿದ್ದ ಅವರು ಅದನ್ನು ಮೊಟಕುಗೊಳಿಸಿ ಒಂದಷ್ಟು ಸಮಯ ಕೂಲಿ ಕೆಲಸಕ್ಕೆ ಹೋದರು. ಬಳಿಕ ಸುಳ್ಯದತ್ತ ಕೆಲಸಕ್ಕೆ ಹೊರಟು ನಿಂತರು. ಬಲದೇವ್ ಟೈಲ್ಸ್ ಮತ್ತು ಗ್ರಾನೈಟ್ ಸಂಸ್ಥೆಯಲ್ಲಿ ಸೇರಿದರು.ಪ್ರತಿ ದಿನವೂ 50 ಕಿ.ಮೀ. ಪಯಣ. ಬೆಳಗ್ಗಿನ ಜಾವ ಮನೆ ಬಿಟ್ಟರೆ ವಾಪಾಸ್ ಮನೆ ಸೇರುವುದು ರಾತ್ರಿ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಮನೆಯ ಜವಾಬ್ದಾರಿ ವಹಿಸಿಕೊಂಡು ತಾಯಿಯನ್ನು ಸಲಹತೊಡಗಿದರು. ತಂಗಿಗೆ ಶಿಕ್ಷಣ ಕೊಡಿಸಿ ಕೆಲಸ ಸಿಗುವಂತೆಯೂ ನೋಡಿಕೊಂಡರು.
ಭಾರತದ ಸಶಸ್ತ್ರಪಡೆಗಳಲ್ಲಿ ಒಂದಾಗಿರುವ ಗಡಿ ಭದ್ರತಾ ಪಡೆ ( ಬಿಎಸ್‌ಎಫ್ ) ಯತ್ತ ಸುಶ್ಮಿತಾ ಲಕ್ಷ್ಯವಿತ್ತು. ಎಸ್‌ಎಸ್‌ಸಿಜಿಡಿ ಪರೀಕ್ಷೆ ಬರೆದರು. ಪರೀಕ್ಷೆಯ ಪ್ರತಿ ಹಂತಗಳಲ್ಲೂ ತೇರ್ಗಡೆಗೊಂಡು ಇದೀಗ ಬಿ.ಎಸ್.ಎಫ್. ಸೇರುವ ಅವಕಾಶ ಪ್ರಾಪ್ತವಾಗಿದೆ. ಬೆಂಗಳೂರಿನ ಯಲಹಂಕದಲ್ಲಿ ಕರ್ತವ್ಯದ ವರದಿ ಒಪ್ಪಿಸಿ ಬಳಿಕ ಅವರು ಉತ್ತರ ಭಾರತದಲ್ಲಿ ತರಬೇತಿ ಪಡೆಯಲಿದ್ದಾರೆ. ತೆಂಗಿನ ಮರವೇರುತ್ತಾರೆ, ಕಾಳು ಮೆಣಸು ಕೊಯ್ಯುತ್ತಾರೆ... ಬೆದ್ರುಪಣೆಯ ದಿ. ನಾಗಪ್ಪ ಎಂ.ಎ. - ಜಾನಕಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಸುಶ್ಮಿತಾ ಬಾಲ್ಯದಿಂದಲೇ ಹುಡುಗನಂತೆ ಬೆಳೆದವರು. ಹುಡುಗರು ಮಾಡಬಹುದಾದ ಎಲ್ಲ ಕಠಿಣ ಕೆಲಸಗಳನ್ನು ತಾನೂ ಮಾಡಿ ಅಚ್ಚರಿ ಮೂಡಿಸಿದವರು. ಎರಡನೇ ತರಗತಿಯಲ್ಲಿರುವಾಗಲೇ ದಾರಿ ಮಧ್ಯೆ ಕೇವಲ 20 ಫೀಟ್ ದೂರದಲ್ಲಿ ಕಾಡಾನೆ ಕಂಡು ಓಡಿ ತಲೆತಿರುಗಿ ಬಿದ್ದು ಗಾಯಗೊಂಡಿದ್ದರು. ಅದೇ ಕೊನೆ, ಆ ಬಳಿಕ ಹಲವು ಬಾರಿ ದಾರಿ ಮಧ್ಯೆ ಆನೆಗಳು ಕಾಣಸಿಕ್ಕಿದರೂ ಧೃತಿಗೆಟ್ಟಿರಲಿಲ್ಲ. ಕೂಲಿ ಕೆಲಸದ ವೇಳೆ ಪಕ್ಕದವರ ತೋಟದಲ್ಲಿ ಏಣಿ ಹತ್ತಿ ಸುಮಾರು 30 ಮೀಟರ್ ಎತ್ತರದಿಂದ ಕಾಳುಮೆಣಸು ಕೊಯ್ದವರು. ತೆಂಗಿನಕಾಯಿ ಸುಲಿದವರು, ತೆಂಗಿನ ಮರವೇರಲೂ ಕಲಿತವರು, ಸೌದೆ ಒಡೆಯುವ, ಯಂತ್ರದಲ್ಲಿ ಕಾಡು ಕಡಿಯುವ, ಹುಲ್ಲು ಕತ್ತರಿಸುವ ಕೆಲಸ ಮಾಡಿದವರು. ಭಾರತ ಮಾತೆಯೇ ಹುಟ್ಟಿದ್ದಾಳೆ...ತಾಯಿ ಜಾನಕಿಯವರಿಗೆ ಮಗಳೆಂದರೆ ಅಚ್ಚು ಮೆಚ್ಚು. ಪ್ರತಿ ದಿನವೂ ಸುಳ್ಯಕ್ಕೆ ಹೋದ ಮಗಳ ದಾರಿ ಕಾಯುತ್ತಾರೆ. ಆನೆ ಇದೆ ಎಂಬ ಸುದ್ದಿ ಬಂದರಂತೂ ಮನಸು ವಿಲವಿಲ. ಮಗಳನ್ನು ಕರೆ ತರಲು ಯಾರಿಗಾದರೂ ಹೇಳುತ್ತಾರೆ.ತುಂಬ ಖುಷಿಯಾಗ್ತಿದೆ. ನನ್ನ ಹೊಟ್ಟೆಯಲ್ಲಿ ಭಾರತ ಮಾತೆಯೇ ಹುಟ್ಟಿದ್ದಾಳೆ ಎಂಬಂತಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡರು ಜಾನಕಿ.ಅಮ್ಮ ಯಾವತ್ತೂ ನನ್ನ ಕನಸಿಗೆ ಅಡ್ಡಿ ಬಂದವರಲ್ಲ. ಅಪ್ಪನ ಕನಸೂ ಇದೇ ಆಗಿತ್ತು. ಅಪ್ಪ ಇರ್ತಿದ್ರೂ ತುಂಬ ಖುಷಿ ಪಡ್ತಿದ್ರು ಎಂದು ಸುಶ್ಮಿತಾ ಹೇಳಿದರು.