ಸಾರಾಂಶ
ಶರಣು ಸೊಲಗಿ ಮುಂಡರಗಿ
ಮುಂಡರಗಿಯ ಈ ನಾಡಿನಲ್ಲಿ ಕೆಜಿಯಿಂದ ಪಿಜಿವರೆಗೆ ಶಾಲಾ-ಕಾಲೇಜು ತೆರೆಯುವ ಮೂಲಕ ಇಲ್ಲಿನ ಅನ್ನದಾನೀಶ್ವರ ಮಠ ಶಿಕ್ಷಣ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿ ಮಾಡಿದೆ. ಸಾಹಿತ್ಯ ಕ್ಷೇತ್ರದಲ್ಲಿ ಜ. ನಾಡೋಜ ಅನ್ನದಾನೀಶ್ವರ ಮಹಾಸ್ವಾಮೀಜಿ 160ಕ್ಕೂ ಹೆಚ್ಚು ಮೌಲ್ಯಯುತ ಗ್ರಂಥ ರಚಿಸುವ ಮಠದ ಕೀರ್ತಿಯನ್ನು ಅಚ್ಚಳಿಯದಂತೆ ಮಾಡಿದ್ದಾರೆ.1969 ಜ. 31ರಲ್ಲಿ ಇಂದಿನ ಡಾ. ಅನ್ನದಾನೀಶ್ವರ ಸ್ವಾಮೀಜಿ ಶ್ರೀಮಠದ ಹತ್ತನೇಯ ಪೀಠಾಧಿಪತಿಯಾಗಿ ಅಧಿಕಾರ ವಹಿಸಿಕೊಂಡರು. ಅವರು ಬಂದ ನಂತರ ಮಠದ ಹಿಂದಿನ ಸಾಧನೆಗಳಿಗೆ ಜೀವಂತಿಕೆ ತಂದಿದ್ದಾರೆ. ಎಲ್ಲ ವರ್ಗದ ಬಡವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಸಾದ ನಿಲಯ ಪ್ರಾರಂಭಿಸಿ ಅವರ ಬದುಕಿಗೆ ಆಶ್ರಯ ನೀಡುವ ಜತೆಗೆ ಶೈಕ್ಷಣಿಕ ಪ್ರಗತಿಗೂ ಕಾರಣರಾಗಿದ್ದಾರೆ.
ಇಲ್ಲಿನ ಯುವಕ-ಯುವತಿಯರಿಗೆ ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ ಮರಿಚೀಕೆಯಾದ ಕಾಲದಲ್ಲಿ ಅನ್ನದಾನೀಶ್ವರ ಶ್ರೀಗಳು ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಪ್ರಾರಂಭಿಸುವ ಮೂಲಕ ಮುಂಡರಗಿ ಪಟ್ಟಣವೂ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 33ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆ ಪ್ರಾರಂಭಿಸಿ ಗ್ರಾಮೀಣ ಭಾಗದ ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ಮಾಡುತ್ತಾ ಬಂದಿದ್ದು, ಸಾವಿರಾರು ಕುಟುಂಬಗಳಿಗೆ ಆಸರೆಯಾಗಿದ್ದಾರೆ.ಶ್ರೀಗಳು ನಿರಂತರ ಅಧ್ಯಯನ ನಡೆಸುವ ಜತೆಗೆ 160ಕ್ಕೂ ಹೆಚ್ಚು ಕೃತಿ ರಚಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಅನ್ನದಾನೀಶ್ವರ ಗ್ರಂಥಮಾಲೆ ಪ್ರಾರಂಭಿಸಿ ಅದರಿಂದ 300ಕ್ಕೂ ಹೆಚ್ಚು ಕೃತಿ ಪ್ರಕಟಿಸಿದ್ದಾರೆ. ಚನ್ನಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಮುಂತಾದ ಶಿವಶರಣ-ಶರಣೆಯರ ಕುರಿತು ರಾಜ್ಯ ಮಟ್ಟದ ಶರಣ ವಿಚಾರ ಸಂಕಿರಣ ನಡೆಸಿದ್ದಾರೆ. ಶ್ರೀಮಠದ ಯಾತ್ರಾ ಮಹೋತ್ಸವದಲ್ಲಿ ಬಡವರ, ಹಿಂದುಳಿದವರ ಸಹಾಯಕ್ಕಾಗಿ ಉಚಿತ ಸಾಮೂಹಿಕ ವಿವಾಹ, ಆರೋಗ್ಯ ತಪಾಸಣೆ, ನೇತ್ರ ಚಿಕಿತ್ಸಾ ಶಿಬಿರ, ರೇಷ್ಮೆ-ಕೃಷಿ ಅಭಿವೃದ್ಧಿಯ ಪ್ರಾತ್ಯಕ್ಷಿಕೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಬ್ಬ ಸಾಧಕರಿಗೆ ಅನ್ನದಾನೀಶ್ವರ ಪ್ರತಿಷ್ಠಾನ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.
ಶ್ರೀಮಠದಿಂದ ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಅನ್ನದಾನೀಶ್ವರ ಶರಣ ಸಾಹಿತ್ಯ ಮತ್ತು ಸಂಸ್ಕೖತಿ ಅಧ್ಯಯನ ಪೀಠ ಪ್ರಾರಂಭಿಸಿ ₹27.50 ಲಕ್ಷ ಠೇವಣಿ ಇಟ್ಟಿದ್ದಾರೆ. ಕೋವಿಡ್ 19 ಸಂದರ್ಭದಲ್ಲಿ ಶ್ರೀಮಠದಿಂದ ಸರ್ಕಾರಕ್ಕೆ ₹ 2 ಲಕ್ಷ ದೇಣಿಗೆ ನೀಡಿದ್ದಾರೆ. ಅಲ್ಲದೇ ನೆರೆ, ಭೂಕಂಪದ, ಅತಿವೃಷ್ಟಿ, ಅನಾವೃಷ್ಠಿ ಸೇರಿದಂತೆ ನಾಡಿನಲ್ಲಿ ಯಾವುದೇ ತೊಂದರೆ ಸಂಭವಿಸಿದಾಗ ಶ್ರೀಮಠದಿಂದ ತನು, ಮನ, ಧನ ಸೇರಿದಂತೆ ಎಲ್ಲ ರೀತಿಯ ಸಹಾಯ, ಸಹಕಾರ ಮಾಡಿದ್ದಾರೆ. ಮುಂಡರಗಿ ತಾಲೂಕು ಪತ್ರಕರ್ತರ ಸಂಘಕ್ಕೆ ತಾಲೂಕು ಪತ್ರಕರ್ತರಿಗೆ ಪ್ರಶಸ್ತಿ ನೀಡುವುದಕ್ಕಾಗಿ ಅನ್ನದಾನೀಶ್ವರ ಮಾಧ್ಯಮ ಪ್ರಶಸ್ತಿಗಾಗಿ, ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗಾಗಿ ತಲಾ ₹1 ಲಕ್ಷ ಠೇವಣಿ ಮಾಡಿದ್ದಾರೆ.ಜ. ನಾಡೋಜ ಅನ್ನದಾನೀಶ್ವರ ಮಹಾ ಸ್ವಾಮೀಜಿಯವರ ಸೇವೆ ಮೆಚ್ಚಿ ಇವರಿಗೆ ಅಲಹಾಬಾದ್ ವಿಶ್ವವಿದ್ಯಾಲಯ ಹಿಂದಿ ಸಾಹಿತ್ಯ ವಿಶಾರದ ಹಾಗೂ ಸಾಹಿತ್ಯ ರತ್ನ ಪ್ರಶಸ್ತಿ, ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯಿಕ ಸೇವೆ ಗುರುತಿಸಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ 2005ರಲ್ಲಿ ಗೌರವ ಡಾಕ್ಟರೆಟ್ ನೀಡಿ ಗೌರವಿಸಿದೆ. 2013ರಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾಲಯ ನಾಡೋಜ ಪದವಿ ನೀಡಿ ಗೌರವಿಸಿದೆ. ಅಲ್ಲದೇ ವಿವಿಧ ಸಂಘ-ಸಂಸ್ಥೆಗಳಿಂದ ಅನೇಕ ಪ್ರಶಸ್ತಿ, ಪುರಸ್ಕಾರಗಳು ಶ್ರೀಗಳ ಮುಡಿಗೇರಿವೆ.
ಶ್ರೀಗಳು ಹಾಗೂ ಉತ್ತರಾಧಿಕಾರಿಗಳ ಮಾರ್ಗದರ್ಶನದಲ್ಲಿ ಅನ್ನದಾನೀಶ್ವರ ಯಾತ್ರಾ ಮಹೋತ್ಸವವು ವರ್ಷದಿಂದ ವರ್ಷಕ್ಕೆ ಜನಮನ್ನಣೆ ಪಡೆಯುತ್ತಿದ್ದು, ಸಾಧಕರಿಗೆ ಸನ್ಮಾನ, ಕಲಾ ಪ್ರದರ್ಶನ, ಕೃತಿಗಳ ಲೋಕಾರ್ಪಣೆ, ಸಾಮೂಹಿಕ ವಿವಾಹ, ಭಕ್ತರಿಗೆ ಮಹಾ ಪ್ರಸಾಧ ವ್ಯವಸ್ಥೆ ಮಾಡಲಾಗುತ್ತಿದೆ. ಶ್ರೀಗಳ ಮತ್ತು ಹಿರಿಯರ ಮಾರ್ಗದರ್ಶನದಲ್ಲಿ ಯಾತ್ರಾ ಮಹೋತ್ಸವದ ಪದಾಧಿಕಾರಿಗಳು ಹಾಗೂ ಎಲ್ಲ ಯುವಕ ಮಿತ್ರರು ಅತ್ಯಂತ ಹುಮ್ಮಸ್ಸಿನಿಂದ ತಮ್ಮ ಸೇವೆ ಸಲ್ಲಿಸುತ್ತಿರುವುದರಿಂದ ಯಾತ್ರಾ ಮಹೋತ್ಸವ ಯಶಸ್ವಿಯಾಗುತ್ತಾ ಬಂದಿದೆ ಎಂದು ಯಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ವಿ.ಜೆ. ಹಿರೇಮಠ ತಿಳಿಸಿದ್ದಾರೆ.ಅನ್ನದಾನೀಶ್ವರ ವಿದ್ಯಾ ಸಮಿತಿ ಪ್ರಾರಂಭವಾಗಿ 2024ಕ್ಕೆ 100 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಪ್ರಸ್ತುತ ವರ್ಷ ಅನ್ನದಾನೀಶ್ವರ ವಿದ್ಯಾ ಸಮಿತಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ವರ್ಷಪೂರ್ತಿ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು, ಈಗಾಗಲೇ 80ಕ್ಕೂ ಹೆಚ್ಚು ಕಾರ್ಯಕ್ರಮ ಮಾಡಲಾಗಿದೆ. ಪ್ರಸ್ತುತ ವರ್ಷ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ ಎಂದು ಶ್ರೀ ಜ.ಅ.ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ಹೇಳಿದ್ದಾರೆ.