ಕನ್ನಡಪ್ರಭ ವಾರ್ತೆ ಚಳ್ಳಕೆರೆ

ದೇಶದ ರಕ್ಷಣೆ ಮಾಡುತ್ತಾ ತಮ್ಮ ಜೀವನವನ್ನೇ ಮುಡುಪಾಗಿಡುವ ವೀರಯೋಧರು ನಮ್ಮ ಸಮಾಜಕ್ಕೆ ಮಾದರಿಯಾಗಬೇಕು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚೌಳೂರು ಪ್ರಕಾಶ್ ಹೇಳಿದರು.

ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿಯ ಚೌಳೂರು ಸಮೀಪದ ಜೆಜೆ ಕಾಲೋನಿಯಲ್ಲಿ ಶನಿವಾರ ಭಾರತೀಯ ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ತಾಯ್ನಾಡಿಗೆ ಬಂದಿರುವ ಸೈನಿಕ ಡಿ.ಎಂ.ಯೋಗೇಶ್ ಅವರನ್ನು ಸನ್ಮಾನಿಸಿ ಮಾತನಾಡಿದರು.

ಬದಲಾದ ಕಾಲಘಟ್ಟದಲ್ಲಿ ದೇಶಾಭಿಮಾನದ ಪ್ರಜ್ಞೆ ಯುವ ಜನತೆಯಲ್ಲಿ ಕಡಿಮೆಯಾಗುತ್ತಿದೆ. ಬರೀ ಭಾವನಾತ್ಮಕವಾಗಿ ದೇಶಪ್ರೇಮವನ್ನು ತೆಗೆದುಕೊಂಡರೆ ಸಾಲದು. ಬದಲಾಗಿ ತ್ಯಾಗ, ಬಲಿದಾನ, ಸೇವೆ, ಪ್ರಾಮಾಣಿಕತೆ ದೇಶಪ್ರೇಮವನ್ನು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದರು.

ಪ್ರಸ್ತುತ ಕಾಲಘಟ್ಟದಲ್ಲಿ ಓದುವ ವಿದ್ಯಾರ್ಥಿಗಳು ಡಾಕ್ಟರ್, ಎಂಜಿನಿಯರ್ ಆಗುವ ಕಡೆಗೆ ತಮ್ಮ ಆಲೋಚನೆಗಳನ್ನು ಹರಿಯ ಬಿಡುತ್ತಾರೆ‌. ಬದಲಾಗಿ ದೇಶ ರಕ್ಷಣೆ ಮಾಡುವ ಯೋಧರಾಗುವ ಕಡೆಗೆ ಮನಸ್ಸು ಮಾಡಬೇಕಿದೆ ಎಂದರು.


ಕುಗ್ರಾಮ ಖಂಡೇನಹಳ್ಳಿ ಗ್ರಾಮದ ಬಡ ಕುಟುಂಬದಲ್ಲಿ ಹುಟ್ಟಿದ ಯೋಗೇಶ್ ದೇಶ ಸೇವೆಯಲ್ಲಿ ಸಾರ್ಥಕ ಬದುಕು ಕಂಡಿದ್ದಾರೆ. ಅವರ ಸೇವಾ ಮೌಲ್ಯತೆಯನ್ನು ಸಮಾಜ ಗುರುತಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಸದಸ್ಯೆ ಶ್ರೀದೇವಿ ಪ್ರಕಾಶ್, ಲಿಂಗಪ್ಪ, ಡಿ.ಟಿ.ಶ್ರೀನಿವಾಸ್, ಶಿಕ್ಷಕ ಜೆ.ಎಂ. ವೆಂಕಟೇಶ್, ದಸಂಸ ಜಿಲ್ಲಾಧ್ಯಕ್ಷ ಎಚ್. ಮಂಜುನಾಥ್, ಎಂ.ಎನ್.ರಂಗಸ್ವಾಮಿ, ಕುಮಾರ್ ಇದ್ದರು.