ಸಾರಾಂಶ
ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದಾಗಿ ಹೇಳಿ ಬೇದರಿಕೆ ಹಾಕಿದ್ದ ಪರಿಣಾಮ ಲಾಡ್ಜ್ ಮ್ಯಾನೇಜರ ಲಾಡ್ಜ್ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ನಿಪ್ಪಾಣಿ ನಗರದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದಾಗಿ ಹೇಳಿ ಬೇದರಿಕೆ ಹಾಕಿದ್ದ ಪರಿಣಾಮ ಲಾಡ್ಜ್ ಮ್ಯಾನೇಜರ ಲಾಡ್ಜ್ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ನಿಪ್ಪಾಣಿ ನಗರದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನಿಪ್ಪಾಣಿ ಭೀಮನಗರದ ಕಿರಣ ಗಣಪತಿ ಕಾಂಬಳೆ (40) ಮೃತ ವ್ಯಕ್ತಿಯಾಗಿದ್ದು, ಬೆಳಗಾವಿ ತಾಲೂಕಿನ ಗೋಡಿಹಾಳ ಗ್ರಾಮದ ಬಾಳಪ್ಪ ಬಸವಂತ ಗುಡಗೇನಟ್ಟಿ (28), ಬೆಳಗಾವಿ ವೈಭವ ನಗರದ ನಿತೇಶ ಶ್ಯಾಮ ಕಿತ್ತೂರ (29) ಬಂಧಿತ ಆರೋಪಿಗಳು. ಮಾಧ್ಯಮ ವರದಿಗಾರ ಎಂದು ಹೇಳಿಕೊಂಡಿದ್ದ ಮೂಡಲಗಿ ತಾಲೂಕಿನ ಬೈರನಹಟ್ಟಿ ಗ್ರಾಮದ ಜಾನ್ ಮಾರುತಿ ಕರೆಪ್ಪಗೋಳ (35) ಪರಾರಿಯಾಗಿದ್ದು ಈತನ ಪತ್ತೆಗೆ ಕಾರ್ಯ ಮುಂದುವರೆಸಿದ್ದಾರೆ. ನಿಪ್ಪಾಣಿ ನಗರದಲ್ಲಿರುವ ಗೋಲ್ಡನ್ ಸ್ಟಾರ್ ಲಾಡ್ಜ್ ಗೆ ತೆರಳಿದ ಆರೋಪಿಗಳಿಬ್ಬರು ಲಾಡ್ಜ್ ಮ್ಯಾನೇಜರ್ ಆಗಿದ್ದ ಕಿರಣ ಕಾಂಬಳೆಯನ್ನು ಭೇಟಿ ಮಾಡಿ, ನಿಮ್ಮ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಿರಿ. ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಮಾಡಿಸುವುದರ ಜತೆಗೆ ಪೊಲೀಸ್‌ರಿಂದ ದಾಳಿ ನಡೆಸಿ, ಜೈಲಿಗೆ ಕಳುಹಿಸುತ್ತೇವೆ. ಸಾಯುವವರೆಗೆ ಜೈಲಿನಿಂದ ಹೊರೆಗೆ ಬರದಂತೆ ಮಾಡಿಸುತ್ತೇವೆ ಎಂದು ಬೇದರಿಕೆ ಹಾಕಿದ್ದಾರೆ. ಬಳಿಕ ಈ ರೀತಿ ಆಗಬಾರದು ಎಂದರೆ ನಮಗೆ ನೀವು ಎನಾದರೂ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇದನ್ನು ಕಂಡು ಹೋಟೆಲ್ ಮಾಲೀಕ ಸಂಜಯ ಮಾಳಿ, ಇವರಿಬ್ಬರೊಂದಿಗೆ ಮಾತನಾಡಿ, ನಮ್ಮ ಲಾಡ್ಜ್‌ನಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿಲ್ಲ ಎಂದು ತಿಳಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಲಾಡ್ಜ್‌ನಲ್ಲಿರುವ ಲೆಡ್ಜರ್ ಬುಕ್ ಕೊಡಿ ಪರಿಶೀಲನೆ ಮಾಡುತ್ತೇವೆ ಎಂದು ವಾದ ಮಾಡಿದ್ದಾರೆ. ಈ ವೇಳೆ ಸಂಜಯ ಮಾಳಿ, ಈ ರೀತಿ ಲೆಡ್ಜರ್‌ಗಳನ್ನು ಪರಿಶೀಲನೆ ಮಾಡಲು ಯಾವುದೇ ಹಕ್ಕು ತಮಗಿಲ್ಲ ಎಂದು ತಿಳಿಸಿದ್ದಾರೆ. ಆದರೂ ಸುಮ್ಮನಾಗದ ಆರೋಪಿಗಳು ವಿಡಿಯೋ ಮಾಡಲು ಮುಂದಾಗುತ್ತಿದಂತೆ ಭಯಭೀತಗೊಂಡ ಲಾಡ್ಜ್ ಮ್ಯಾನೇಜರ್ ಕಿರಣ ಕಾಂಬಳೆ ಲಾಡ್ಜ್‌ನ ಮೇಲಿನ ಮಹಡಿಗೆ ಓಡಿ ಹೋಗಿ, ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ತಕ್ಷಣ ಸ್ಥಳೀಯರು ಕರ್ನಾಟಕ ಯುವಸೇನಾ ಜಿಲ್ಲಾಧ್ಯಕ್ಷ ಎಂದು ಹೇಳಿಕೊಂಡಿದ್ದ ಬಾಳಪ್ಪ ಗುಡಗೇನಟ್ಟಿಯನ್ನು ಹಿಡಿದಿದ್ದಾರೆ. ಈ ವೇಳೆ ನಿತೇಶ್ ಕಿತ್ತೂರು ಕಾರ ಚಲಾಯಿಸಿಕೊಂಡು ಪರಾರಿಯಾಗಿದ್ದನು. ಈ ಕುರಿತು ಲಾಡ್ಜ್ ಮಾಲೀಕ ಸಂಜಯ ಮಾಳಿ ನಿಪ್ಪಾಣಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಹಂತಕರ ಪತ್ತೆಗೆ ಬಲೆ ಬಿಸಿದ್ದರು. ಪೊಲೀಸರು ಬಿಸಿದ ಬಲೆಗೆ ಘಟನೆ ನಡೆದ ನಡೆದ ಕೆಲವೇ ಗಂಟೆಗಳಲ್ಲಿ ಸಾವಿಗೆ ಕಾರಣರಾದವರು ಬಿದ್ದಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಕೆ ಮಾಡಿದ್ದ ಎರಡು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ವೇಣುಗೋಪಾಲ ಮಾರ್ಗದರ್ಶನದಲ್ಲಿ ಚಿಕ್ಕೋಡಿ ಡಿವೈಎಸ್‌ಪಿ ಗೋಪಾಲಕೃಷ್ಣ ಗೌಡರ, ನಿಪ್ಪಾಣಿ ವೃತ್ತ ನಿರೀಕ್ಷಕ ಬಿ.ಎಸ್.ತಳವಾರ, ಪಿಎಸೈ ಉಮಾದೇವಿ ನೇತೃತ್ವದಲ್ಲಿ ಎಎಸೈ ಎಂ.ಜಿ.ಮುಜಾವರ, ಸಿಬ್ಬಂದಿ ಆರ್.ಜಿ.ದಿವಟೆ, ಯು.ಆರ್.ಮಾಳಗೆ, ಕೆ.ಕೆ.ಬೀರಣ್ಣವರ, ಎಸ್.ಎನ್.ಅಸ್ಕಿ ಸೇರಿದಂತೆ ಇತರರು ಈ ಪ್ರರಕಣ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.