ಚಿಮ್ಮಲಗಿ ಅಶ್ರಯ ಕಾಲೋನಿ ನಿವಾಸಿಗಳ ಬದುಕು ಅತಂತ್ರ!

| Published : Sep 30 2025, 01:00 AM IST

ಚಿಮ್ಮಲಗಿ ಅಶ್ರಯ ಕಾಲೋನಿ ನಿವಾಸಿಗಳ ಬದುಕು ಅತಂತ್ರ!
Share this Article
  • FB
  • TW
  • Linkdin
  • Email

ಸಾರಾಂಶ

ಸತತ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಮಂಗಳಗುಡ್ಡ ಗ್ರಾಪಂ ಚಿಮ್ಮಲಗಿ ಗ್ರಾಮದ ದಲಿತರ ಕಾಲನಿ ಸಂಪೂರ್ಣ ನೀರಿನಲ್ಲಿದೆ

ಡಾ. ಸಿ.ಎಂ. ಜೋಶಿ

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಸತತ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಮಂಗಳಗುಡ್ಡ ಗ್ರಾಪಂ ಚಿಮ್ಮಲಗಿ ಗ್ರಾಮದ ದಲಿತರ ಕಾಲನಿ ಸಂಪೂರ್ಣ ನೀರಿನಲ್ಲಿದ್ದು, ಅಧಿಕಾರಿಗಳಿಂದ ಯಾವುದೇ ಸಹಾಯ ಸಿಗದೇ ಅಲ್ಲಿನ ದಲಿತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.

2009ರಲ್ಲಿ ಮಲಪ್ರಭಾ ಪ್ರವಾಹ ಬಂದಾಗ ನದಿ ದಡದ ಮೇಲಿರುವ ಚಿಮ್ಮಲಗಿ ಸಂಪೂರ್ಣ ಜಲಾವೃತವಾಗಿತ್ತು. ಆಗ ದಲಿತ ಕಾಲೋನಿಯನ್ನು ಬೇರೊಂದು ಸ್ಥಳಕ್ಕೆ ಸ್ಥಳಾಂತರಿಸಿ ಹೊಸ ಕಾಲೋನಿ ಮಾಡಿಕೊಡಲಾಗಿತ್ತು. ಅದರ ನಿರ್ಮಾಣ ಅವೈಜ್ಞಾನಿಕವಾಗಿದ್ದು, ಕಾಲೋನಿಗೆ ಸುರಕ್ಷತೆ ಇಲ್ಲ. ಸದ್ಯ ಅಲ್ಲಿಯೂ ಮನೆಗಳು ಜಲಾವೃತವಾಗುತ್ತಿವೆ ಎಂದು ಅಲ್ಲಿನ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಸುರಕ್ಷಿತ ಸ್ಥಳವೆಂದು ಸ್ಥಳಾಂತರಿಸಿದ ಮೇಲೂ ಅನೇಕ ಬಾರಿ ಮಳೆಗೆ ಮನೆಗಳು ಜಲಾವೃತವಾಗಿವೆ. ಪ್ರತಿವರ್ಷ ಪಿಡಿಓ, ಇಓ ಮತ್ತು ಜಿಲ್ಲಾಧಿಕಾರಿಗಳಿಗೆ ಶಾಶ್ವತ ಪರಿಹರಕ್ಕೆ ಮನವಿ ಕೊಡುತ್ತಲೇ ಇದ್ದೇವೆ. ಅದಕ್ಕೆ ತಕ್ಷಣ ಸ್ಪಂದಿಸಿದ ಅಧಿಕಾರಿಗಳು ಸ್ಥಳಕ್ಕೆ ಬಂದು ಫೋಟೋ ತೆಗೆದುಕೊಂಡು ಹೋಗುತ್ತಾರೆಯೇ ವಿನಃ ಯಾವುದೇ ಶಾಶ್ವ ತ ಪರಿಹಾರ ಕಲ್ಪಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ನಮ್ಮ ಮಕ್ಕಳು ದುಡಿಯಲು ಬೇರೆ ಊರುಗಳಿಗೆ ಹೋದರೆ ಒಂದೆರಡು ದಿನ ಬರುವುದೇ ಇಲ್ಲ. ಇಂತಹ ಸಂದರ್ಭದಲ್ಲಿ ಮಳೆಯಾಗಿ ಮನೆಗಳು ಜಲಾವೃತವಾದರೆ ಮುಪ್ಪಾವಸ್ತೆಯಲ್ಲಿರುವ ನಮ್ಮನ್ನು ಕಾಪಾಡುವವರು ಯಾರು ಎಂದು ವೃದ್ಧ ಮಹಿಳೆ ಕಣ್ಣಲ್ಲಿ ನೀರು ತಂದು ಹೇಳಿದ್ದು ಕರುಳು ಚುರುಕ್ ಎನ್ನುವಂತಿತ್ತು. ಕಾಲೋನಿಗೆ ಚರಂಡಿ ವ್ಯವಸ್ಥೆ ಇಲ್ಲ, ಸಿಸಿ ರಸ್ತೆ ಇಲ್ಲ, ಸುಮಾರು 20 ಮನೆಗಳಿಗೆ ಶೌಚಾಲಯಗಳಿಲ್ಲ. ಮಳೆಗಾಲದಲ್ಲಿ ಮಹಿಳೆ, ವೃದ್ಧರ, ಮಕ್ಕಳ ಗೋಳು ಕೇಳುವವರೇ ಇಲ್ಲ ಎನ್ನುತ್ತಾರೆ ಕಾಲೋನಿಯ ಮಹಿಳೆಯರು. ಮನೆಗಳ ಪಕ್ಕ ಮಳೆಗಾಲದಲ್ಲಿ ಸುಮಾರು 6-7 ಅಡಿ ನೀರು ನಿಲ್ಲುತ್ತದೆ ಅದನ್ನೂ ಹೊರಕಳಿಸಲು ಮಾರ್ಗವಿಲ್ಲ. ಭಯದ ವಾತಾವರಣದಲ್ಲಿ ಬದುಕವಂತಾಗಿದೆ ಎಂದು ಕಾಲೋನಿಯ ದಲಿತರು ಆತಂಕ ವ್ಯಕ್ತಪಡಿಸಿದರು.

ಇಂತಹ ವಾತಾವರಣದಲ್ಲಿ ಭಯದಲ್ಲೇ ಬದುಕು ಸಾಗಿಸುವಂತಾಗಿದೆ. ಮಕ್ಕಳು, ವೃದ್ಧರು, ಅನಾರೋಗ್ಯ ಪೀಡಿತರೂ ಸಂಕಷ್ಟದಿಂದ ನರಳುವಂತಾಗಿದೆ ಎಂದು ಮಲ್ಲಪ್ಪ ಹನುಮವ್ವ ಮಾದರ, ಮಂಗಳಪ್ಪ ನಾಗವ್ವ ಮಾದರ, ಸಿದ್ದಪ್ಪ ಹನುಮಪ್ಪ ಮಾದರ, ಮಹಾದೇವಪ್ಪ ಹನುಮವ್ವ ಮಾದರ, ಬಾಲಪ್ಪ ಹನುಮವ್ವ ಮಾದರ, ರಮೇಶ ಯಲ್ಲಪ್ಪ ಮಾದರ, ಯಮನಪ್ಪ ಫಕೀರಪ್ಪ ಮಾದರ ಅಳಲು ತೋಡಿಕೊಂಡರು.

ಶಿವಪ್ಪನ ಗುಡ್ಡದಿಂದ ಹರಿದುಬರುವ ನೀರು ನಮ್ಮ ಕಾಲೋನಿಗೆ ಹರಿದು ಬಂದು ಸೇರುತ್ತದೆ. ಇದರಿಂದ ಮನೆಗಳು ಪ್ರತಿವರ್ಷ ಜಲಾವೃತವಾಗುತ್ತವೆ. ನಮ್ಮ ಗೋಳು ಕೇಳುವವರೇ ಇಲ್ಲ. ಮಲ್ಲಪ್ಪ ಹನಮವ್ವ ಮಾದರ ಚಿಮ್ಮಲಗಿ

2 ದಿನಗಳಿಂದ ಮನೆಯಲ್ಲಿ ನೀರು ನಿಂತಿದ್ದು, ಭಯದಲ್ಲೇ ದಿನದೂಡುತ್ತಿದ್ದೇವೆ. ಕಾಳಜಿ ಕೇಂದ್ರವನ್ನೂ ತೆರೆದಿಲ್ಲ. ಸುರಕ್ಷಿತ ಸ್ಥಳಕ್ಕೂ ನಮ್ಮನ್ನು ಸ್ತಳಾಂತರಿಸಿಲ್ಲ. ಯಾವಾಗ ಏನಾಗುವುದೋ ಎಂಬ ಆತಂಕ ಕಾಡುತ್ತಿದೆ ಎಂದು ಮಂಗಳಪ್ಪ ನಾಗವ್ವ ಮಾದರ ಅಳಲು ತೋಡಿಕೊಂಡಿದ್ದಾರೆ.